ದೆಹಲಿಯ ಕೃಷಿ ಭವನ ಸಂಕೀರ್ಣದಲ್ಲಿರುವ ಶತಮಾನಕ್ಕೂ ಹಳೆಯ ಮಸೀದಿ ಧ್ವಂಸಗೊಳಿಸಲು ಕೇಂದ್ರ ಸರ್ಕಾರ ಮುಂದು

0
161

ಸನ್ಮಾರ್ಗ ವಾರ್ತೆ

ನವದೆಹಲಿ: ರಾಷ್ಟ್ರ ರಾಜಧಾನಿಯ ಆಡಳಿತಾತ್ಮಕ ಕೇಂದ್ರ ಭಾಗವಾದ ಕೃಷಿ ಭವನ ಸಂಕೀರ್ಣದಲ್ಲಿರುವ ಶತಮಾನಕ್ಕೂ ಹಳೆಯ ಕದೀಮಿ ಮಸೀದಿಯನ್ನು (Qadimi Masjid) ಧ್ವಂಸಗೊಳಿಸಲು ಯೋಜಿಸಿರುವುದಾಗಿ ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಸರ್ಕಾರಿ ಕಚೇರಿಗಳನ್ನು ಹೊಂದಿರುವ ಸಂಕೀರ್ಣದೊಳಗೆ ಶಾಶ್ವತ ಧಾರ್ಮಿಕ ರಚನೆಯನ್ನು ಕಾಯ್ದುಕೊಳ್ಳುವುದು “ಸಂಕೀರ್ಣದ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗಿದೆ ಮತ್ತು ಅದಕ್ಕೆ ಅನುಮತಿ ನೀಡಲಾಗುವುದಿಲ್ಲ” ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯ ಭಾಗವಾಗಿ ಕಾಮನ್ ಸೆಂಟ್ರಲ್ ಸೆಕ್ರೆಟರಿಯೇಟ್ (ಸಾಮಾನ್ಯ ಕೇಂದ್ರ ಸಚಿವಾಲಯ) ಕಟ್ಟಡಗಳನ್ನು ನಿರ್ಮಿಸಲು ಕೃಷಿ ಭವನ ಮತ್ತು ಸಮೀಪದ ಶಾಸ್ತ್ರಿ ಭವನವನ್ನು ಕೆಡವಲಾಗುತ್ತಿರುವುದರಿಂದ ಮಸೀದಿಯನ್ನು ತೆರವುಗೊಳಿಸುವ ಅಗತ್ಯವಿದೆ ಎಂದು ಕೇಂದ್ರವು ನ್ಯಾಯಾಲಯದಲ್ಲಿ ಅಧಿಕೃತವಾಗಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.

‘ಸರ್ಕಾರಿ ಸಂಕೀರ್ಣಗಳಲ್ಲಿ ಪ್ರಾರ್ಥನಾ ಸ್ಥಳಗಳು ಇರಬಾರದು ಎಂದು ಯಾವ ನಿಯಮ ಹೇಳುತ್ತದೆ?’: ಕೇಂದ್ರಕ್ಕೆ ಹೈಕೋರ್ಟ್ ಪ್ರಶ್ನೆ

