ಅನಿವಾಸಿಗಳೇ, ದ್ವೇಷದ ಬರಹದ ಮೊದಲು ನೂರು ಬಾರಿ ಯೋಚಿಸಿ; ನಿಮ್ಮ ನೆರವಿಗೆ ಪ್ರಧಾನಿಯೇನೂ ಬರಲ್ಲ, ರಾಯಭಾರಿ, ಪೋಸ್ಟ್ ಕಾರ್ಡ್ ನೂ ಬರಲ್ಲ; ತೇಜಸ್ವಿ ಸೂರ್ಯ ಟ್ವೀಟ್ ಅರಬ್ ಮಹಿಳೆಯರ ಮೇಲೆ ಆಳ ಗಾಯ ಮಾಡಿದೆ…

0
2753

ಸನ್ಮಾರ್ಗ ವಾರ್ತೆ

ಅಲ್ಮೈಡಾ ಗ್ಲಾಡ್ಸನ್

ಎಮಿರೇಟ್ಸ್ ನಲ್ಲಿ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೊಳಿಯ ಮತ್ತೊಬ್ಬ ಹುಡುಗ ಕೆಲಸ ಕಳೆದುಕೊಂಡು, ಜೈಲು ಪಾಲಾಗುವ ಸ್ಥಿತಿಗೆ ಬಂದಿದ್ದಾನೆ. ಕಳೆದ ಎರಡ್ಮೂರು ವಾರದಿಂದ ಎಷ್ಟು ಬೊಬ್ಬೆ ಹೊಡೆದರೂ ಕೇಳುತ್ತಿಲ್ಲವೆಂದರೆ, ಹೀಗಾಗದೆ ಬೇರೆ ವಿಧಿಯಿಲ್ಲ. ಇಲ್ಲಿರುವವರು, ಇಲ್ಲಿನ ಸ್ಥಳೀರು, ಭಾರತದಲ್ಲಿರುವ ಕೆಲವರು ಇದರ ಬಗ್ಗೆ ಎಚ್ಚರಿಕೆ ಕೊಡುತ್ತಾ ಬಂದರೂ, ಫೇಕ್ ನ್ಯೂಸ್ ಫ್ಯಾಕ್ಟರಿಗಳು, ಪ್ರೊಪಾಂಗಾಡಿಸ್ಟ್ ಗಳು ಏನೂ ಆಗೋಲ್ಲ, ಯಾರೂ ಏನೂ ಕಿಸಿಯೋಕಾಗಲ್ಲ ಎನ್ನುವ ಧಾಟಿಯಲ್ಲಿ ಪೋಸ್ಟರ್ ಅಂಟಿಸಿ, ಭ್ರಮೆಯನ್ನು ಸೃಷ್ಟಿಸುತ್ತಿದ್ದಾರೆ. ಏನಾದರೂ ಆದರೆ ಮೋದಿ ಇದ್ದಾರೆ, ನಾವು ವಿಸ್ವಗುರುಗಳು, ನಮ್ಮ ಪವರ್ ಇಷ್ಟಿದೆ, ಅಷ್ಟಿದೆ ಎಂದೆಲ್ಲಾ ಬೊಗಳೆ ಬೇರೆ.

