ಡ್ರಗ್ಸ್ ಮಾಫಿಯಾ: ಹೆತ್ತವರು ತಿಳಿದಿರಬೇಕಾದ ವಿಷಯಗಳು

0
260

ಲೇಖಕರು: ಖದೀಜ ನುಸ್ರತ್ ಅಬುಧಾಬಿ

ಜಗತ್ತಿನಲ್ಲಿ ಅತಿ ಹೆಚ್ಚು ಲಾಭದಾಯಕ ಯಾವುದೆಂದು ತಿಳಿದರೆ ನಿಮ್ಮನ್ನು ಬೆಚ್ಚಿ ಬೀಳಿಸಬಹುದು. “ಡ್ರಗ್ಸ್ ಮಾಫಿಯಾ” ಎನ್ನುವುದು ಟ್ರಿಲಿಯನ್ ಗಳಷ್ಟು ಡಾಲರ್ ಗಳಲ್ಲಿ ಲಾಭ ಗಳಿಸುವ ವ್ಯಾಪಾರವಾಗಿದೆ. ಭಾರತದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಹಿಂದೆ ದುಷ್ಟ ಶಕ್ತಿ ಕಾರ್ಯಾಚರಿಸುತ್ತಿದೆ. ನಾವು ಜೀವಿಸುವ ಕಾಲಘಟ್ಟದಲ್ಲಿ ನಮ್ಮ ಸುತ್ತ ಮುತ್ತಲು ಏನೆಲ್ಲ ಕೆಡುಕುಗಳಿಂದೆಯೆಂದು ಹೆತ್ತವರೂ ತಿಳಿದು ನಮ್ಮ ಮಕ್ಕಳು ಅದಕ್ಕೆ ಬಲಿಯಾಗುವುದಕ್ಕಿಂತಲೇ ಮುಂಚೆ ಅದರ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಜಾಗೃತಿ ನೀಡುವುದು ಹೆತ್ತವರ ಜವಾಬ್ದಾರಿಯಾಗಿದೆ. ಆಧುನಿಕ ಕಾಲದಲ್ಲಿ ಹದಿಹರೆಯದ ಮಕ್ಕಳ ಪೋಷಣೆಯು ಮೊಬೈಲ್ ಮತ್ತು ಮಾದಕ ಪದಾರ್ಥಗಳ ಮಧ್ಯೆ ಒಂದು ಯುದ್ಧವನ್ನೇ ಮಾಡಿದಷ್ಟು ಕಷ್ಟ.

ಮದ್ಯಪಾನ ಮತ್ತು ಅಮಲು ಪದಾರ್ಥ ಎಲ್ಲಾ ಕೆಡುಕುಗಳ ಮೂಲವಾಗಿದೆ. ಸತ್ಯ ವಿಶ್ವಾಸ ಮತ್ತು ಅಮಲು ಪದಾರ್ಥ ಒಂದುಗೂಡಲು ಸಾಧ್ಯವಿಲ್ಲ. ಒಮ್ಮೆ ಯಾರಾದರೂ ಇದನ್ನು ಉಪಯೋಗಿಸಲು ಆರಂಭಿಸಿದರೆ ಮತ್ತೆ ಅದಿಲ್ಲದೆ ಅವರಿಗೆ ಜೀವಿಸಲು ಸಾಧ್ಯವಾಗುವುದಿಲ್ಲ. ಇದು ಮೆದುಳು, ಕಿಡ್ನಿ, ಲಿವರ್ ಗಳಿಗೆ ಹಾನಿಕಾರಕವಾಗಿದ್ದು ಅದು ಅವರ ಬುದ್ಧಿ, ಆಲೋಚನೆ, ನೆನಪುಶಕ್ತಿಯನ್ನು ನಾಶ ಮಾಡುತ್ತಾ ಭವಿಷ್ಯವನ್ನೇ ಹಾಳು ಮಾಡುತ್ತದೆ.

ಯಾವುದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅಮಲು ಉಂಟಾಗುತ್ತದೋ ಅದರ ಸಣ್ಣ ಪ್ರಮಾಣವೂ ನಿಷಿದ್ಧವಾಗಿದೆ.” -ಪ್ರವಾದಿ ಮುಹಮ್ಮದ್(ಸ)

