ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಪತ್ರಕರ್ತ ಮತ್ತು ದೆಹಲಿ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಡಾ. ಝಫರುಲ್-ಇಸ್ಲಾಮ್ ಖಾನ್ ಅವರು ಸಂಕಲಿಸಿ ಮತ್ತು ಸಂಪಾದಿಸಿರುವ 744 ಪುಟಗಳ ‘ಮಾಬ್ ಲಿಂಚಿಂಗ್ ಇನ್ ಇಂಡಿಯಾ: ಎ ರೆಕಾರ್ಡ್ – 2014–2024’ (Mob Lynching in India: A Record — 2014–2024) ಕೃತಿಯನ್ನು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಮಂಗಳವಾರ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಬಿಡುಗಡೆ ಮಾಡಿತು. ಇದರೊಂದಿಗೆ ಭಾರತದಲ್ಲಿ ಗುಂಪು ಹಿಂಸಾಚಾರ ಮತ್ತು ಲಿಂಚಿಂಗ್ನ ಒಂದು ದಶಕದ ಕುರಿತು ಚರ್ಚೆ ನಡೆಯಿತು.
ಫಾರೋಸ್ ಮೀಡಿಯಾ ಪ್ರಕಟಿಸಿರುವ ಈ ಪುಸ್ತಕವು, 2014 ಮತ್ತು 2024 ರ ನಡುವೆ ದಾಖಲಾದ 1,743 ಲಿಂಚಿಂಗ್ ಘಟನೆಗಳನ್ನು ದಾಖಲಿಸಿದೆ. ಪ್ರಕಾಶಕರ ಪ್ರಕಾರ, ಈ ಸಂಕಲನವು ಮುಖ್ಯವಾಗಿ ದೆಹಲಿ ಮೂಲದ ಪತ್ರಿಕೆಗಳು ಮತ್ತು ಸುದ್ದಿ ಪೋರ್ಟಲ್ಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿದೆ.

ಸೆಪ್ಟೆಂಬರ್ 22 ರಂದು ಮಧ್ಯಾಹ್ನ 3 ಗಂಟೆಗೆ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಿಕ್ಷಣ ತಜ್ಞರು, ಮಾನವ ಹಕ್ಕುಗಳ ಕಾರ್ಯಕರ್ತರು, ವಕೀಲರು, ಪತ್ರಕರ್ತರು ಮತ್ತು ಸಂಶೋಧಕರು ಒಂದೇ ವೇದಿಕೆಯಲ್ಲಿ ಸೇರಿ, ಗುಂಪು ಹಿಂಸಾಚಾರದ ಸ್ವರೂಪ ಮತ್ತು ಅಂತಹ ಘಟನೆಗಳನ್ನು ದಾಖಲಿಸುವುದರ ಪ್ರಾಮುಖ್ಯತೆಯ ಬಗ್ಗೆ ಚರ್ಚಿಸಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದವರಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷ ಮಲಿಕ್ ಮೊಹ್ತಾಸಿಮ್ ಖಾನ್, ಶಿಕ್ಷಣ ತಜ್ಞರು ಮತ್ತು ಕಾರ್ಯಕರ್ತರಾದ ಪ್ರೊ. ಅಪೂರ್ವಾನಂದ್ ಹಾಗೂ ಹರ್ಷ್ ಮಂದರ್, ಸಾಮಾಜಿಕ ಕಾರ್ಯಕರ್ತೆ ಸೈದಾ ಹಮೀದ್, ಪತ್ರಕರ್ತ ಶಾಹೀನ್ ನಜರ್ ಮತ್ತು ಡಾ. ಜಫರುಲ್-ಇಸ್ಲಾಮ್ ಖಾನ್ ಸೇರಿದ್ದಾರೆ. ಪತ್ರಕರ್ತ ಪ್ರಶಾಂತ್ ಟಂಡನ್ ಚರ್ಚೆಯನ್ನು ನಿರ್ವಹಿಸಿದರು.
