ಸನ್ಮಾರ್ಗ ವಾರ್ತೆ
ಮಂಗಳೂರು: ಸದ್ಭಾವನಾ ವೇದಿಕೆ ಜಪ್ಪು ವರ್ತುಲದ ವತಿಯಿಂದ 8ನೇ ವರ್ಷದ “ದೀಪಾವಳಿ, ಈದ್ ಹಾಗೂ ಕ್ರಿಸ್ಮಸ್ ಸೌಹಾರ್ದ ಕೂಟವು ಆದಿತ್ಯವಾರ ಕಾಸಿಯಾ ಚರ್ಚ್ ಸಭಾಂಗಣದಲ್ಲಿ ಜರುಗಿತು.
ನಿವೃತ್ತ-ಮಿಲಿಟರಿ ಅಧಿಕಾರಿಗಳಾದ ಬೆಳ್ಳಾಲ ಗೋಪಿನಾಥ ರಾವ್, ಸಿವಿಲ್ ಇಂಜಿನಿಯರ್ ಮಂಗಳೂರು ಇವರು ಮಾತನಾಡಿ ನಾವು ನಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟು ಮಾನವರಾಗಿ ಬಾಳಬೇಕು, ನಾವು ನಮ್ಮ ಧರ್ಮದ ಯಾವ ಸಿದ್ಧಾಂತದ ಮೇಲೆ ನಿಂತಿದ್ದೇವೆ ಅದೇ ಸಿದ್ಧಾಂತಗಳ ಪ್ರಕಾರ ನಮ್ಮ ಹಬ್ಬಗಳ ಆಚರಣೆಗಳಾಗಬೇಕು: ನಮ್ಮ ದೇಶದಲ್ಲಿ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದು ಸಾರಿದರು.
ಮಂಗಳೂರಿನ ಕರುಣಾಮಯಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿಯಾದ ಶ್ರೀ ಎಲಿಯಾಸ್ ಪೀಟರ್ ಕೊವೆಲ್ಲೂ ಮಾತನಾಡಿ ಭೂಮಿ ಆಕಾಶಗಳಲ್ಲಿ ದೇವನಿಲ್ಲದ ಜಾಗ ಯಾವುದೂ ಇಲ್ಲ, ಏಸು ಕ್ರಿಸ್ತರು ಈ ಲೋಕಕ್ಕೆ ಬಂದು ನಮ್ಮನ್ನು ಪಾಪದಿಂದ ವಿಮೋಚನೆಗೊಳಿಸಲು ಪ್ರಯತ್ನಿಸಿದರು. ಇವತ್ತು ಭೂಮಿಯಲ್ಲಿ ಶಾಂತಿ ಇಲ್ಲ, ಈ ನಿಟ್ಟಿನಲ್ಲಿ ಸದ್ಭಾವನಾ ವೇದಿಕೆಯು ಎಲ್ಲಾ ಧರ್ಮಗಳನ್ನು ಗೌರವಿಸಿ ಸೌಹಾರ್ದತೆಯನ್ನು ಕಾಪಾಡಲು ಪ್ರಯತ್ನಿಸುತ್ತದೆ.
ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಸಿಎ ಮುಹಮ್ಮದ್ ಇಸ್ಹಾಕ್ ಪುತ್ತೂರುರವರು ಮಾತನಾಡಿ ಯಾವ ಧರ್ಮವೂ ಶಾಂತಿಗೆ ಅಡ್ಡ ಬರುವುದಿಲ್ಲ. ಎಲ್ಲಾ ಧರ್ಮಗಳ ಧರ್ಮ ಗ್ರಂಥಗಳಲ್ಲಿ ಸಮಾನವಾದ ಅಂಶಗಳನ್ನು ಕಾಣಲು ಸಾಧ್ಯ. ನಮ್ಮಲ್ಲಿರುವ ಅಹಂಭಾವದಿಂದಾಗಿ ನಮ್ಮ ಸಮಾಜ ಇವತ್ತು ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಸೌಹಾರ್ದತೆಯನ್ನು ಕಾಪಾಡಲು ಸದ್ಭಾವನಾ ವೇದಿಕೆಯು ಎಲ್ಲಾ ಹಬ್ಬಗಳ ಸೌಹಾರ್ದ ಕೂಟಗಳನ್ನು ಆಚರಿಸುತ್ತಿದೆ, ನಾವೆಲ್ಲರೂ ಇದನ್ನು ಪ್ರೋತ್ಸಾಹಿಸಬೇಕಾಗಿದೆ.
ಪ್ರಾರಂಭದಲ್ಲಿ ಮೂರು ಧರ್ಮಗಳ ಪಾರ್ಥನೆ ಹೇಳಲಾಯ್ತು. ವೇದಿಕೆಯ ಅಧ್ಯಕ್ಷರಾದ ಶ್ರೀ ದಿವಾನ್ ಕೇಶವ ಭಟ್ ರವರು ಪ್ರಸ್ತಾವಿಸಿ ಸ್ವಾಗತಿಸಿದರು. ಸದ್ಭಾವನ ವೇದಿಕೆ ಉಪಾಧ್ಯಕ್ಷರಾದ ಶ್ರೀ ಜೇಸನ್ ಪೀಟರ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಒಸ್ವಾಲ್ಡ್ ಪುರ್ತಾಡೊ ರವರನ್ನು ಡಾಕ್ಟರೇಟ್ ಪದವಿ ದೊರಕಿದ ಕಾರಣಕ್ಕಾಗಿ ಸಭೆಯಲ್ಲಿ ಪ್ರಶಂಪಿಸಲಾಯಿತು. ಶ್ರೀ ಸಾಲೆಹ್ ಮುಹಮ್ಮದ್ ಧನ್ಯವಾದವಿತ್ತರು. ಶ್ರೀ ರಹ್ಮತುಲ್ಲಾ ಕಾರ್ಯಕ್ರಮ ನಿರೂಪಿಸಿದರು.



