12 ವರ್ಷಕ್ಕಿಂತ ಮೇಲ್ಪಟ್ಟವರು ಗಂಡು ಹೆಣ್ಣು ಎಂಬ ಬೇಧಬಾವವಿಲ್ಲದೆ ಈ ಚಟಕ್ಕೆ ತುತ್ತಾಗುತ್ತಾರೆ. 21 ವಯಸ್ಸಿನವರೆಗೆ ಅವರು ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗಿರುವುದಿಲ್ಲ. ಅವರ ಯಾವುದೇ ವರ್ತನೆಯಲ್ಲಿ ಹೆಚ್ಚು ಕಡಿಮೆಯಿರುವುದು ಸಹಜವಾಗಿರುತ್ತದೆ. ಹೆಚ್ಚಿನ ಹೆತ್ತವರು ನಮ್ಮ ಮಕ್ಕಳು ಈ ಚಟಕ್ಕೆ ಬಲಿಯಾಗುವುದಿಲ್ಲವೆಂದು ಭರವಸೆಯನ್ನಿಟ್ಟಿರುತ್ತಾರೆ. ತಮ್ಮ ಮಕ್ಕಳಿಗೆ ಅತ್ಯುನ್ನತ ವಿದ್ಯಾಭ್ಯಾಸ ನೀಡಬೇಕೆಂಬ ಕನಸನ್ನು ಹೊತ್ತ ಹೆತ್ತವರು ಹಾಸ್ಟೆಲ್ ಗೆ ಕಳುಹಿಸುತ್ತಾರೆ. ಆದರೆ ಹಾಸ್ಟೆಲ್ ಗಳಲ್ಲಿ ವಾಸಿಸುವ ಮಕ್ಕಳು ಹೆಚ್ಚು ಈ ದುಷ್ಚಟಕ್ಕೆ ಬಲಿಯಾಗುತ್ತಾರೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುವುದಿಲ್ಲ. ಸ್ವತಃ ಅವರಿಗೂ, ಮನೆಯವರಿಗೆ ಈ ವಿಷಯ ತಿಳಿದಿರುವುದಿಲ್ಲ. ಮೊದಮೊದಲು ತಮಗರಿವಿಲ್ಲದೇ ಯಾವುದೇ ಚಾಕಲೇಟ್, ಚಿವಿಂಗ್ ಗಮ್, ಜೂಸ್ ನ ಮುಖಾಂತರ ಸೇವಿಸಿರುತ್ತಾರೆ. ಕೆಲವೊಮ್ಮೆ ಈ ಚಟವು ಸಿಗರೇಟ್ ನಿಂದ ಆರಂಭವಾಗುತ್ತದೆ. ನುಂಗುವ, ನಾಲಗೆಯಲ್ಲಿಡುವ, ಮೂಗಿನಿಂದ ಎಳೆಯುವ, ಚುಚ್ಚು ಮದ್ದು ಇತ್ಯಾದಿ ರೂಪಗಳಲ್ಲಿ ಕಂಡು ಬರುತ್ತದೆ. ಗಾಂಜಾ, ಕೊಕೇನ್, ಒಪಿಯಾಡ್ಸ್, ಪಾನ್, ಗುಟ್ಕಾ, ಹೆರಾಯಿನ್, ಕೆಫೆನ್, ಕೆನಾಬಿಸ್ ಹೀಗೆ ಪಟ್ಟಿ ಮಾಡಿದರೆ ಮುಗಿಯದಷ್ಟು ಇವೆ. ಇದರ ವಿತರಣೆ ಆನ್ ಲೈನ್, ಇ ಕಾಮೆರ್ಸ್ ಹಾಗೂ ಕೋರಿಯಲ್ ಮೂಲಕವೂ ಲಭ್ಯವಿದೆ. ಸಿಡಿ, ಚುಚ್ಚು ಮದ್ದು, ಫಾಇಲ್, ಶೀಶಗಳ ರೂಪಗಳಲ್ಲೂ ಲಭ್ಯವಿರುತ್ತದೆ.

