ರಾಹುಲ್ ಗಾಂಧಿಯವರನ್ನು ನೋಡಿ ಕಲಿಯಿರಿ: ರಾಜಸ್ಥಾನ ಶಾಸಕರಿಗೆ ಮಾರ್ಗರೇಟ್ ಆಳ್ವ ಸಲಹೆ

0
169

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ವಿವಾದ ಸೃಷ್ಟಿಸಿದ ಶಾಸಕರಿಗೆ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಸಲಹೆ ನೀಡಿದ್ದಾರೆ.

“ರಾಜಸ್ಥಾನದಲ್ಲಿನ ಬೆಳವಣಿಗೆಗಳು ದುಃಖಕರ, ದುರದೃಷ್ಟಕರ ಮತ್ತು ಅನಗತ್ಯ. ರಾಜ್ಯದ ಹಿರಿಯ ನಾಯಕರು ವೈಯಕ್ತಿಕ ಆಸೆಗಳನ್ನು ಬಲಿಕೊಡಲು ಸಿದ್ಧರಾಗಿರಬೇಕು. ರಾಹುಲ್ ಗಾಂಧಿಯವರಿಂದ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯಬೇಕು. ಇಂದು ಕಾಂಗ್ರೆಸ್‌ಗೆ ಬೇಕಿರುವುದು ನಿಸ್ವಾರ್ಥ ಸೇವೆ ಎಂಬುದನ್ನು ರಾಹುಲ್ ಗಾಂಧಿ ತೋರಿಸಿ ಕೊಟ್ಟಿದ್ದಾರೆ” ಎಂದು ಮಾರ್ಗರೆಟ್ ಆಳ್ವ ಹೇಳಿದರು.

ಎಐಸಿಸಿ ಅಧ್ಯಕ್ಷನಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಯ್ಕೆ ಮಾಡಲಾಗುತ್ತದೆ ಎಂಬುದು ರಾಜಸ್ಥಾನದ ಹಠಾತ್ ಬೆಳವಣಿಗೆಯ ಹಿಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧ್ಯಕ್ಷರಾಗಲು ರಾಹುಲ್ ಗೆಹ್ಲೋಟಿಗೆ ಮನವಿ ಮಾಡಿದ್ದರು. ಸಚಿನ್ ಪೈಲಟ್‍ಗೆ ಮುಖ್ಯಮಂತ್ರಿ ಸ್ಥಾನ ಕೊಡುವ ತೀರ್ಮಾನವಿತ್ತು.

ಆದರೆ, ಸಚಿನ್ ಪೈಲಟ್‌ರನ್ನು ಮುಖ್ಯಮಂತ್ರಿಯಾಗಲು ಬಿಡಲಾರೆ ಎಂದು ಅಶೋಕ್‍ ಗೆಹ್ಲೋಟ್ 90 ಶಾಸಕರನ್ನು ತನ್ನ ಪರ ಕಲೆ ಹಾಕಿದ್ದಾರೆ. ಈ 90 ಮಂದಿಯೂ ಹೈಕಮಾಂಡ್ ಕರೆದ ಸಭೆಯನ್ನು ಬಹಿಷ್ಕರಿಸಿದ್ದಾರೆ. ವಿಧಾನಸಭಾ ಸ್ಪೀಕರ್ ಸಿಪಿ ಜೋಷಿ ಸಹಿತ ಮೂವರು ನಂಬಿಗಸ್ಥರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಗೆಹ್ಲೋಟ್ ಸೂಚಿಸಿದ್ದರು. ಇದನ್ನು ಒಪ್ಪದ ಹೈಕಮಾಂಡ್ ಎದುರು 90 ಶಾಸಕರು ಬೆದರಿಕೆ ಹಾಕುತ್ತಿದ್ದಾರೆ. ರಾಜೀನಾಮೆ ಸಿದ್ಧ ಎನ್ನುತ್ತಿದ್ದಾರೆ.

ಪರಿಸ್ಥಿತಿ ತಿಳಿಗೊಳಿಸುವ ಯತ್ನ ಕಾಂಗ್ರೆಸ್ ನಾಯಕರಿಂದ ನಡೆಯುತ್ತಿದೆ. ಅಜಯ್ ಮಾಕನ್, ಮಲ್ಲಿಕಾರ್ಜುನ ಖರ್ಗೆಯವರ ಯತ್ನ ಸಫಲವಾಗಿಲ್ಲ. ಸಚಿನ್‍ರನ್ನಾಗಲಿ ಅವರ ಬೆಂಬಲಿಗರನ್ನು ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ ಎಂಬುದು ಇದೀಗ ರಾಜಸ್ಥಾನ ರಾಜಕೀಯದಲ್ಲಿ ಬಣಗಳನ್ನು ಸೃಷ್ಟಿಸಿದ್ದು, ಈ ನಡುವೆ ಗೆಹ್ಲೋಟ್‌ರವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂಬ ಕೂಗು ಕೇಳಿ ಬರುತ್ತಿದೆ.