ಹಮಾಸ’ನ್ನು ಪದೇ ಪದೇ ಕಟಕಟೆಯಲ್ಲಿ ನಿಲ್ಲಿಸುವ ಮೊದಲು

0
1451

ಸಂಪಾದಕೀಯ


1. ಶಂಕಿತರ ಮೊಬೈಲ್ ಮತ್ತು ಕಂಪ್ಯೂಟರ್‌ನೊಳಗೆ ನುಗ್ಗಿ ಗೂಢಚರ್ಯೆ ನಡೆಸುವ ಸ್ಪೈ ವೇರ್ ತಂತ್ರಜ್ಞಾನದಿಂದ  ಹಿಡಿದು ಡ್ರೋನ್  ಕ್ಯಾಮರಾಗಳ ಕಣ್ಗಾವಲು ವ್ಯವಸ್ಥೆಯವರೆಗೆ ಮತ್ತು ಮೊಸಾದ್‌ನಂತಹ ಜಾಗತಿಕವಾಗಿಯೇ ಅತೀ ಪ್ರಬಲ ಗುಪ್ತಚರ ವಿಭಾಗದಿಂದ  ಹಿಡಿದು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ವರೆಗೆ ಎಲ್ಲದರ ಕಣ್ತಪ್ಪಿಸಿ ಇಝ್ಝುದ್ದೀನ್ ಅಲ್ ಖಸ್ಸಾಂ ಬ್ರಿಗೇಡ್ ಎಂಬ ಗಾಝಾದ ಹಮಾಸ್‌ನ ಸಶಸ್ತ್ರ  ತಂಡವು ನೆಲ, ಜಲ ಮತ್ತು ವಾಯು ಪ್ರದೇಶದ ಮೂಲಕ ಇಸ್ರೇಲ್‌ನೊಳಗೆ ನುಗ್ಗಿ ದಾಳಿ ನಡೆಸಲು ಶಕ್ತವಾದುದು ಹೇಗೆ?

2. ಇಸ್ರೇಲ್ ನಾಗರಿಕರ ಮೇಲೆ ಹಮಾಸ್ ದಾಳಿ ನಡೆಸಿದ್ದು ಎಷ್ಟು ಸರಿ?

ಸದ್ಯ ಈ ಎರಡೂ ಪ್ರಶ್ನೆಗಳಿಗೂ ಮಹತ್ವ ಇದೆ. ಹಮಾಸ್ ಎಂಬುದು ಫೆಲೆಸ್ತೀನಿನ ಅತ್ಯಂತ ಜನಪ್ರಿಯ ರಾಜಕೀಯ ಪಕ್ಷ. ಅದರ ಸಶಸ್ತ್ರ  ಪಡೆಯ ಹೆಸರು ಇಝ್ಝುದ್ದೀನ್ ಅಲ್ ಖಸ್ಸಾಂ. ಹಾಗಂತ, ಇಂಥದ್ದೊಂದು ವ್ಯವಸ್ಥೆ ಕೇವಲ ಹಮಾಸ್‌ಗೆ ಮಾತ್ರ ಇರುವುದಲ್ಲ. ಪಶ್ಚಿಮ  ದಂಡೆಯಲ್ಲಿ ಅಧಿಕಾರದಲ್ಲಿರುವ ಮುಹಮ್ಮದ್ ಅಬ್ಬಾಸ್ ನೇತೃತ್ವದ ಫತಹ್ ಎಂಬ ರಾಜಕೀಯ ಪಕ್ಷಕ್ಕೂ ಇದೆ. ಆ ಸಶಸ್ತ್ರ ಪಡೆಯ  ಹೆಸರು ಅಲ್ ಖುದ್ಸ್. ಇವೆರಡರ ಹೊರತಾಗಿ ಅಲ್ಲಿನ ಎಡಪಕ್ಷಕ್ಕೂ ತನ್ನದೇ ಆದ ಸಶಸ್ತ್ರ ಪಡೆಯೂ ಇದೆ. ಅಂದರೆ, ಫೆಲೆಸ್ತೀನಿನ  ರಾಜಕೀಯ ಪಕ್ಷಗಳು ತಮ್ಮದೇ ಆದ ಸಶಸ್ತ್ರ ಪಡೆಯನ್ನು ಹೊಂದಿದ್ದು, ಫೆಲೆಸ್ತೀನನ್ನು ಇಸ್ರೇಲ್‌ನಿಂದ ವಿಮೋಚನೆಗೊಳಿಸುವುದಕ್ಕೆ ಸಶಸ್ತ್ರ  ಹೋರಾಟ ಅನಿವಾರ್ಯ ಎಂದು ಅವು ಭಾವಿಸಿಕೊಂಡಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ, 1948ರಲ್ಲಿ ಸ್ಥಾಪನೆಯಾದ ದಿನದಿಂದ ಈ ವರೆಗೆ ಫೆಲೆಸ್ತೀನಿಯರೊಂದಿಗೆ ಇಸ್ರೇಲ್ ನಡಕೊಂಡ ವಿಧಾನವನ್ನೂ ಒರೆಗಲ್ಲಿಗೆ ಹಚ್ಚಬೇಕಾಗುತ್ತದೆ.