ಕೇಂದ್ರ ಸರ್ಕಾರದ ಈ ಹೊಸ ನಿಲುವಿನ ನಂತರ, ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಧಾರ್ಮಿಕ ರಚನೆಗಳನ್ನು ನಿರ್ಮಿಸಬಾರದು ಎಂದು ತಿಳಿಸುವ ಯಾವುದೇ ನಿಯಮಗಳಿವೆಯೇ ಎಂದು ನ್ಯಾಯಮೂರ್ತಿ ಅನಿಶ್ ದಯಾಳ್ ಪ್ರಶ್ನಿಸಿದರು. “ಯಾವುದೇ ನಂಬಿಕೆಯ ಬದಲಿಗೆ ಭೂಮಿಯನ್ನು ನೀಡಬಾರದು ಎಂದು ನೀವು ಹೇಳುತ್ತಿದ್ದೀರಾ? ಯಾವುದೇ ಸರ್ಕಾರಿ ಜಮೀನಿನಲ್ಲಿ ಯಾವುದೇ ಸಮುದಾಯಕ್ಕೆ ಪ್ರಾರ್ಥನಾ ಸ್ಥಳವನ್ನು ನೀಡಬಾರದು ಎಂದು ಹೇಳುವ ಯಾವುದೇ ನಿಯಮಗಳು ಅಥವಾ ನಿಬಂಧನೆಗಳು (Regulations) ಇವೆಯೇ? ಕೇಂದ್ರವು ತಳೆದಿರುವ ಈ ನಿಲುವಿನ ನಿಖರವಾದ ಕಾನೂನು ಅಂಶವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ,” ಎಂದು ನ್ಯಾಯಾಲಯವು ಕೇಂದ್ರ ಸರ್ಕಾರದ ವಕೀಲರಿಗೆ ತಿಳಿಸಿತು. ಕೇಂದ್ರದ ಈ ಹೊಸ ಅಫಿಡವಿಟ್‌ಗೆ ಪ್ರತಿಕ್ರಿಯಿಸಲು ಮಸೀದಿ ಆಡಳಿತ ಸಮಿತಿಗೆ ಮುಂದಿನ ವಿಚಾರಣೆಯ ದಿನಾಂಕವಾದ ನವೆಂಬರ್ 23 ರವರೆಗೆ ನ್ಯಾಯಾಲಯ ಸಮಯ ಮಂಜೂರು ಮಾಡಿದೆ.

ಹಿಂದೆ, ಡಿಸೆಂಬರ್ 2021 ರಲ್ಲಿ ಯೋಜನೆಯಿಂದ ಮಸೀದಿಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ದೆಹಲಿ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ‘ಈ ನಿರ್ಮಾಣಗಳಿಗೆ ಏನೂ ಆಗುವುದಿಲ್ಲ ಮತ್ತು ಯೋಜನೆ ಬಹಳ ದೀರ್ಘವಾದದ್ದು’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಆದರೆ ಕೇಂದ್ರ ಸರ್ಕಾರವು ಈಗ ಈ ನಿಲುವಿನಿಂದ ಸಂಪೂರ್ಣವಾಗಿ ಹಿಂದೆ ಸರಿದಿದೆ.

ಕೇಂದ್ರದ ಅಫಿಡವಿಟ್: ‘ಭೂಮಿಯು ಜಾತ್ಯತೀತವಾಗಿದೆ, ಬದಲಾಗಿ ಭೂಮಿ ನೀಡಲು ಸಾಧ್ಯವಿಲ್ಲ’

