ರಷ್ಯಾ-ಉಕ್ರೇನ್ ಯುದ್ಧ ಭೂಮಿಯಲ್ಲಿ ತೆಲಂಗಾಣದ 8 ನಿವಾಸಿಗಳು ಬಂಧಿ; ತಾಯ್ನಾಡಿಗೆ ಕರೆತರಲು ಸರ್ಕಾರಕ್ಕೆ ಮನವಿ

0
98

ಸನ್ಮಾರ್ಗ ವಾರ್ತೆ

ಹೈದರಾಬಾದ್: ಉತ್ತಮ ಕೆಲಸದ ಭರವಸೆ ನೀಡಿ ರಷ್ಯಾಕ್ಕೆ ಕರೆದೊಯ್ದು, ಯುದ್ಧ ಪೀಡಿತ ಪ್ರದೇಶದಲ್ಲಿ ಬಲವಂತವಾಗಿ ಸೇವೆ ಸಲ್ಲಿಸುವಂತೆ ಮಾಡುತ್ತಿರುವ ತೆಲಂಗಾಣ ನಿವಾಸಿಗಳ ಕುಟುಂಬಗಳು ತಮ್ಮವರ ಬಿಡುಗಡೆಗಾಗಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ನೆರವು ಕೋರಿವೆ. ರಷ್ಯಾ-ಉಕ್ರೇನ್ ನಡುವಿನ ಉದ್ವಿಗ್ನ ವಾತಾವರಣದ ನಡುವೆ ತೆಲಂಗಾಣದ ಎಂಟು ನಿವಾಸಿಗಳು ಅಲ್ಲಿ ಸಿಲುಕಿಕೊಂಡಿದ್ದಾರೆ.

ಸಾಲದ ಸುಳಿಯಲ್ಲಿ ಸಿಲುಕಿ, ತಮ್ಮ ಕುಟುಂಬಗಳನ್ನು ಸಂಪರ್ಕಿಸಲು ಸಾಧ್ಯವಾಗದ ಯುವಕರು ತಾಯ್ನಾಡಿಗೆ ಮರಳಲು ತುರ್ತು ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಂಗಲ ಕೋಟೇಶ್ವರ ರಾವ್, ಗುಜ್ಜು ಜಗಬಂಧು ಮತ್ತು ಮಾಣಿಕಲ ನರೇಶ್ ಸೇರಿದಂತೆ ಮೂವರನ್ನು ಗುರುತಿಸಿದೆ. ಆದಾಗ್ಯೂ, ಅವರ ಕುಟುಂಬಗಳಿಂದ ನಿರ್ದಿಷ್ಟ ಅರ್ಜಿಗಳು ಲಭ್ಯವಾಗಿಲ್ಲ.

ಒಂಬತ್ತು ತಿಂಗಳ ಗರ್ಭಿಣಿ ದೊಮ್ಮಟಿ ರಕ್ಷಿತಾ ಅವರು ತಮ್ಮ ಪತಿ ದೊಮ್ಮಟಿ ಕಿಶನ್ ಅವರನ್ನು ರಷ್ಯಾದಿಂದ ವಾಪಸ್ ಕರೆತರಲು ತೆಲಂಗಾಣ ಸರ್ಕಾರವನ್ನು ಸಂಪರ್ಕಿಸಿದ್ದಾರೆ. ಸಂಕ್ಷಿಪ್ತ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಕಿಶನ್ ಅವರು ತಮ್ಮ ಕಠಿಣ ಪರಿಸ್ಥಿತಿಯನ್ನು ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ. “ಇಲ್ಲಿ ನಿರಂತರವಾಗಿ ಬಾಂಬ್‌ಗಳು ಬೀಳುತ್ತಿವೆ. ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಾಗಿದೆ. ದಯವಿಟ್ಟು ನಾನು ಭಾರತಕ್ಕೆ ಮರಳಲು ಸಹಾಯ ಮಾಡಿ,” ಎಂದು ಅವರ ಸಹೋದರ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಿದ ಇಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ಟೋಬರ್ 30 ರಂದುಅರ್ಜಿ ಸಲ್ಲಿಸಿದ ತೆಲಂಗಾಣದ ಐವರು ನಿವಾಸಿಗಳಲ್ಲಿ ಕಿಶನ್ ಕೂಡ ಸೇರಿದ್ದಾರೆ. ರಾಜಣ್ಣ ಸಿರಿಸಿಲ್ಲಾದ ದೊಮ್ಮಟಿ ಕಿಶನ್, ಕೋರುಟ್ಲಾದ ರಾಜಕುಮಾರ್, ವಾರಂಗಲ್‌ನ ಪೋತರಾಜು ವಿಜಯ್ ಕೃಷ್ಣ, ಕಾಮರೆಡ್ಡಿಯ ಸುಪ್ಪನ್ ಸ್ವಾಮಿ ಮತ್ತು ಕರೀಂನಗರದ ಇಡವೆಲ್ಲಿ ಕನುಕಯ್ಯ ಅವರ ಕುಟುಂಬಗಳು ಸರ್ಕಾರವನ್ನು ಸಂಪರ್ಕಿಸಿವೆ.

ಈ ಘಟನೆಗಳು ಭಾರಿ ಪ್ರಮಾಣದ ನೇಮಕಾತಿ ವೆಚ್ಚ ವಸೂಲಿ, ದೊಡ್ಡ ಮಟ್ಟದ ಸಾಲ, ವೇತನ ಇಲ್ಲದಿರುವುದು ಮತ್ತು ಜೀವ ರಕ್ಷಣೆಯ ಕುರಿತಾದ ಆತಂಕಗಳನ್ನು ಬೆಟ್ಟುಮಾಡುತ್ತವೆ.