1948ರಲ್ಲಿ ಇಸ್ರೇಲ್ ಸ್ಥಾಪನೆಗೊಂಡದ್ದೇ  ಬ್ರಿಟಿಷರ ಸಂಚಿನಿಂದ. ಆಗ ಫೆಲೆಸ್ತೀನ್ ಬ್ರಿಟಿಷ್ ಆಧಿಪತ್ಯಕ್ಕೆ ಒಳಪಟ್ಟಿತ್ತು. ದ್ವಿತೀಯ  ವಿಶ್ವಯುದ್ಧದಲ್ಲಿ ಯಹೂದಿಯರು ಅನುಭವಿಸಿದ ಸಂಕಟಕ್ಕೆ ಮರುಗಿದ ಯುರೋಪಿಯನ್ ರಾಷ್ಟ್ರಗಳು, ಅವರಿಗೊಂದು ದೇಶ  ಕಟ್ಟಿಕೊಡಬೇಕೆಂದು ತೀರ್ಮಾನಿಸಿದಾಗ ಕಂಡದ್ದೇ  ಫೆಲೆಸ್ತೀನ್. ಆದರೆ ಈ ವಿಷಯದಲ್ಲಿ ಫೆಲೆಸ್ತೀನಿಯರನ್ನಾಗಲಿ, ಅರಬ್ ರಾಷ್ಟ್ರಗಳನ್ನಾಗಲಿ ಬ್ರಿಟಿಷ್ ಸಹಿತ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ವಿಶ್ವಾಸಕ್ಕೆ ಪಡಕೊಳ್ಳಲಿಲ್ಲ. ಯಹೂದಿಯರಿಗೆ ಯಾಕೆ ಫೆಲೆಸ್ತೀ ನಿನಲ್ಲೇ  ರಾಷ್ಟ್ರ  ಕಟ್ಟಿ ಕೊಡಬೇಕು, ಅವರನ್ನು ನಿರ್ದಯವಾಗಿ ನಡೆಸಿಕೊಂಡ ಹಿಟ್ಲರನ ಜರ್ಮನಿಯಲ್ಲೇಕೆ ಅದನ್ನು ನಿರ್ಮಿಸಬಾರದು  ಎಂಬ ಪ್ರಶ್ನೆಯನ್ನೂ ಈ ರಾಷ್ಟçಗಳು ಕಿವಿಗೆ ಹಾಕಿಕೊಳ್ಳಲಿಲ್ಲ. ಹೀಗೆ 1948ರಲ್ಲಿ ಹುಟ್ಟುವಾಗ ತೀರಾ ಸಣ್ಣ ಭೂಪ್ರದೇಶವನ್ನು ಹೊಂದಿದ್ದ  ಇಸ್ರೇಲ್ ಇವತ್ತು ಫೆಲೆಸ್ತೀನ್ ಭೂಮಿಯನ್ನು ಒತ್ತುವರಿ ನಡೆಸಿ ನಡೆಸಿ ಬೃಹತ್ತಾಗಿ ಬೆಳೆದಿದೆ. ವಿಶ್ವದಾದ್ಯಂತದ ಯಹೂದಿಯರನ್ನು ಅದು  ತನ್ನಲ್ಲಿಗೆ ಕರೆಸಿಕೊಳ್ಳುತ್ತಿದೆ ಮತ್ತು ಅವರ ವಸತಿಗಾಗಿ ಫೆಲೆಸ್ತೀನಿ ನಾಗರಿಕರನ್ನು ಒಕ್ಕಲೆಬ್ಬಿಸಿ ಭೂವಿಸ್ತರಣೆ ಮಾಡುತ್ತಿದೆ. ಅಂದಹಾಗೆ,

