ಹಿರಿಯ ಇಸ್ಲಾಮಿಕ್ ಅರ್ಥಶಾಸ್ತ್ರಜ್ಞ ಡಾ. ಮುಹಮ್ಮದ್ ನಜತುಲ್ಲಾ ಸಿದ್ದಿಕಿ ಇನ್ನಿಲ್ಲ

0
133

ಸನ್ಮಾರ್ಗ ವಾರ್ತೆ

ಕ್ಯಾಲಿಫೋರ್ನಿಯಾ: ಹಿರಿಯ ಅರ್ಥಶಾಸ್ತ್ರಜ್ಞ ಮತ್ತು ಇಸ್ಲಾಮಿಕ್ ಅಧ್ಯಯನಕ್ಕಾಗಿ ಕಿಂಗ್ ಫೈಸಲ್ ಇಂಟರ್ನ್ಯಾಷನಲ್ ಪ್ರಶಸ್ತಿ ವಿಜೇತ ಡಾ.ಮುಹಮ್ಮದ್ ನಜತುಲ್ಲಾ ಸಿದ್ದಿಕಿ ಅವರು ಅಮೇರಿಕಾದಲ್ಲಿ 91ನೇ ವಯಸ್ಸಿನಲ್ಲಿ ನಿಧನರಾದರು.

ಇಸ್ಲಾಮಿಕ್ ಫೈನಾನ್ಸ್‌‌‌ನಲ್ಲಿ ಮುಂಚೂಣಿಗರಾಗಿದ್ದ ಸಿದ್ದಿಕಿಯವರು, ಜಮಾಅತೆ ಇಸ್ಲಾಮಿ ಹಿಂದ್‌ನ ಮಾಜಿ ಕೇಂದ್ರ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು.

1931ರಲ್ಲಿ ಭಾರತದಲ್ಲಿ ಜನಿಸಿದ ಅವರು ಅಲಿಗಢ್ ಮುಸ್ಲಿಂ ವಿಶ್ವವಿದ್ಯಾನಿಲಯ ಹಾಗೂ ರಾಂಪುರ ಮತ್ತು ಅಜಂಗಢದಲ್ಲಿ ಶಿಕ್ಷಣ ಪಡೆದರು. ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಸಹ ಪ್ರಾಧ್ಯಾಪಕರಾಗಿ ಮತ್ತು ಇಸ್ಲಾಮಿಕ್ ಅಧ್ಯಯನದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಸೌದಿ ಅರೇಬಿಯಾದ ಜಿದ್ದಾದಲ್ಲಿರುವ ಕಿಂಗ್ ಅಬ್ದುಲ್ ಅಜೀಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗುವ ಮೂಲಕ ಸೆಂಟರ್ ಫಾರ್ ರಿಸರ್ಚ್ ಇನ್ ಇಸ್ಲಾಮಿಕ್ ಇಕನಾಮಿಕ್ಸ್ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ನಂತರ ಅವರು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಮೀಪ ಪೂರ್ವ ಅಧ್ಯಯನಗಳ ಕೇಂದ್ರದಲ್ಲಿ ರಿಸರ್ಚ್‌ಫೆಲ್ಲೋ ಆದರು. ತದನಂತರ ಜಿದ್ದಾ ಇಸ್ಲಾಮಿಕ್ ಬ್ಯಾಂಕ್‌ನ ಇಸ್ಲಾಮಿಕ್ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಸಂದರ್ಶಕ ವಿದ್ವಾಂಸರಾದರು.

ಅವರು ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಸಮೃದ್ಧ ಬರಹಗಾರರಾಗಿದ್ದಾರೆ. ಅವರ 63 ಕೃತಿಗಳನ್ನು 177 ಪ್ರಕಾಶನ ಸಂಸ್ಥೆಗಳು ಮುದ್ರಿಸಿದ್ದು, ಐದು ಭಾಷೆಗಳಲ್ಲಿ ಭಾಷಾತಂರಿಸಲ್ಪಟ್ಟಿವೆ ಹಾಗೂ 1,301 ಲೈಬ್ರರಿಗಳಲ್ಲಿ ಹಿಡುವಳಿ ಹೊಂದಿವೆ. ಅವರ ಹಲವಾರು ಕೃತಿಗಳನ್ನು ಅರೇಬಿಕ್, ಪರ್ಷಿಯನ್, ಟರ್ಕಿಶ್, ಇಂಡೋನೇಷಿಯನ್, ಮಲೇಷಿಯನ್, ಥಾಯ್ ಸೇರಿದಂತೆ ಇತರೆ ಭಾಷೆಗಳಿಗೆ ಅನುವಾದಿಸಲಾಗಿದೆ.

