ಹೃದಯಗಳನ್ನು ಬೇರ್ಪಡಿಸುವವರ ಮಧ್ಯೆ ಶಾಂತಿ ಪ್ರಕಾಶನದ ಕೃತಿಗಳು ಒಗ್ಗೂಡಿಸುವ ಕೆಲಸ ಮಾಡುತ್ತಿದೆ: ಮುಹಮ್ಮದ್ ಕುಂಞಿ

0
350

41ನೇ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳ 2022 ಸಮಾರೋಪ

ಸನ್ಮಾರ್ಗ ವಾರ್ತೆ

ಶಾರ್ಜಾ: ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡವನ್ನು ಪ್ರತಿನಿಧಿಸುತ್ತಾ ಸತತವಾಗಿ ಕಳೆದ ಆರು ವರ್ಷಗಳಿಂದ ತನ್ನ ಮಳಿಗೆಯನ್ನಿಟ್ಟು ಕನ್ನಡವನ್ನು ಸಾಗರದಾಚೆಯ ಅನಿವಾಸಿ ಓದುಗರಿಗೆ ಮತ್ತು ಸಾಹಿತ್ಯ ಪ್ರೇಮಿಗಳಿಗೆ ಹಬ್ಬಿಸಿ ಸಾಹಿತ್ಯವನ್ನು ಉಣಬಡಿಸುತ್ತಿರುವ ಶಾಂತಿ ಪ್ರಕಾಶನದ ಮಳಿಗೆಯ ಸಮಾರೋಪ ಸಮಾರಂಭವು ಶಾರ್ಜಾ ಎಕ್ಸ್ ಪೋ ಸೆಂಟರಿನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ್ ಶೆಟ್ಟಿಯವರು ಮಾತನಾಡಿ, ಕನ್ನಡವನ್ನು ಬೆಳೆಸಬೇಕಾದುದು ನಮ್ಮೆಲ್ಲರ ಕರ್ತ್ಯವ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ನೂರಾರು ಪ್ರಕಾಶನ ಸಂಸ್ಥೆಗಳಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪ್ರತಿನಿಧಿಸಲು ಕ್ರಮ ಕೈಗೆತ್ತಿಕೊಳ್ಳದೇ ಇರುವುದು ವಿಷಾದನೀಯ. ಶಾಂತಿ ಪ್ರಕಾಶನವು ತನ್ನದೇ ಪ್ರಯತ್ನದಿಂದ ಈ ಕಾರ್ಯವನ್ನು ಮಾಡುತ್ತಿದ್ದು ಅವರ ಶ್ರಮ ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.

ದಿಕ್ಷೂಚಿ ಭಾಷಣ ಮಾಡಿದ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿಯವರು ಮಾತನಾಡಿ, ಇಂದಿನ ಕಲುಷಿತ ವಾತಾವರಣದಲ್ಲಿ ಮನುಷ್ಯರ ಮಧ್ಯೆ ಗೋಡೆಗಳನ್ನು ನಿರ್ಮಿಸಿ ಹೃದಯವನ್ನು ಬೇರ್ಪಡಿಸುವ ಕಾಲದಲ್ಲಿ ಅವರನ್ನು ಒಗ್ಗೂಡಿಸಿ ಸೌಹಾರ್ದಯುತ ವಾತಾವರಣವನ್ನು ಸೃಷ್ಟಿಸುವ ಕೆಲಸವು ಕಳೆದ ನಲವತ್ತು ವರ್ಷಗಳಿಂದ ಶಾಂತಿ ಪ್ರಕಾಶನ ಮಾಡುತ್ತಿದ್ದು ಅದು ಪ್ರಕಟಿಸಿದ ಸುಮಾರು ಮುನ್ನೂರಕ್ಕೂ ಹೆಚ್ಚಿನ ಕೃತಿಗಳಲ್ಲಿ ಮನುಷ್ಯರನ್ನು ಪರಸ್ಪರ ಜೋಡಿಸುವ ಕೆಲಸವನ್ನು ಮಾಡುತ್ತಿದೆ. ಇಸ್ಲಾಮೋಫೋಬಿಯಾ ವ್ಯಾಪಕವಾಗಿ ಹಬ್ಬುತ್ತಿರುವ ಈ ಕಾಲದಲ್ಲಿ ಇಸ್ಲಾಮಿನ ಮೌಲ್ಯಗಳನ್ನು ಮತ್ತು ಪ್ರವಾದಿ ಮುಹಮ್ಮದ್ (ಸ ಅ) ರವರ ಜೀವನ ಸಂದೇಶಗಳನ್ನು ಜನರಿಗೆ ತಿಳಿಸುವ ಅಗತ್ಯವಿದೆ ಮತ್ತು ಅದನ್ನು ಶಾಂತಿ ಪ್ರಕಾಶನವು ಮಾಡುತ್ತಿದೆ ಎಂದು ಹೇಳಿದರು.

ಬ್ಯಾರೀಸ್ ವೆಲ್ಫೇರ್ ಫೋರಮ್‌ ಇದರ ಅಧ್ಯಕ್ಷರಾದ ಮುಹಮ್ಮದ್ ಅಲಿ ಉಚ್ಚಿಲ್ ರವರು ಮಾತನಾಡಿ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಪ್ರಕಾಶನ ಸಂಸ್ಥೆಗಳು ಭಾಗವಹಿಸುವ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡದ ಒಂದೇ ಒಂದು ಪ್ರಕಾಶನ ಸಂಸ್ಥೆ ಭಾಗವಹಿಸುತ್ತಿದ್ದು ಅದರ ಹಿಂದಿನ ಚಾಲಕ ಶಕ್ತಿಯಾದ ಸದಸ್ಯರ ಕೆಲಸ ಶ್ಲಾಘನೀಯ ಎಂದರು.  ಶಾಂತಿ ಪ್ರಕಾಶನದ ಪುಸ್ತಕಗಳಿಂದ ನಮಗೆಲ್ಲರಿಗೂ ಜ್ಞಾನ ದೊರೆತಿದೆ ಎಂದು ಬ್ಯಾರಿ ಫಿಲ್ಮ್ ನಿರ್ದೇಶಕರಾದ ಯಾಕೂಬ್ ಖಾದರ್ ಗುಲ್ವಾಡಿಯವರು ಅಭಿಪ್ರಾಯ ವ್ಯಕ್ತಪಡಿಸಿದರು‌..

ಸಮಾರಂಭದಲ್ಲಿ ಅಬುಧಾಬಿ ನಿಹಾಲ್ ರೆಸ್ಟೋರೆಂಟ್ ಮಾಲಕರಾದ ಸುಂದರ್ ಶೆಟ್ಟಿ, ಲೇಖಕರಾದ ಮನೋಹರ್ ತೋನ್ಸೆ,ಬ್ಯಾರೀಸ್ ವೆಲ್ಫೇರ್ ಫೋರಮ್ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ, ಹಿದಾಯ ಫೌಂಡೇಶನ್ ಯುಎಇ ಇದರ ಅಧ್ಯಕ್ಷರಾದ ಅಹ್ಮದ್ ಬಾವ, ಅನ್ಸಾರ್ ತೋನ್ಸೆ, ಕವಿ ಮತ್ತು ಲೇಖಕ ಇರ್ಷಾದ್ ಮೂಡುಬಿದ್ರೆ ಮುಂತಾದವರು ಉಪಸ್ಥಿತರಿದ್ದರು.