ಇಸ್ರೇಲ್ ರಾಷ್ಟ್ರವನ್ನು ಫೆಲೆಸ್ತೀನಿ ಮಣ್ಣಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಕಾರಣದಿಂದಲೇ ಅರಬ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ  3 ಯುದ್ಧಗಳನ್ನು ನಡೆಸಿವೆ. ಮೊದಲನೆಯದ್ದು, 1948ರಲ್ಲಿ. ಅಮೇರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ಪೂರ್ಣ ಪ್ರಮಾಣದ  ಬೆಂಬಲ ಇಲ್ಲದೇ ಇರುತ್ತಿದ್ದರೆ ಈ ಯುದ್ಧಗಳಲ್ಲಿ ಇಸ್ರೇಲ್‌ಗೆ ಗೆಲುವು ಸಿಗುವುದಕ್ಕೆ ಸಾಧ್ಯವೇ ಇರಲಿಲ್ಲ. ಒಂದುಕಡೆ ತನ್ನ ಮಣ್ಣಿನಲ್ಲಿ  ಯಹೂದಿಯರಿಗೆ ಅಕ್ರಮವಾಗಿ ರಾಷ್ಟ್ರವೊಂದನ್ನು ನಿರ್ಮಿಸಿದ್ದು ಮತ್ತು ಇನ್ನೊಂದು ಕಡೆ ಆ ರಾಷ್ಟ್ರಕ್ಕೆ ಶಸ್ತ್ರಾಸ್ತ್ರ, ಹಣಕಾಸು ಸಹಿತ ಸರ್ವ  ನೆರವನ್ನೂ ಅಮೇರಿಕ ಸಹಿತ ವಿವಿಧ ರಾಷ್ಟ್ರಗಳು ನೀಡುತ್ತಿರುವುದು- ಇವೆರಡೂ ಫೆಲೆಸ್ತೀನಿಯರಲ್ಲಿ ಕಿಚ್ಚು ಹಚ್ಚಿದ್ದರೆ, ಅದು ಅಸಹಜವಲ್ಲ.  ಆದ್ದರಿಂದಲೇ, ಇಸ್ರೇಲ್ ಜೊತೆ ಅವಿರತ ಶಾಂತಿ ಒಪ್ಪಂದ ಮಾಡಿಕೊಂಡು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ ನೋಬೆಲ್ ಪ್ರಶಸ್ತಿಗೆ ಭಾಜನರಾದ ಫೆಲೆಸ್ತೀನ್ ನಾಯಕ ಯಾಸಿರ್ ಅರಫಾತ್ ಅವರು 1948ರ ಯುದ್ಧದಲ್ಲಿ ಭಾಗಿಯಾಗಿದ್ದರು. 1983ರಿಂದ 93ರ ವರೆಗೆ ಟ್ಯುನೀಶಿಯಾದಲ್ಲಿ ನೆಲೆಸಿ ಫೆಲೆಸ್ತೀನ್ ವಿಮೋಚನೆಗಾಗಿ ಹೋರಾಡಿದ್ದರು. 1993ರಲ್ಲಿ ಗಾಝಾಕ್ಕೆ ಮರಳಿ ಸ್ವಾಯತ್ತ ಸರ್ಕಾರ ರಚಿಸಿದರು.  ಆ ಬಳಿಕ ಇಸ್ರೇಲ್ ಜೊತೆ ಕ್ಯಾಂಪ್ ಡೇವಿಡ್ ಸಭೆ, ಓಸ್ಲೋ ಒಪ್ಪಂದ, ಮ್ಯಾಡ್ರಿಡ್ ಕಾನ್ಫರೆನ್ಸ್ ನಡೆಸಿದರು. ಆದರೆ ಇಸ್ರೇಲ್ ಈ ಒಪ್ಪಂದವನ್ನು ಪಾಲಿಸಲಿಲ್ಲ ಎಂದು ಮಾತ್ರವಲ್ಲ, ಶಾಂತಿದೂತ ಅರಫಾತ್‌ರನ್ನು ನಿರ್ದಯವಾಗಿ ನಡೆಸಿಕೊಂಡಿತು. ಜಾಗತಿಕವಾಗಿಯೇ  ಅತ್ಯಂತ ಜನಪ್ರಿಯ ನಾಯಕರಾಗಿದ್ದ ಮತ್ತು ಫತಹ್ ರಾಜಕೀಯ ಪಕ್ಷದ ಪ್ರಮುಖರಾಗಿದ್ದ ಅವರಿಗೆ 2002ರಿಂದ 2004ರ ವರೆಗೆ  ಅಕ್ಷರಶಃ ನಿರ್ಬಂಧವನ್ನು ಹೇರಿತು. ಫೆಲೆಸ್ತೀನ್‌ನ ರಮಲ್ಲಾ  ಪ್ರದೇಶದಿಂದ ಹೊರಹೋಗುವುದಕ್ಕೆ ತಡೆ ಹೇರಿತು. ಅವರು  ಹೊರರಾಷ್ಟ್ರಗಳಿಗೆ ಭೇಟಿಕೊಟ್ಟು ಇಸ್ರೇಲ್ ಮೇಲೆ ಒತ್ತಡ ಹೇರದಂತೆ ತಡೆಯುವುದೇ ಈ ನಿರ್ಬಂಧದ ಉದ್ದೇಶವಾಗಿತ್ತು. 2004ರಲ್ಲಿ ಈ  ಅರಫಾತ್ ನಿಧನರಾದರು. ಅವರ ಶಾಂತಿ ಯತ್ನ ಮತ್ತು ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೇ ಇಸ್ರೇಲ್ ವಿಷವಿಕ್ಕಿ ಕೊಂದಿದೆ ಎಂಬ  ಸಂದೇಹವೂ ಅಸ್ತಿತ್ವದಲ್ಲಿದೆ. ನಿಜವಾಗಿ,