‘ದಾಖಲೀಕರಣವು ಮುಖ್ಯವಾಗಿದೆ’
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪ್ರೊ. ಅಪೂರ್ವಾನಂದ್, ತಮ್ಮ ಅಭಿಪ್ರಾಯದಲ್ಲಿ ಮಾಬ್ ಲಿಂಚಿಂಗ್ ಎರಡು ಉದ್ದೇಶಗಳನ್ನು ಪೂರೈಸುತ್ತದೆ ಎಂದು ಹೇಳಿದರು: ಮುಸ್ಲಿಮರಲ್ಲಿ ಭಯವನ್ನು ಸೃಷ್ಟಿಸುವುದು ಮತ್ತು ಹಿಂದುತ್ವ ರಾಜಕೀಯವು ರಾಜಕೀಯ ನೆಲೆಯನ್ನು ಗಳಿಸಬಹುದಾದ ಪರಿಸ್ಥಿತಿಗಳನ್ನು ಸೃಷ್ಟಿಸುವುದು.
ಪುಸ್ತಕದಲ್ಲಿ ದಾಖಲಾಗಿರುವ ಘಟನೆಗಳು ಮಾನವ ಜೀವನಕ್ಕೆ ನೀಡಲಾಗುವ ಮೌಲ್ಯದ ಬಗ್ಗೆ ಮೂಲಭೂತವಾದ ಪ್ರಶ್ನೆಯನ್ನು ಹುಟ್ಟುಹಾಕಿವೆ ಎಂದು ಮಲಿಕ್ ಮೊಹ್ತಾಸಿಮ್ ಖಾನ್ ಹೇಳಿದರು. ಸಮಾಜವನ್ನು ರಕ್ಷಿಸುವ ಅಥವಾ ಸುಧಾರಿಸುವ ಹೆಸರಿನಲ್ಲಿ ನಡೆಸಲಾಗುವ ಹಿಂಸೆಯು ಅಂತಿಮವಾಗಿ ಅದೇ ಸಮಾಜವನ್ನು ದುರ್ಬಳಕೆ ಮಾಡುತ್ತದೆ ಎಂದು ಅವರು ವಾದಿಸಿದರು.
ಕಳೆದ ದಶಕದಲ್ಲಿ ದೇಶವು ಹಾದುಹೋದ ಅವಧಿಯ ದಾಖಲೆಯಾಗಿ ಈ ಪುಸ್ತಕವನ್ನು ಹರ್ಷ್ ಮಂದರ್ ಬಣ್ಣಿಸಿದರು. ಲಿಂಚಿಂಗ್ ಎನ್ನುವುದು ಕೇವಲ ವ್ಯಕ್ತಿಯೊಬ್ಬರ ಮೇಲಿನ ದೈಹಿಕ ಹಿಂಸೆಯಲ್ಲ, ಬದಲಿಗೆ ಸಮಾಜಕ್ಕೆ ಒಂದು ಸಂದೇಶವನ್ನು ಕಳುಹಿಸುವ ಉದ್ದೇಶದ ಸಾರ್ವಜನಿಕ ಕೃತ್ಯವಾಗಿದೆ ಎಂದು ಅವರು ಹೇಳಿದರು.
“ಲಿಂಚಿಂಗ್ ಎನ್ನುವುದು ಪ್ರದರ್ಶನಾತ್ಮಕ ಹಿಂಸೆಯಾಗಿದೆ” ಎಂದು ಹರ್ಷ ಮಂದರ್ ವಾದಿಸಿದರು. ಅಂತಹ ಹತ್ಯೆಗಳ ಸಾರ್ವಜನಿಕ ಸ್ವಭಾವವು, ಜವಾಬ್ದಾರರಾದವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದರು.
ಶಾಹೀನ್ ನಝರ್ ಅವರ ಪ್ರಕಾರ, ಸಾರ್ವಜನಿಕ ನೆನಪಿನಿಂದ ಮರೆಯಾಗಬಹುದಾದ ಘಟನೆಗಳ ದಾಖಲೆಯನ್ನು ಸಂರಕ್ಷಿಸುವುದರಲ್ಲಿ ಈ ಪುಸ್ತಕದ ಮೌಲ್ಯವಿದೆ.