ಲಕ್ಷಣಗಳು
ಚರ್ಮ ಕೆಂಪಾಗುವುದು, ಕಣ್ಣು ಕೆಂಪಾಗುವುದು, ಮುಖ ಕಳೆಗುಂದುವುದು, ಮಾನಸಿಕ ಖಿನ್ನರಾಗುವುದು ಇದರ ಲಕ್ಷಣವಾಗಿದೆ. ಅವರ ವಸ್ತ್ರ ಹಾಗೂ ಕೂದಲಿನಲ್ಲಿ ಅದರ ವಾಸನೆಯಿರುವುದು. ಕೆಲವೊಮ್ಮೆ ಹೆಚ್ಚು ಸಂತೋಷಿತರಾಗುವುದು ಅಥವಾ ಯಾರೊಂದಿಗೂ ಮಾತನಾಡದೆ ದುಖಿತರಾಗುವುದು, ಅವರ ಯಾವುದೇ ವರ್ತನೆ ಅಥವಾ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುವುದು, ಗಂಡು ಮಕ್ಕಳು ತಲೆ ಕೂದಲನ್ನು ಬೆಳೆಸುವುದು, ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಉಪಯೋಗಿರುವುದು, ನಿದ್ರಾಹೀನತೆ, ನಿದ್ದೆಯಲ್ಲಿ ಬದಲಾವಣೆಯಾಗುವುದು, ತಡರಾತ್ರಿ ಮನೆಗೆ ಬರುವುದು. ಚೆನ್ನಾಗಿ ಕಲಿಯುತ್ತಿದ್ದ ಮಗು ಒಮ್ಮೆಲೇ ಕಲಿಯುವುದರಲ್ಲಿ ಹಾಗೂ ಶಾಲೆಗೆ ಹೋಗಲು ಆಸಕ್ತಿ ತೋರಿಸದಿರುವುದು. ಚಾಟ್ ಮಾಡುವಾಗ ಕೋಡ್ ಬಳಸುವುದು, ಬಾಗಿಲು ಹಾಕಿ ಕುಳಿತುಕೊಳ್ಳುವುದು, ಏಕಾಂತವನ್ನು ಇಷ್ಟ ಪಡುವುದು. ಯಾವಾಗಲೂ ಮಕ್ಕಳನ್ನು ಸಂಶಯದ ದೃಷ್ಟಿಯಿಂದ ನೋಡಬೇಡಿರಿ. ಈ ಯಾವುದೇ ಲಕ್ಷಣ ಕಂಡು ಬಂದಲ್ಲಿ ಅವರ ಬ್ಯಾಗ್, ಕಪಾಟನ್ನು ಪರಿಶೀಲಿಸಿ.

ಮಕ್ಕಳು ಮಾದಕ ಪದಾರ್ಥಗಳ ದಾಸರಾಗಲು ಕಾರಣಗಳೇನು? ಇದು ಹೆತ್ತವರು ಚಿಂತಿಸಬೇಕಾದ ಮತ್ತು ಅರಿತಿರಬೇಕಾದ ವಿಷಯವಾಗಿದೆ.

  • ಹೆತ್ತವರು ಮಾರ್ಕ್ ಅಥವಾ ಇನ್ನಾವುದೇ ವಿಷಯದಲ್ಲಿ ಮಕ್ಕಳ ಮೇಲೆ ಒತ್ತಡ ಹೇರುವುದು.
  • ತಮ್ಮ ಹೆತ್ತವರೊಂದಿಗೆ ಅಥವಾ ಶಿಕ್ಷಕರೊಂದಿಗಿನ ಸಂಬಂಧಗಳ ಸಮಸ್ಯೆಯಿರುವುದು ಅಥವಾ ಮನೆಯಲ್ಲಿ ತಂದೆ ತಾಯಿಯ ಮಧ್ಯೆ ಏನಾದರೂ ಕಲಹವಿರುವುದು.
  • ಮಕ್ಕಳಿಗೆ ಮನೆಯಲ್ಲಿ ಸಿಗುವ ಪ್ರೀತಿಯ ಕೊರತೆ,
  • ಸಂಭಾಷಣೆ, ಮಾತುಗಾರಿಕೆಯ ಕೊರತೆ.
  • ಸಮವಯಸ್ಕ ಮಕ್ಕಳ ಪ್ರೇರಣೆ.
  • ತಂತ್ರಜ್ಞಾನದ ಚಟ.
  • 75% ತಮಗರಿವಿಲ್ಲದೆ ಬಲಿಯಾಗುತ್ತಾರೆ.

