ವಿಚ್ಛೇದಿತ ಮುಸ್ಲಿಂ ಮಹಿಳೆಗೂ ಜೀವನಾಂಶ ಪಡೆಯುವ ಹಕ್ಕಿದೆ: ಸುಪ್ರೀಂ ಕೋರ್ಟ್

0
170

ಸನ್ಮಾರ್ಗ ವಾರ್ತೆ

ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.

ಜೀವನಾಂಶ ಪಡೆಯುವ ಕಾನೂನು ಎಲ್ಲಾ ವಿವಾಹಿತ ಮಹಿಳೆಯರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಅನ್ವಯಿಸುತ್ತದೆ. ಜೀವನಾಂಶವು ದಾನವಲ್ಲ, ಅದು ವಿವಾಹಿತ ಮಹಿಳೆಯರ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಸಿಆರ್‌ಪಿಸಿ ಅಡಿಯಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ಪಾವತಿಸುವ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ವಜಾಗೊಳಿಸಿದೆ.

“ಗೃಹಿಣಿಯಾಗಿರುವ ತನ್ನ ಪತ್ನಿಯು ಭಾವನಾತ್ಮಕವಾಗಿ ಮತ್ತು ಇತರ ರೀತಿಯಲ್ಲಿ ಅವಲಂಬಿತಳಾಗಿದ್ದಾಳೆ ಎಂಬುವುದರ ಪ್ರಜ್ಞೆ ಕೆಲವು ಗಂಡಂದಿರಿಗೆ ಇರುವುದಿಲ್ಲ. ಭಾರತದ ಪುರುಷರು ಗೃಹಿಣಿಯ ಪಾತ್ರ ಮತ್ತು ತ್ಯಾಗವನ್ನು ಗುರುತಿಸಬೇಕಾದ ಸಮಯ ಬಂದಿದೆ” ಎಂದು ಹೇಳಿದರು.

ವಿಚ್ಛೇದಿತ ಪತ್ನಿಗೆ ಮಾಸಿಕ ಭತ್ಯೆ ನೀಡುವಂತೆ ಕೌಟುಂಬಿಕ ನ್ಯಾಯಾಲಯವು ಮೊಹಮ್ಮದ್ ಅಬ್ದುಲ್ ಸಮದ್‌ಗೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಬ್ದುಲ್ ಸಮದ್‌ ಅರ್ಜಿ ಸಲ್ಲಿಸಿದ್ದರು. ಆದರೆ ತೆಲಂಗಾಣ ಹೈಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿತ್ತು.

ಅದಾದ ಬಳಿಕ ಮೊಹಮ್ಮದ್ ಅಬ್ದುಲ್ ಸಮದ್‌ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.