ಪುನ: ಹೇಳುತ್ತಿದ್ದೇನೆ. ಧರ್ಮದ ಅವಹೇಳನ ಮಾಡಿ ಇಲ್ಲಿ ಕಾನೂನು ಸುಳಿಯೊಳಗೆ ಸಿಲುಕದಿರಿ. ಮೋದಿಯಲ್ಲ, ಯಾರೂ ಏನೂ ಮಾಡಕ್ಕಾಗಲ್ಲ. ಭಾರತೀಯ ದೂತವಾಸ ಕಛೇರಿಗಳು, ರಾಯಭಾರಿಗಳೇ ಖುದ್ದಾಗಿ ಹೇಳಿಕೆ ಕೊಟ್ಟು ಎಚ್ಚರಿಸಿದ್ದಾರೆ. ಪ್ರಧಾನ ಮಂತ್ರಿ ಕೂಡ ಸೂಚ್ಯವಾಗಿ ಟ್ವೀಟ್ ಮಾಡಿದ್ದಾರೆ. ಅಂದರೆ ನಮ್ಮ ಎಚ್ಚರಿಕೆ ಬಳಿಕವೂ ನಿಮಗೆ ತೋಚಿದ್ದನ್ನು ನೀವು ಮಾಡುವುದಾದರೆ ಅದರ ಪರಿಣಾಮಗಳಿಗೆ ನೀವೇ ಹೊಣೆಗಾರರು ಎನ್ನುವುದು ಈ ಅಧಿಕೃತ ಹೇಳಿಕೆಗಳ ಸಾರಾಂಶ. ಇದಾದ ಬಳಿಕವೂ ಧರ್ಮದ ಅವಹೇಳನ ಮಾಡಿ, ಇಲ್ಲಿನವರ ಕೆಂಗಣ್ಣಿಗೆ ಗುರಿಯಾದರೆ ನಮ್ಮ ರಾಯಭಾರ ಕಛೇರಿಗಳೂ, ಪ್ರಧಾನ ಮಂತ್ರಿಗಳೂ ಏನೂ ಮಾಡುವುದಿಲ್ಲ ಯಾಕೆಂದರೆ ಅವರು ಈಗಾಗಲೇ ಎಚ್ಚರಿಕೆ ಕೊಟ್ಟಾಗಿದೆ. ಹತ್ತು-ಹದಿನೈದು ಜನರಿಗೋಸ್ಕರ ತನ್ನ ಅಂತರಾಷ್ಟ್ರೀಯ ಸಂಬಂಧಗಳನ್ನು ಕೆಡಿಸಿಕೊಳ್ಳಲು ಯಾವುದೇ ಸರಕಾರ ತಯಾರಿಲ್ಲ. ಇನ್ನು ನಮ್ಮ ಪ್ರಧಾನಿ ಮಧ್ಯಪ್ರಾಚ್ಯ ರಾಷ್ಟ್ರಗಳೊಡನೆ ಭಾರತದ ಸಂಬಂಧ ವೃದ್ಧಿಗೆ ಅತಿಯಾಗಿ ಒತ್ತು ಕೊಡುತ್ತಾ ಬಂದಿದ್ದಾರೆ. ಇಲ್ಲಿನ ಸರ್ಕಾರಗಳು ಭಾರತದ ಜೊತೆಗೆ ಉತ್ತಮ ಭಾಂಧವ್ಯವನ್ನು ಹೊಂದಿವೆ. ಇಂಥ ಪರಿಸ್ಥಿತಿಯಲ್ಲಿ, ಇಲ್ಲಿನ ಸರ್ಕಾರಗಳ ಎಚ್ಚರಿಕೆ, ಭಾರತೀಯ ದೂತವಾಸ ಕಛೇರಿಗಳ ಎಚ್ಚರಿಕೆ, ರಾಯಭಾರಿಗಳ ಎಚ್ಚರಿಕೆ, ಪ್ರಧಾನಿಗಳ ಎಚ್ಚರಿಕೆ ಎಲ್ಲವನ್ನೂ ಮೀರಿ ನೀವು ಪೋಸ್ಟ್ ಕಾರ್ಡ್, ಸೂಲಿಬೆಲೆ, ಐಟಿ ಸೆಲ್ಲ್ ಮುಂತಾದವರ ವಿಷವನ್ನೇ ಕುಡಿಯುತ್ತೀರಿ ಎಂದರೆ, No one can and will help you.