ಮಾತಾಪಿತರು ಉತ್ತಮ ಮಾದರಿಯಾಗಬೇಕು. ತಂಬಾಕು, ಸಿಗರೇಟ್, ಮದ್ಯಪಾನದಂತಹ ಕೆಟ್ಟ ಚಟಗಳಿಂದ ಮುಕ್ತವಾಗಿರಬೇಕು. ತಂದೆ ತಾಯಿಯರು ಮಕ್ಕಳ ಜೊತೆ ಮಕ್ಕಳಾಗಿಯೂ ಅವರ ಉತ್ತಮ ಸ್ನೇಹಿತರು, ಗೆಳೆಯರಾಗಿರಬೇಕು. ನಿಮ್ಮ ಮಕ್ಕಳು ಅಮಲು ಪದಾರ್ಥಗಳ ಚಟಗಳಿಗೆ ಬಲಿಯಾದಾಗ ಅವರ ಮೇಲೆ ಕೋಪಗೊಳ್ಳದೆ, ಹೊಡೆಯದೆ, ಬಡಿಯದೆ, ಶಿಕ್ಷಿಸದೆ ಸಹನೆ, ಕರುಣೆಯಿಂದ ವರ್ತಿಸಬೇಕು ಎಂಬುದು ಮುಖ್ಯ ವಿಷಯವಾಗಿರುತ್ತದೆ. ಅವರೊಡನೆ ಉತ್ತಮ ಮಾತುಗಳನ್ನಾಡಬೇಕು. ಅವರಿಗೆ ಪಶ್ಚಾತ್ತಾಪಪಡಲು ಮತ್ತು ಅಲ್ಲಾಹನೊಂದಿಗೆ ಕ್ಷಮಾಯಾಚನೆ ಮಾಡಲು ಉಪದೇಶಿಸಿರಿ. ಶಾಲಾ ಕಾಲೆಜುಗಳಲ್ಲಿ ಕೂಡಾ ಶಿಕ್ಷಕರು ಅವರನ್ನು ಅವಮಾನಿಸಬಾರದು. ನಿಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರ ಪೈಕಿ ಯಾರಾದರೂ ಈ ಚಟಕ್ಕೆ ಬಲಿಯಾದರೆ ಅವರನ್ನೂ ಅವರ ಹೆತ್ತವರನ್ನು ಕೀಳಾಗಿ ಕಾಣಬೇಡಿರಿ. ಇದು ಅವರಿಗರಿವಿಲ್ಲದೆ, ಬೋಧವಿಲ್ಲದೆ ಬಲಿಯಾಗಿರುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಒಂದು ರೋಗವೆಂದು ಪರಿಗಣಿಸುತ್ತದೆ. ಚಿಕಿತ್ಸೆಯಿಲ್ಲದೆ ಇದರಿಂದ ಹೊರಬರಲು ಸಾಧ್ಯವಿಲ್ಲ. ಸಮಾಜದಲ್ಲಿ ಇದನ್ನು ಒಂದು ದುಶ್ಶೀಲವೆಂದು ಪರಿಗಣಿಸಿ ಕೆಟ್ಟ ದೃಷ್ಟಿಯಿಂದ ನೋಡುವುದರಿಂದ ಹೆಚ್ಚಿನ ಹೆತ್ತವರು ನಾಚಿಕೆಯಿಂದ ಅದನ್ನು ಅಡಗಿಸಲು ಪ್ರತ್ನಿಸುತ್ತಾರೆ. ಹೆತ್ತವರು ಮನೋರೋಗ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆಯಬೇಕು. 75% ಜನರು ಚಿಕಿತ್ಸೆಯನ್ನು ಪಡೆಯುವುದಿಲ್ಲವೆಂಬುದು ಖೇದಕರ ವಿಷಯವಾಗಿದೆ. ಅವರು ಶಾಲೆಯಿಂದ ಕ್ಲಪ್ತಸಮಯಕ್ಕೆ ಮನೆಗೆ ತಲುಪುವಂತೆ ಎಚ್ಚರಿಕೆ ವಹಿಸಿರಿ. ಪರಿಚಯವಿಲ್ಲದ ಹೊಸ ಗೆಳೆಯ ಗೆಳೆತಿಯರ ಜೊತೆ ಸಂಪರ್ಕದಲ್ಲಿದ್ದಾರೆಯೇ, ಅವರ ಗೆಳೆಯರು ಯಾರು, ಅವರ ಯಾರ ಜೊತೆ ಆಟವಾಡಲು ಹೋಗುತ್ತಾರೆಂದು ಮೇಲ್ನೋಟ ವಹಿಸಿರಿ. ದಾರಿಯಲ್ಲಿ ಯಾರಾದರೂ ಮಾದಕ ಚಟಕ್ಕೆ ಬಲಿಯಾದುದು ಕಂಡು ಬಂದರೆ ಅವರ ಹೆತ್ತವರಿಗೂ ಮಾಹಿತಿ ನೀಡಲು ಪ್ರಯತ್ನಿಸಿರಿ. ಅದು ನಮ್ಮ ಮನೆಗೆ ಬಂದು ಮುಟ್ಟುವುದಕ್ಕಿಂತ ಮುಂಚೆಯೇ ಜಾಗೃತರಾಗಬೇಕು. ಅದರ ಮೂಲವನ್ನೇ ಕಡಿದು ಹಾಕಬೇಕಾಗಿದೆ. ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ.

“ನಿಮ್ಮ ಭವಿಷ್ಯವನ್ನು ನಿಮಗೆ ಬದಲಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ಅಭ್ಯಾಸವನ್ನು ಬದಲಿಸಬಹುದು. ಮತ್ತು ನಿಮ್ಮ ಅಭ್ಯಾಸವು ಖಂಡಿತ ನಿಮ್ಮ ಭವಿಷ್ಯವನ್ನು ಬದಲಾಯಿಸುತ್ತದೆ.” – ಎ ಪಿ ಜೆ ಅಬ್ದುಲ್ ಕಲಾಮ್