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಭೂಮಿ ಮತ್ತು ಅಭಿವೃದ್ಧಿ ಕಚೇರಿಯು ಸಲ್ಲಿಸಿದ ವರದಿಯು ಮಸೀದಿಯ ಧ್ವಂಸವನ್ನು ಸಮರ್ಥಿಸಿಕೊಂಡಿದೆ. ಈ ಕೆಳಗಿನ ಕಾರಣಗಳನ್ನು ಸಮರ್ಥನೆಗೆ ನೀಡಲಾಗಿದೆ: ಹೊಸ ಸಚಿವಾಲಯದ ಕಟ್ಟಡಗಳ ನಿರ್ಮಾಣವು ಅತ್ಯಂತ ಮಹತ್ವದ ಸಾರ್ವಜನಿಕ ಯೋಜನೆಯಾಗಿದೆ. ಮಸೀದಿಯು ಸದರಿ ನಿರ್ಮಾಣ ಸ್ಥಳದಲ್ಲಿರುವುದರಿಂದ ಅದನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕಾಗಿದೆ. ಕೃಷಿ ಭವನ ಮತ್ತು ಅದಕ್ಕೆ ಸಂಬಂಧಿಸಿದ ಸಂಕೀರ್ಣಗಳು ಆಡಳಿತ ಮತ್ತು ಸಾರ್ವಜನಿಕ ಸೇವೆಗಾಗಿ ಮಾತ್ರ ಬಳಸಲಾಗುವ ಜಾತ್ಯತೀತ ಸ್ಥಳಗಳಾಗಿವೆ. ಇಂತಹ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಧರ್ಮಕ್ಕೆ ಶಾಶ್ವತ ಹಕ್ಕುಗಳನ್ನು ನೀಡುವುದು ಸೆಂಟ್ರಲ್ ವಿಸ್ಟಾ ಮಾಸ್ಟರ್ ಪ್ಲಾನ್‌ಗೆ ವಿರುದ್ಧವಾಗಿದೆ. ಇಡೀ ಜಮೀನು ಸರ್ಕಾರದ ಒಡೆತನದಲ್ಲಿರುವುದರಿಂದ, ಮಸೀದಿಯ ಬದಲಾಗಿ ಕೃಷಿ ಭವನದ ಆವರಣದಲ್ಲಿ ಅಥವಾ ಸಚಿವಾಲಯದ ಸಂಕೀರ್ಣದಲ್ಲಿ ಜಾಗವನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ. ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಂಡಿಯಾ ಗೇಟ್ ಬಳಿ ಸಬ್ತಾ ಗಂಜ್ ಶಾಹಿ ಮಸೀದಿ ಅಸ್ತಿತ್ವದಲ್ಲಿದ್ದು, ಪ್ರಾರ್ಥನೆಗಾಗಿ ಜನರು ಅದನ್ನು ಬಳಸಬಹುದು ಎಂದು ಕೇಂದ್ರವು ವಾದಿಸಿದೆ.

ನೌಕರರ ಅವಲಂಬನೆಯ ಕುರಿತು ವಕ್ಫ್ ಸಮಿತಿ ಕಳವಳ

ಕದೀಮಿ ಮಸೀದಿಯು 1940 ರ ಒಪ್ಪಂದದ ಅಡಿಯಲ್ಲಿ ಪ್ರಾರ್ಥನೆಯ ಉದ್ದೇಶಕ್ಕಾಗಿ ಜುಮಾ ಮಸೀದಿ ನಿರ್ವಹಣಾ ಸಮಿತಿಗೆ ಹಸ್ತಾಂತರಿಸಲ್ಪಟ್ಟ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ, ಇದು ಕೃಷಿ ಭವನ ಮತ್ತು ಸುತ್ತಮುತ್ತಲಿನ ಇತರ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೂರಾರು ಅಧಿಕಾರಿಗಳು ಮತ್ತು ನೌಕರರಿಗೆ ಪ್ರಮುಖ ಪ್ರಾರ್ಥನಾ ಕೇಂದ್ರವಾಗಿತ್ತು. ಕಟ್ಟಡ ಟೆಂಡರ್‌ಗಳು ಮತ್ತು ನಕ್ಷೆಗಳಿಂದ ಮಸೀದಿಯ ಸ್ಥಳವನ್ನು ಹೊರಗಿಟ್ಟ ನಂತರ ಸಮಿತಿಯು ನ್ಯಾಯಾಲಯವನ್ನು ಸಂಪರ್ಕಿಸಿದ್ದು, ಮಸೀದಿಯ ಧ್ವಂಸವನ್ನು ತಡೆಯಬೇಕು ಮತ್ತು ಯೋಜನೆ ಮುಂದುವರಿದರೂ ಹತ್ತಿರದಲ್ಲೇ ಪ್ರಾರ್ಥನಾ ಸೌಲಭ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿತ್ತು. ಕೇಂದ್ರದ ಹೊಸ ಅಫಿಡವಿಟ್‌ನೊಂದಿಗೆ, ರಾಜಧಾನಿಯಲ್ಲಿರುವ ಐತಿಹಾಸಿಕ ಪ್ರಾರ್ಥನಾ ಸ್ಥಳವನ್ನು ರಕ್ಷಿಸುವ ವಿಷಯವು ಮತ್ತೊಮ್ಮೆ ಪ್ರಮುಖ ಕಾನೂನು ಮತ್ತು ರಾಜಕೀಯ ಸಮರಕ್ಕೆ ಕಾರಣವಾಗುತ್ತಿದೆ.