ಸಿದ್ದಿಕಿಯವರ “ಬಡ್ಡಿ ರಹಿತ ಬ್ಯಾಂಕಿಂಗ್” ಎಂಬ ಕೃತಿಯು ಅತಿ ಹೆಚ್ಚು ಓದಲ್ಪಡುವ ಕೃತಿಯಾಗಿದ್ದು 1973 ಮತ್ತು 2000ರ ನಡುವೆ 3 ಭಾಷೆಗಳಲ್ಲಿ 27 ಆವೃತ್ತಿಗಳಲ್ಲಿ ಪ್ರಕಟವಾಗಿದೆ ಹಾಗೂ ಪ್ರಪಂಚದಾದ್ಯಂತ 220 ಗ್ರಂಥಾಲಯಗಳಲ್ಲಿ ಮನ್ನಣೆ ಪಡೆದಿದೆ.

ಅವರ ಸುದೀರ್ಘ ಶೈಕ್ಷಣಿಕ ವೃತ್ತಿಜೀವನದಲ್ಲಿ, ಅವರು ಭಾರತ, ಸೌದಿ ಅರೇಬಿಯಾ ಮತ್ತು ನೈಜೀರಿಯಾದಲ್ಲಿ ಹಲವಾರು ಪಿಎಚ್‌ಡಿ ಪ್ರಬಂಧಗಳ ಮೇಲ್ವಿಚಾರಣೆಯನ್ನು ಮಾಡಿದ್ದಾರೆ. ಶೈಕ್ಷಣಿಕ ನಿಯತಕಾಲಿಕೆಗಳೊಂದಿಗೆ ಸಲಹೆಗಾರರಾಗಿ ಹಾಗೂ ಸಂಪಾದಕರಾಗಿ ಸಂಬಂಧ ಹೊಂದಿದ್ದರು. ಅವರು ಹಲವಾರು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಅನೇಕ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು.

ಸಂತಾಪ ಸೂಚಿಸಿದ ಜಮಾಅತೆ ಇಸ್ಲಾಮೀ ಹಿಂದ್

ಖ್ಯಾತ ಅರ್ಥಶಾಸ್ತ್ರಜ್ಞ ಡಾ.ನಜತುಲ್ಲಾ ಸಿದ್ದಿಕಿ ಅವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್(ಜೆಐಎಚ್) ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.

“ಡಾ.ನಜತುಲ್ಲಾ ಸಿದ್ದಿಕಿ ಅವರ ನಿಧನದ ಸುದ್ದಿ ಕೇಳಿ ನಮಗೆ ತೀವ್ರ ದುಃಖವಾಗಿದೆ. ಇಸ್ಲಾಮಿಕ್ ಅರ್ಥಶಾಸ್ತ್ರ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪ್ರತಿಮ. ಅವರು ಇಸ್ಲಾಮಿಕ್ ಬ್ಯಾಂಕಿಂಗ್ ಪರಿಕಲ್ಪನೆಯನ್ನು ಪ್ರವರ್ತಿಸಿದರು ಮತ್ತು ಈಗ ಅಭಿವೃದ್ಧಿ ಹೊಂದುತ್ತಿರುವ ಬಹು-ಶತಕೋಟಿ ಡಾಲರ್ ಉದ್ಯಮಕ್ಕೆ ಅಡಿಪಾಯವನ್ನು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ‌.

ಡಾ. ನಜತುಲ್ಲಾ‌ರವರು ಕಲಿಕೆ ಮತ್ತು ಅಭಿವೃದ್ಧಿಗೆ ಮೀಸಲಾದ ಬಹುಮುಖ ವ್ಯಕ್ತಿತ್ವ ಹೊಂದಿದ್ದರು. ವಿದೇಶದಲ್ಲಿ ನೆಲೆಸಿದ್ದರೂ, ಅವರು ಭಾರತದ ಅನೇಕ ವೇದಿಕೆಗಳು ಮತ್ತು ಸಂಸ್ಥೆಗಳಿಗೆ ಬೌದ್ಧಿಕವಾಗಿ ಕೊಡುಗೆ ನೀಡಿದ್ದಾರೆ. ಅವರ ನಿಧನ ಮುಸ್ಲಿಂ ಜಗತ್ತಿಗೆ ಮತ್ತು ಇಸ್ಲಾಮಿಕ್ ಚಳವಳಿಗೆ ತುಂಬಲಾಗದ ನಷ್ಟವಾಗಿದೆ. ಅವರ ನಿಧನವು ಇಸ್ಲಾಮಿಕ್ ಅರ್ಥಶಾಸ್ತ್ರ ಮತ್ತು ಹಣಕಾಸು ಕ್ಷೇತ್ರದ ಮೇಲೆ ದೊಡ್ಡ ಪ್ರಭಾವ ಬೀರಲಿದೆ ಎಂದು ಅವರು ಹೇಳಿದ್ದಾರೆ.