ಇಲ್ಲಿನ ಒಂದು ದೇಶದ ಸರಕಾರವೇ ಇಸ್ಲಾಮೋಫೋಬಿಯಾದ ವಿರುದ್ದ ಅಧಿಕೃತವಾದ ನಿರ್ಣಯ ತೆಗೆದುಕೊಂಡಿದೆ. ಹಾಗಾಗಿ ಇದು ಎಷ್ಟೊಂದು ಗಂಭೀರವಾದ ವಿಷಯವೆಂದು ಈವಾಗ್ಲಾದರೂ ಅರಿತುಕೊಳ್ಳಿ. ಇದು ಕೇವಲ ಎರಡ್ಮೂರು ತಿಂಗಳ ವಿಷಯ, ತಬ್ಲೀಗಿ, ಕೊರೋನಾದ ವಿಷಯವಲ್ಲ. ಇದು ಅನೇಕ ವರುಷಗಳ ಸಹನೆಯ ಕಟ್ಟೆಯೊಡೆದು ಹೊರಬಂದಿರುವ ಸಿಟ್ಟು. ಇದರ ಆರಂಭ ಕೆಲ ವರುಷಗಳ ಹಿಂದಿನದ್ದು. ಇದಕ್ಕೆ ಮುಂಚೆ ಕೇವಲ ಇಲ್ಲಿನ ಸ್ಥಳೀಯರು ಮಾತ್ರ ಚರ್ಚಿಸುತ್ತಿದ್ದ ಈ ವಿಷಯ ಇವತ್ತು ಇಲ್ಲಿನ ಆಡಳಿತ ವರ್ಗ, ಸರ್ಕಾರಗಳೂ ಮಾತಾಡುವಂತೆ ಮಾಡಿದ್ದು ಸಂಸದ ತೇಜಸ್ವಿ ಸೂರ್ಯರ ಜನಾಂಗೀಯ ಹಾಗೂ ಧಾರ್ಮಿಕ ದ್ವೇಷದಿಂದ ಕೂಡಿದ ಟ್ವೀಟ್. ಎಲ್ಲಾ ಅರಬ್ ಮಹಿಳೆಯರ ಸ್ವಾಭೀಮಾನವನ್ನೇ ಕೆಣಕಿದೆ ಅದು. ತೇಜಸ್ವಿ ಸೂರ್ಯರ ಟ್ವೀಟ್ ಮಾಡಿರುವ ಅನಾಹುತ ಏನೆಂದು ನಿಮಗರ್ಥವಾಗೋಲ್ಲ. ಇಲ್ಲ್ಲಿದ್ದವರ ಒಮ್ಮೆ ಕೇಳಿ ನೋಡಿ. ಅದಾದ ನಂತರ ಇಲ್ಲಿನವರು ಬಹಳ ಕಠಿಣವಾಗಿ ಇಸ್ಲಾಮೋಫೋಬಿಯಾದ ವಿರುದ್ದ ಕಣಕ್ಕಿಳಿದಿದ್ದಾರೆ.