ಈ ಅರಫಾತ್‌ರನ್ನು ನಿರ್ದಯವಾಗಿ ನಡೆಸಿಕೊಂಡ ಕಾರಣದಿಂದ ಹುಟ್ಟಿಕೊಂಡಿರುವ ರಾಜಕೀಯ ಸಂಘಟನೆಯೇ ಹಮಾಸ್. 1987ರಲ್ಲಿ  ಈ ಹಮಾಸ್ ರಚನೆಗೊಳ್ಳುವ ಮೊದಲೇ ಇಸ್ರೇಲ್‌ನ ಕೈಗಳಲ್ಲಿ ಸಾಕಷ್ಟು ರಕ್ತದ ಕಲೆಗಳಿದ್ದುವು. ಇಸ್ರೇಲ್‌ನ ದಾಳಿಯಿಂದ ಮತ್ತು  ಭೂವಿಸ್ತರಣಾ ದಾಹದಿಂದ ಚೆಲ್ಲಾಪಿಲ್ಲಿಯಾದ ಫೆಲೆಸ್ತೀನಿಯರು ಪಕ್ಕದ ವಿವಿಧ ಅರಬ್ ರಾಷ್ಟ್ರಗಳಿಗೆ ಹೋಗಿ ನಿರಾಶ್ರಿತ ಶಿಬಿರಗಳಲ್ಲಿ  ನೆಲೆಸಿದ್ದರು. ಅದರಲ್ಲಿ ಲೆಬನಾನ್ ನ  ಶಬ್ರ-ಶತೀಲ ಎಂಬ ನಿರಾಶ್ರಿತ ಶಿಬಿರವೂ ಒಂದು. 1982ರಲ್ಲಿ ಈ ನಿರಾಶ್ರಿತ ಶಿಬಿರದ ಮೇಲೆ ಬಾಂಬ್  ಹಾಕಿದ ಇಸ್ರೇಲ್ ಸುಮಾರು ಮೂರೂವರೆ ಸಾವಿರಕ್ಕಿಂತಲೂ ಅಧಿಕ ಮಂದಿಯ ಮಾರಣಹೋಮಕ್ಕೆ ಕಾರಣವಾಗಿತ್ತು. ಆದ್ದರಿಂದ, ಹಮಾಸ್‌ನಿಂದಾಗಿ  ಇಸ್ರೇಲ್ ಹಿಂಸಾರೂಪ ತಾಳಿದೆ ಎಂಬುದು ಅಪ್ಪಟ ಸುಳ್ಳು. ಇಸ್ರೇಲ್‌ನ ಹಿಂಸೆಯನ್ನು ಪ್ರತಿರೋಧಿಸುವ ಉದ್ದೇಶದಿಂದಲೇ ಹಮಾಸ್  ಸ್ಥಾಪನೆಯಾಗಿದೆ. ಅದು ಅಲ್ ಖೈದಾ, ಐಸಿಸ್, ಲಷ್ಕರೆ ತ್ವಯಿಬಾ ಅಥವಾ ಆಫ್ರಿಕನ್ ಸಶಸ್ತ್ರ  ದಳಗಳಂತೆ ಇನ್ನಾವುದೋ ರಾಷ್ಟ್ರದ ಮೇಲೆ  ಗೆರಿಲ್ಲಾ ಹೋರಾಟ ನಡೆಸುತ್ತಿಲ್ಲ. ತನ್ನದೇ ಭೂಮಿಯಲ್ಲಿ ಅಕ್ರಮವಾಗಿ ರಚಿಸಲ್ಪಟ್ಟ ರಾಷ್ಟ್ರದ ವಿರುದ್ಧ ವಿಮೋಚನೆಯ ಹೋರಾಟ  ನಡೆಸುತ್ತಿದೆ. ಆದ್ದರಿಂದಲೇ, ಹಮಾಸನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವುದಕ್ಕೆ ಟರ್ಕಿ, ಇರಾನ್, ರಷ್ಯಾ ಸಹಿತ ವಿವಿಧ  ಅರಬ್ ರಾಷ್ಟ್ರಗಳು ಈಗಲೂ ಹಿಂಜರಿಯುತ್ತಿವೆ. ಅಷ್ಟಕ್ಕೂ,

