ಆರೋಗ್ಯ: ನಿಮ್ಮ ಪುಟ್ಟ ಮಕ್ಕಳಿಗೆ ತಿನ್ನಲು ಬಿಸ್ಕೆಟ್ ಏಕೆ ನೀಡಬಾರದು ಗೊತ್ತಾ..?

0
752

ಸನ್ಮಾರ್ಗ ವಾರ್ತೆ

ಇತ್ತೀಚಿನ ಮಕ್ಕಳು ಜಂಕ್ ಫುಡ್, ಪ್ಯಾಕೆಟ್ ಫುಡ್‌ಗಳ ದಾಸರಾಗುತ್ತಿದ್ದಾರೆ. ಅದರಲ್ಲೂ ಅನೇಕ ಮಕ್ಕಳಿಗೆ ಬಿಸ್ಕೆಟ್ ಅಂದ್ರೆ ಬಲು ಇಷ್ಟ. ಆದರೆ, ಆರೋಗ್ಯಕ್ಕೆ ಬಿಸ್ಕೆಟ್ ಹಾನಿಕಾರಕ ಎಂದು ವೈದ್ಯರು ಹೇಳುತ್ತಾರೆ.

ಬಿಸ್ಕೆಟ್ ತಯಾರಿಕೆಯಲ್ಲಿ ಉಪ್ಪು ಮತ್ತು ಹಾಲಿನ ಮಿಶ್ರಣವಿರುತ್ತದೆ. ಆಯುರ್ವೇದದ ಪ್ರಕಾರ ಇದು ವಿರುದ್ಧಾಹಾರ. ಅಲ್ಲದೆ ಕೆಲವು ಬಿಸ್ಕೆಟ್‌ಗಳು ಹೆಚ್ಚು ಉಪ್ಪಿನಿಂದ ಕೂಡಿರುತ್ತದೆ. ಇಂತಹ ಆಹಾರ ತಿನ್ನುವುದರಿಂದ ಸಣ್ಣ ವಯಸ್ಸಿನಲ್ಲಿಯೇ ರಕ್ತದೊತ್ತಡದಂತಹ ಸಮಸ್ಯೆ ಕಾಡಬಹುದು. ಬಿಸ್ಕೆಟ್ ತಯಾರಿಕೆಯಲ್ಲಿ ಸಾಮಾನ್ಯವಾಗಿ ಬೇಕಿಂಗ್ ಪೌಡರ್ ಬಳಸುತ್ತಾರೆ. ಪ್ರತಿನಿತ್ಯ ಇದನ್ನು ಸೇವನೆ ಮಾಡುವುದರಿಂದ ಹೊಟ್ಟೆಯ ಸಮಸ್ಯೆಗಳು ಎದುರಾಗಬಹುದು. ಕರುಳಿನ ಆರೋಗ್ಯಕ್ಕೆ ಇದು ಹಾನಿಕಾರಕ.

ಹೆಚ್ಚು ಬಿಸ್ಕೆಟ್ ತಿನ್ನುವುದರಿಂದ ಬೇಕಿಂಗ್ ಪೌಡರ್‌ನ ಪರಿಣಾಮದಿಂದಾಗಿ ಬೇಧಿ, ಹೊಟ್ಟೆ ನೋವಿನಂತಹ ಅನಾರೋಗ್ಯ ಕಾಡಬಹುದು. ನಿರಂತರವಾಗಿ ಬಿಸ್ಕೆಟ್ ತಿನ್ನುವುದರಿಂದ ಮಕ್ಕಳಲ್ಲಿ ಅಜೀರ್ಣತೆಯ ಸಮಸ್ಯೆ ಕೂಡಾ ಕಾಡಬಹುದು. ಯಾಕೆಂದರೆ ಕೆಲವು ಬಿಸ್ಕೆಟ್‌ನಲ್ಲಿ ಮೈದಾ ಬಳಕೆ ಮಾಡಲಾಗುತ್ತದೆ. ಹೀಗಾಗಿ ಸರಿಯಾಗಿ ಜೀರ್ಣವಾಗುವುದಿಲ್ಲ.

ಬಿಸ್ಕೆಟ್ ಒಣ ಆಹಾರವಾಗಿರುವುದರಿಂದ ಕರುಳಿನಲ್ಲಿ ಜೀರ್ಣವಾಗದೇ ಉಳಿದು ಬಿಡಬಹುದು. ಇದರಿಂದ ಹೊಟ್ಟೆನೋವು, ಮಲಬದ್ಧತೆ ಕಾಡುತ್ತದೆ. ಅನೇಕ ಮಕ್ಕಳಲ್ಲಿ ಮಲವಿಸರ್ಜನೆ ಸರಿಯಾಗಿ ಆಗದಿರುವುದಕ್ಕೆ ಪದೇಪದೇ ಬಿಸ್ಕೆಟ್ ತಿನ್ನುವುದೂ ಕಾರಣವಾಗಿದೆ.

ಇದರಿಂದ ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ಕೂಡ ಮಕ್ಕಳನ್ನು ಕಾಡುತ್ತವೆ. ಆದ್ದರಿಂದ ಬಿಸ್ಕೆಟ್ ತಿನ್ನಿಸುವಾಗ ಎಚ್ಚರಿಕೆ ವಹಿಸಿ ಎಂದು ಪೋಷಕರಿಗೆ ವೈದ್ಯರು ಸಲಹೆ ನೀಡುತ್ತಾರೆ.