ಇಲ್ಲಿನ ಸ್ಥಳೀಯರು ಮುಂಚಿನಂತಿಲ್ಲ. ಅತ್ಯುನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲೂ ಎಂಜಿನಿಯರ್, ಡಾಕ್ಟರ್ಸ್, ವಿಜ್ಞಾನಿಗಳು, ಸಂಶೋಧಕರು, ವಿದ್ವಾಂಸರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಲ್ಲಿನ ಮಹಿಳೆಯರೂ ದೇಶ-ವಿದೇಶಗಳಲ್ಲಿ ಅತ್ಯುನ್ನತ ಶಿಕ್ಷಣ ಪಡೆದು ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆ, ಇಲ್ಲಿನ ರಾಜಕೀಯದಲ್ಲೂ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸೌದಿಯಂತ ದೇಶದಲ್ಲೇ ಸ್ಥಳೀಯ ಮಹಿಳೆಯರೇ ಮುಂದೆ ನಿಂತು ಅನೇಕ ಬದಲಾವಣೆಗಳನ್ನು ಕಳೆದ ಎರಡ್ಮೂರು ವರುಷಗಳಿಂದ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಸ್ಲಾಮೋಫೋಬಿಯಾದ ವಿರುದ್ದ ದನಿಯೆತ್ತಿರುವ ಟ್ವೀಟ್‍ಗಳ ಹಿಂದಿರುವ ಹೆಸರುಗಳನ್ನು ಒಮ್ಮೆ ನೋಡಿ. ಹೆಚ್ಚಿನವರು ಮಹಿಳೆಯರು. ನಿರರ್ಗಳವಾಗಿ ಇಂಗ್ಲೀಷ್, ಸ್ಪಾನೀಷ್, ಫ್ರೆಂಚ್, ಜರ್ಮನ್ ಭಾಷೆಗಳನ್ನು ಮಾತಾನಾಡಬಲ್ಲವರು. ಆಧುನಿಕ ಶಿಕ್ಷಣ ಹೊಂದಿದವರು. ಹಾಗಾಗಿ ಅವರೇ ಮುಂದೆ ನಿಂತು ತೇಜಸ್ವಿ ಸೂರ್ಯನ ಟ್ವೀಟ್‍ನ ವಿರುದ್ದ ಆರಂಭಿಸಿದ ಅಭಿಯಾನ, ಅಂತರಾಷ್ಟ್ರೀಯ ಕೋರ್ಟ್ ತನಕ ಹೋಗುವ ಹಾದಿಯಲ್ಲಿದೆ. ಹಾಗಾಗಿ ಯಾರೋ ಭಾರತದಲ್ಲಿ ಕುಳಿತು ಉತ್ಪಾದಿಸಿದ ವಿಷವನ್ನು ನಿಮ್ಮ ವಾಲ್‍ಗಳಲ್ಲಿ, ವಾಟ್ಸಾಪ್‍ನಲ್ಲಿ ಹಂಚುವ ಮೊದಲು ಎಚ್ಚರದಿಂದಿರಿ.

ನೀವು, ನಾನು ಇಲ್ಲಿರೋದು ಜೀವನೋಪಾಯ ಹಾಗೂ ಕರಿಯರ್ ಗಾಗಿ. ಇಲ್ಲಿ ನಾವು ಅತಿಥಿಗಳು. ಹಾಗಾಗಿ ಇಲ್ಲಿನ ರಾಜಕೀಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ನಮ್ಮ ಹಸ್ತಕ್ಷೇಪ ಸಲ್ಲ. ಹೇಗೆ ಭಾರತದಲ್ಲಾಗುತ್ತಿರುವ ವಿಷಯಗಳನ್ನು ನಾವು ಅದು ನಮ್ಮ ದೇಶದ ಆಂತರಿಕ ವಿಷಯ, ಇತರ ದೇಶಗಳು ಅದರಲ್ಲಿ ತಲೆಹಾಕಬಾರದೆಂದು ಹೇಳ್ತೀವಲ್ಲಾ, ಹಾಗೆಯೇ ಇಲ್ಲಾಗುತ್ತಿರುವುದೂ, ಇಲ್ಲಿನ ದೇಶಗಳ ಆಂತರಿಕ ವಿಷಯ. ಅದರಲ್ಲಿ ಇತರರು ತಲೆಹಾಕುವುದನ್ನೂ ಅವರೂ ಸಹಿಸರು. ಇದಕ್ಕಿಂತ ಸರಳವಾಗಿ ಹೇಳಲು ನನಗೆ ಬರೋಲ್ಲ. ಮೊನ್ನೆಯಷ್ಟೆ ನನ್ನ ಫೇಸ್‍ಬುಕ್ ಮಿತ್ರನೊಬ್ಬನ ಕುಟುಂಬ ಕೂಡಾ ಪೋಸ್ಟ್ ಕಾರ್ಡ್‍ನ ವಿಷದ ಕಾರಣಕ್ಕೆ ಸಮಸ್ಯೆಗೆ ಸಿಲುಕಿದೆ.