“ಅಂತಹ ಘಟನೆಗಳನ್ನು ನಾವು ಮರೆಯಬಾರದು ಎಂಬ ಕಾರಣಕ್ಕಾಗಿ ದಾಖಲೀಕರಣವು ಮುಖ್ಯವಾಗಿದೆ” ಎಂದು ಚರ್ಚೆಯ ಸಮಯದಲ್ಲಿ ನಝರ್ ಹೇಳಿದರು. ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಚರ್ಚೆಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹೊಣೆಗಾರಿಕೆ ಮತ್ತು ನ್ಯಾಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ವರ್ಷಗಳ ದಾಖಲೀಕರಣವನ್ನು ಸ್ಮರಿಸಿದ ಖಾನ್
ಈ ಸಂಕಲನವನ್ನು ಸಂಕಲಿಸಿ ಮತ್ತು ಸಂಪಾದಿಸಿರುವ ಡಾ. ಜಫರುಲ್-ಇಸ್ಲಾಮ್ ಖಾನ್, ಈ ಕೆಲಸವನ್ನು ಪೂರ್ಣಗೊಳಿಸಲು ಆರು ರಿಂದ ಏಳು ವರ್ಷಗಳು ಹಿಡಿದಿವೆ ಎಂದು ಹೇಳಿದರು.
ಅನೇಕ ಪ್ರಮುಖ ಘಟನೆಗಳು ಸರಿಯಾಗಿ ದಾಖಲಾಗದ ಕಾರಣ ಜನ ಮನಸ್ಸಿಂದ ಮರೆತುಹೋಗಿವೆ ಎಂದು ಅವರು ಹೇಳಿದರು. ಭಾರತೀಯ ಸಮಾಜದಲ್ಲಿ ಲಿಂಚಿಂಗ್ ಹೊಸ ವಿದ್ಯಮಾನವಲ್ಲವಾದರೂ, ಇತ್ತೀಚಿನ ವರ್ಷಗಳಲ್ಲಿ ಅದು ಹೆಚ್ಚು ಸಹಜಗೊಂಡಿದೆ(normalised) ಎಂದು ತಾವೇ ನಂಬಿರುವುದಾಗಿ ಅವರು ತಿಳಿಸಿದರು.
ಈ ಪುಸ್ತಕವು ಮಾಬ್ ಲಿಂಚಿಂಗ್ ಅನ್ನು ಸಮೂಹ ಹಿಂಸಾಚಾರದ ನಿರಂತರ ರೂಪವೆಂದು ವಿವರಿಸುತ್ತದೆ ಮತ್ತು ವಿವಿಧ ಶಂಕಿತ ಕಾರಣಗಳನ್ನು ಒಳಗೊಂಡ ಘಟನೆಗಳನ್ನು ದಾಖಲಿಸುತ್ತದೆ. ಗೋಮಾಂಸ ಹೊಂದಿರುವ ಅಥವಾ ಗೋಹತ್ಯೆಯ ಶಂಕೆ, ಧರ್ಮದ ಗುರುತು, ಬೀದಿ ಗಲಾಟೆಗಳು (ವೈಯಕ್ತಿಕ ಜಗಳ), ವೈಯಕ್ತಿಕ ವಿವಾದಗಳು, ಅಂತರ್-ಜಾತಿ ಸಂಬಂಧಗಳು ಮತ್ತು ಇತರ ಸಂಘರ್ಷಗಳಿಗೆ ಸಂಬಂಧಿಸಿದ ಪ್ರಕರಣಗಳು ಇದರ ದತ್ತಾಂಶದಲ್ಲಿ ಸೇರಿವೆ.
ಪುಸ್ತಕದ ಪ್ರಕಟಿತ ವಿವರಣೆಯ ಪ್ರಕಾರ, ಸಂಶೋಧಕರು ಪರಿಶೀಲನೆಗೆ ಒಳಪಟ್ಟ ದಶಕದಲ್ಲಿ 1,743 ಘಟನೆಗಳನ್ನು ದಾಖಲಿಸಿದ್ದಾರೆ. ಲಭ್ಯವಿರುವ ಸುದ್ದಿ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ದಾಖಲೆಗಳ ಆಧಾರದ ಮೇಲೆ ತನ್ನ ದತ್ತಾಂಶವು ನಿರ್ಮಿತವಾಗಿದೆ ಎಂದು ಈ ಸಂಕಲನವು ಒಪ್ಪಿಕೊಳ್ಳುತ್ತದೆ, ಆದ್ದರಿಂದ ಇದು ಸಂಪೂರ್ಣವಾಗಿದೆ ಎಂದೇನಿಲ್ಲ.
