ಈಗ ಕುವೈತ್‌ನಲ್ಲೂ ಸ್ವದೇಶಿ ಮಂತ್ರ: ಸರ್ಕಾರಿ ಹುದ್ದೆಗಳಿಂದ ವಿದೇಶಿಯರನ್ನು ಹೊರಗಟ್ಟಲು ಒಂದು ವರ್ಷದ ಗಡುವು

0
266

ಸನ್ಮಾರ್ಗ ವಾರ್ತೆ

ಕುವೈತ್ ಸಿಟಿ: ಕುವೈಟ್‌ನಲ್ಲಿ ವಲಸಿಗರನ್ನು ಸರ್ಕಾರಿ ಉದ್ಯೋಗದಿಂದ ತೆಗೆದು ಹಾಕಿ ಸ್ವದೇಶಿಯರನ್ನು ನೇಮಿಸುವ ಮನವಿಯನ್ನು ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಶಾಸಕಾಂಗ ಸಮಿತಿ ಅನುಮೋದಿಸಿದೆ ಎಂದು ಸಂಸದ ಅಬ್ದುಲ್ ಕರೀಮ್ ಅಲ್ ಕಂದಾರಿ ತಿಳಿಸಿದ್ದಾರೆ. ಅಂಗೀಕರಿಸಲಾದ ಕಾನೂನನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಗೆ ಕಳುಹಿಸಲಾಗಿದೆ ಎಂದೂ ಸಂಸದರು ತಿಳಿಸಿದ್ದಾರೆ.

ಸಾಧ್ಯವಾದರೆ ಒಂದು ವರ್ಷದೊಳಗೆ ಸರ್ಕಾರಿ ಉದ್ಯೋಗದಲ್ಲಿರುವ ಎಲ್ಲಾ ವಿದೇಶಿಯರನ್ನು ಕೈಬಿಟ್ಟು ಆ ಸ್ಥಾನಕ್ಕೆ ಸ್ವದೇಶಿಯರನ್ನು ನೇಮಿಸಬೇಕೆಂದು ಕಾನೂನು ಹೇಳುತ್ತದೆ.

ಸದ್ಯಕ್ಕೆ ವಿದೇಶಿಯರು ಮಾಡುತ್ತಿರುವ ಉದ್ಯೋಗಕ್ಕೆ ಸೂಕ್ತರಾದ ಸ್ವದೇಶೀ ಸದಸ್ಯರನ್ನು ಪತ್ತೆಹಚ್ಚಲು ಕಷ್ಟವಾಗುವುದಾದರೆ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಬಹುದು ಎಂದು ಅಸೆಂಬ್ಲಿಯಲ್ಲಿ ಅಂಗೀಕಾರ ಪಡೆದ ಬಿಲ್‌ನಲ್ಲಿ ಹೇಳಲಾಗಿದೆ.

ಪ್ರಸ್ತುತ ಕುವೈಟ್‌ನಲ್ಲಿ ನಾಲ್ಕು ಲಕ್ಷಕ್ಕಿಂತ ಅಧಿಕ ಸರ್ಕಾರಿ ಉದ್ಯೋಗಿಗಳಿದ್ದು, ಇವರಲ್ಲಿ 80 ಶೇಕಡಾ ಮಂದಿ ಕುವೈತಿಗರೇ ಇದ್ದಾರೆ. ಇನ್ನು ಸ್ವದೇಶಿಯರು ಯಾರೂ ನಿರ್ದಿಷ್ಟ ಸರಕಾರಿ ಸೇವೆಗೆ ಸೇರಲು ಇಚ್ಚಿಸದಿದ್ದರೆ ಅಂತಹ ಹುದ್ದೆಗಳಲ್ಲಿ ವಿದೇಶಿಯರನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಬಹುದು ಎಂದು ಹೇಳಲಾಗಿದೆ. ಈ ನಿಯಮ ಜಾರಿಗೆ ಬಂದರೆ ಭಾರತೀಯರು ಸೇರಿದಂತೆ ಸಾಕಷ್ಟು ವಿದೇಶಿಯರಿಗೆ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.