ನಾಲ್ಕು ವರುಷಗಳಿಂದ ಅವನನ್ನು, ಆತನ ವಾಲ್‍ನನ್ನು ನೋಡುತ್ತೇನೆ. ಎಂದೂ ಯಾವ ಧರ್ಮಕ್ಕೂ ಅವಹೇಳನ ಮಾಡದೇ, ತಾನಾಯಿತು, ತನ್ನ ಕೆಲಸವಾಯಿತೆಂದು ಕೆಲಸ ಮಾಡುತ್ತಿರುವ ಕವಿ ಆತ. ಆತನ ವಾಲ್‍ನಲ್ಲಿ ಇರೋದು ಕವಿತೆಗಳೇ. ಅದರಲ್ಲೂ ಯಾರ ದೂಷಣೆ, ಅವಹೇಳನ ಇಲ್ಲ. ಆದರೆ ಆತನ ಪತ್ನಿ ಪೋಸ್ಟ್ ಕಾರ್ಡ್‍ನ ವಿಷವನ್ನು ಒಮ್ಮೆ ಅಚಾತುರ್ಯದಿಂದ ನುಂಗಿದ ಪರಿಣಾಮ ಇಡೀ ಪರಿವಾರ ಸಮಸ್ಯೆಗೀಡಾಗಿದೆ. ಆಕೆಯೂ ಎಂದೂ ಈ ರೀತಿ ವರ್ತಿಸಿದ್ದು, ಬರೆದಿರುವುದನ್ನು ನಾನು ನೋಡಿಲ್ಲ. ಸಂಗೀತ, ಕವಿತೆಗಳಲ್ಲಿ ಅವರಷ್ಟಕ್ಕೆ ಇರುವ ಪರಿವಾರ, ಯಾವುದೋ ಒಂದು ಘಳಿಗೆಯಲ್ಲಿ, ಎಂದೋ ಮೆಟ್ಟಿದ ಪೋಸ್ಟ್ ಕಾರ್ಡ್ ವಿಷ ಇಂದು ಅವರನ್ನು ಕಠಿಣ ಸಮಸ್ಯೆಗೆ ಸಿಲುಕಿದೆ. ನಾಲ್ಕು ವರುಷ ಹಾಗೂ ಎಂಟು ತಿಂಗಳ ಇಬ್ಬರು ಸಣ್ಣ ಮಕ್ಕಳಿರುವ ಕುಟುಂಬ. ಈಗ ಪೋಸ್ಟ್ ಕಾರ್ಡಿನವರು ಬಂದು ಅವರ ಸಮಸ್ಯೆಯನ್ನು ಪರಿಹರಿಸಲಿ. ಕೆಲ ತಿಂಗಳ ಹಿಂದೆ ಸೌದಿಯಲ್ಲಿ ಸಮಸ್ಯೆಗೆ ಸಿಲುಕಿದ ಹರೀಶ್ ಬಂಗೇರರವರ ಪರಿಸ್ಥಿತಿ ಏನಾಗಿದೆಯೆಂದೇ ತಿಳಿಯುತ್ತಿಲ್ಲ. ಆತನ ಪತ್ನಿ ಅದೆಷ್ಟೋ ಕದ ತಟ್ಟಿದ್ದಾರೆ. ಆದರೂ ಯಾವುದೇ ಉಪಯೋಗವಾಗಿಲ್ಲ. ಧರ್ಮದ ಅವಹೇಳ ಸಾಬೀತಾದರೆ ಕೇವಲ ಜೈಲಲ್ಲ, ಅದಕ್ಕಿಂತ ಕಠಿಣ ಶಿಕ್ಷೆನೂ ಸಿಗಬಹುದು.