‘ನ್ಯಾಯವಿಲ್ಲದೆ, ಯಾವುದೇ ಸಮಾಜವು ಉಳಿಯಲು ಸಾಧ್ಯವಿಲ್ಲ’
ಹಿಂಸಾಚಾರವನ್ನು ದಾಖಲಿಸುವಲ್ಲಿ ಪತ್ರಕರ್ತರು ಮತ್ತು ನಾಗರಿಕ ಸಮಾಜದ ಪಾತ್ರದ ಕಡೆಗೂ ಚರ್ಚೆಯು ಮುಖ ಮಾಡಿತು.
ಅಂತಹ ದಾಖಲೆಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಕೇವಲ ಸಂಶೋಧಕರು ಮತ್ತು ಹಕ್ಕುಗಳ ಸಂಘಟನೆಗಳಿಗೆ ಮಾತ್ರ ಬಿಡಬಾರದು ಎಂದು ನಝರ್ ಹೇಳಿದರು. ಸಮಾಜವು ಈ ಸಂಶೋಧನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಹಿಂಸಾಚಾರಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸೈದಾ ಹಮೀದ್ ಅವರು ತಮ್ಮ ತಾತಂದಿರು ನುಡಿದ ಮಾತುಗಳನ್ನು ಸ್ಮರಿಸುತ್ತಾ, ವಿಭಿನ್ನ ಧರ್ಮಗಳ ಜನರು ಪರಸ್ಪರರನ್ನು ಹೊರಗಿನವರಂತೆ ಅಲ್ಲದೆ ಸಹ ನಾಗರಿಕರಂತೆ ಪರಿಗಣಿಸಬೇಕಾದ ಅಗತ್ಯತೆಯ ಬಗ್ಗೆ ಮಾತನಾಡಿದರು. ಇಲ್ಲದಿದ್ದರೆ ಕಾಣಿಸದೆ ಹೋಗಬಹುದಾದ ವಾಸ್ತವತೆಗಳನ್ನು ವರದಿ ಮಾಡುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
2014-2024ರ ಅವಧಿಯಲ್ಲಿ ಭಾರತದಲ್ಲಿ ನಡೆದ ಸಮೂಹ ಹಿಂಸಾಚಾರದ ಮಾದರಿಯನ್ನು ಪರಿಶೀಲಿಸುವ ಹಲವಾರು ವರದಿಗಳ ಪ್ರಕಟಣೆಯ ನಂತರ ಈ ಪುಸ್ತಕ ಬಿಡುಗಡೆಗೊಂಡಿದೆ. ಗೋಮಾಂಸ ಹೊಂದಿರುವ ಅಥವಾ ಗೋಹತ್ಯೆಯ ಶಂಕೆಗೆ ಸಂಬಂಧಿಸಿದ 53 ಘಟನೆಗಳು, ಧರ್ಮದ ಗುರುತಿಗೆ ಸಂಬಂಧಿಸಿದ 89 ಘಟನೆಗಳು ಹಾಗೂ ಬೀದಿ ಗಲಾಟೆಗೆ ಅಥವಾ ಸಮೂಹ ಹಿಂಸಾಚಾರಕ್ಕೆ ತಿರುಗಿದ ಜಗಳಗಳಿಂದ ಉದ್ಭವಿಸಿದ 571 ಪ್ರಕರಣಗಳ ದಾಖಲೀಕರಣವನ್ನು ಈ ಸಂಪುಟದ ಇತ್ತೀಚಿನ ವರದಿಗಳು ಎತ್ತಿ ತೋರಿಸಿವೆ.
ಫಾರೋಸ್ ಮೀಡಿಯಾ ಪ್ರಕಟಿಸಿರುವ ‘ಮಾಬ್ ಲಿಂಚಿಂಗ್ ಇನ್ ಇಂಡಿಯಾ: ಎ ರೆಕಾರ್ಡ್ – 2014–2024’ (Mob Lynching in India: A Record — 2014–2024) ಸಂಪುಟವು ಪ್ರಸ್ತುತ ಪ್ರಕಾಶಕರ ಪಟ್ಟಿಯಲ್ಲಿ 900 ರೂ.ಗೆ ಲಭ್ಯವಿದೆ.













