ಸನ್ಮಾರ್ಗ ವಾರ್ತೆ
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಡಾ.ಬೆಳಗಾಮಿ ಮುಹಮ್ಮದ್ ಸಾದ್ ಮರು ನೇಮಕಗೊಂಡಿದ್ದಾರೆ. ಅಧ್ಯಕ್ಷ ಅವಧಿಯು ನಾಲ್ಕು ವರ್ಷಗಳದ್ದಾಗಿದ್ದು, 2019 ರಲ್ಲಿ ಅವರು ಮೊದಲ ಬಾರಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಇದೀಗ ಅವರು ಮರು ನೇಮಕವಾಗಿರುವುದರಿಂದ 2027 ರವರೆಗೆ ಅವರು ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಜಮಾಅತ್ ಸದಸ್ಯರ ಮತದಾನವನ್ನು ಆಧರಿಸಿ ರಾಷ್ಟ್ರೀಯ ಅಧ್ಯಕ್ಷರಾದ ಸೈಯ್ಯದ್ ಸಾದತುಲ್ಲಾ ಹುಸೇನೀಯವರು ರಾಜ್ಯ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ.
ಡಾಕ್ಟರ್ ಬೆಳಗಾಮಿ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು ಬೆಂಗಳೂರಿನ ಆಸ್ಪತ್ರೆಗಳಲ್ಲಿ ನ್ಯೂರೋಲಾಜಿಸ್ಟ್ ಮತ್ತು ಜನರಲ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಅವರು ಮೈಸೂರು ಮತ್ತು ಲಂಡನ್ನಲ್ಲಿ ಉನ್ನತ ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದಾರೆ.
ಇವರ ಆಸಕ್ತಿಯ ಕ್ಷೇತ್ರ ಕುರ್ಆನ್ ಆಗಿದ್ದು ಉತ್ತಮ ಚಿಂತಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸಮಕಾಲೀನ ವಿಷಯಗಳ ಮೇಲೆ ಹಿಡಿತವನ್ನು ಹೊಂದಿರುವ ಅವರು ಉತ್ತಮ ಸಂಘಟಕರೂ ಆಗಿದ್ದಾರೆ.
ಇದೇವೇಳೆ, ಜಮಾಅತೆ ಇಸ್ಲಾಮೀ ಕೇರಳ ರಾಜ್ಯಾಧ್ಯಕ್ಷರಾಗಿ ಪಿ. ಮುಜೀಬುರ್ರಹ್ಮಾನ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರು ನೇಮಿಸಿದ್ದಾರೆ. 2015ರಿಂದ ಇವರು ಕೇರಳ ರಾಜ್ಯ ಉಪಾಧ್ಯಕ್ಷರಾಗಿದ್ದರು. 2011 ರಿಂದ 15 ರವರೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.. 2011 ರಿಂದಲೇ ಕೇಂದ್ರ ಪ್ರತಿನಿಧಿ ಸಭೆ ಮತ್ತು ರಾಜ್ಯ ಸಮಾಲೋಚನ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಎಸ್ಐಓ ಮೂಲಕ ಗುರುತಿಸಿಕೊಂಡ ಇವರು ಆ ಬಳಿಕ ಎಸ್ ಐ ಓ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಎರಡು ಬಾರಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕೇರಳ ರಾಜ್ಯಾಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದಾರೆ.