ಸೋ ಪ್ಲೀಸ್, ಇನ್ನಾದರೂ ಅರ್ಥ ಮಾಡಿಕೊಳ್ಳಿ. ಕೇವಲ ಗಲ್ಪ್ ನಲ್ಲಿ ಎಂದಲ್ಲ, ಭಾರತದಲ್ಲೂ ನೀವು ಕೇಸ್‍ನಲ್ಲಿ ಸಿಲುಕಿದರೆ ಯಾರೂ ನೆರವಿಗೆ ಬರೋಲ್ಲ. ಎಲ್ಲಾ ಲೈಕ್, ಶೇರ್, ಲವ್, ವ್ಹಾವ್ ಸಿಂಬಲ್ ನಿಮ್ಮನ್ನು ಕಾನೂನಿನ ಸಮಸ್ಯೆಯಿಂದ ಬಿಡಿಸಲು ಸಾಕಾಗೋಲ್ಲ. ಬರೆಯುವುದಿದ್ದರೆ ಬರೆಯಿರಿ, ಠೀಕೆ ಮಾಡಲಿದೆಯೇ, ಅದನ್ನೂ ಮಾಡಿ. ಅದರೆ ಎಲ್ಲವನ್ನೂ ಒಂದು ಮಿತಿಯೊಳಗೆ ಮಾಡಿ. ಮಿತಿ ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ಧರ್ಮದ ದ್ವೇಷ, ಅವಹೇಳನ ನಮ್ಮನ್ನೂ ಎಲ್ಲೂ ಕೊಂಡೊಯ್ಯಲ್ಲ. ಭಾರತದಲ್ಲೂ ಧರ್ಮದ ಅವಹೇಳನಕ್ಕೆ ಶಿಕ್ಷೆಯಿದೆ. ಇದನ್ನು ನಾನು ಕೇವಲ ಹಿಂದೂಗಳಿಗೆ ಮಾತ್ರ ಹೇಳುತ್ತಿಲ್ಲ, ಕ್ರೈಸ್ತ, ಮುಸ್ಲೀಮರಿಗೂ ಅನ್ವಯ. ಅವರವರ ಧರ್ಮ, ಅದರ ನಂಬಿಕೆಗಳು ಅವರಿಗೆ ಪ್ರಿಯ. ಅದನ್ನು ಹೀಯಾಳಿಸುವ, ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ, ನಾಸ್ತಿಕರಿಗೂ ಕೂಡಾ. ಸಮಸ್ಯೆಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಮೋದಿನೂ ಬರೋಲ್ಲ, ಗಾಂಧೀನೂ ಬರೋಲ್ಲ. ಬಿಜೆಪಿನೂ ಪರವಹಿಸೋಲ್ಲ, ಕಾಂಗ್ರೇಸ್ ಆಗಲಿ ಇನ್ಯಾವ ಪಕ್ಷವೂ ನಮ್ಮನ್ನು ಸಮರ್ಥ್ಹಿಸೋಲ್ಲ. ಸಮರ್ಥಿಸೋದು ಬಿಡಿ, ನಾವು ಅವರ ಪಕ್ಷದ ಕಾರ್ಯಕರ್ತರಲ್ಲವೆಂದೇ ಹೇಳಿಬಿಡುತ್ತವೆ. ಅಲ್ಲಿಗೆ ಸ್ಟೇಷನ್, ಕೇಸ್, ಕೋರ್ಟು, ಕಛೇರಿಗಳಲ್ಲಿ ನಮ್ಮದು ಏಕಾಂಗಿ ಹೋರಾಟ, ಹೆಚ್ಚೆಂದರೆ ನಮ್ಮ ಕುಟುಂಬದವರು ಬರಬಹುದು. ಮಿಕ್ಕವರು ಪ್ರೇಕ್ಷಕರಷ್ಟೇ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.