ಈ 2023ರಲ್ಲಿ ಈವರೆಗೆ 200ಕ್ಕಿಂತ ಅಧಿಕ ಫೆಲೆಸ್ತೀನಿಯರನ್ನು ಇಸ್ರೇಲ್ ಹತ್ಯೆ ಮಾಡಿದೆ. 2022ರಲ್ಲಿ 220 ಮಂದಿ ಫೆಲೆಸ್ತೀನಿಯರನ್ನು  ಇಸ್ರೇಲ್ ಹತ್ಯೆ ಮಾಡಿತ್ತು. ಇದರಲ್ಲಿ 30 ಮಕ್ಕಳು. ಮಾತ್ರವಲ್ಲ, ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ 45ರಷ್ಟು ಮಸೂದೆಗಳು  ಅಂಗೀಕಾರಗೊಂಡಿವೆ. ಆದರೆ ಅವುಗಳಲ್ಲಿ ಒಂದಕ್ಕೂ ಇಸ್ರೇಲ್ ಕಿಂಚಿತ್ ಬೆಲೆಯನ್ನೂ ಕೊಟ್ಟಿಲ್ಲ. ಫೆಲೆಸ್ತೀನಿನಲ್ಲಿ ಇಸ್ರೇಲ್ ನಡೆಸುತ್ತಿ ರುವ  ಕ್ರೌರ್ಯಗಳ ತನಿಖೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ನಡೆಸಬೇಕೆಂಬ ಮಸೂದೆ ಕಳೆದ ವರ್ಷ ವಿಶ್ವಸಂಸ್ಥೆಯಲ್ಲಿ  ಮಂಡಿಸಲಾಗಿತ್ತು. ಇದನ್ನು ಅಮೇರಿಕ, ಬ್ರಿಟನ್, ಜರ್ಮನಿ ಸಹಿತ 26 ರಾಷ್ಟ್ರಗಳು ವಿರೋಧಿಸಿದವು. ಆದರೆ 87 ರಾಷ್ಟ್ರಗಳು ಬೆಂಬಲಿಸುವುದರೊಂದಿಗೆ ಅದು ಅಂಗೀಕಾರಗೊಂಡಿತ್ತು. ಆದರೆ, ಅಂತಾರಾಷ್ಟೀಯ ನ್ಯಾಯಾಲಯಕ್ಕೆ ಇಸ್ರೇಲನ್ನು ಸ್ಪರ್ಶಿಸಲೂ ಈವರೆಗೂ  ಸಾಧ್ಯವಾಗಿಲ್ಲ. ಹಾಗಂತ,

1987ರಲ್ಲಿ ಸ್ಥಾಪನೆಗೊಂಡ ಬಳಿಕದಿಂದ ಈವರೆಗೆ ಇಸ್ರೇಲ್ ನಾಗರಿಕರ ಮೇಲೆ ಹಮಾಸ್ ದಾಳಿಯನ್ನೇ ನಡೆಸಿರಲಿಲ್ಲ. ಅದರ  ರಾಕೆಟ್‌ಗಳು, ಹೋರಾಟಗಳಿಗೆಲ್ಲ ಸೇನೆಯೇ ಗುರಿಯಾಗಿತ್ತು. ಈ ಬಾರಿ ಅದು ಹೋರಾಟದ ದಾರಿಯನ್ನು ಬದಲಿಸಿದೆ. ಆದ್ದರಿಂದಲೇ,  ಹಮಾಸನ್ನು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವುದು ತಪ್ಪಾಗುವುದಿಲ್ಲ. ಇದೇವೇಳೆ, ಇಸ್ರೇಲ್ ಉದ್ದಕ್ಕೂ ಫೆಲೆಸ್ತೀನ್ ನಾಗರಿಕರ ವಿರುದ್ಧವೇ  ದಾಳಿ ನಡೆಸುತ್ತಾ ಬಂದಿದೆ ಎಂಬ ಪ್ರಜ್ಞೆಯೂ ಈ ಪ್ರಶ್ನೆ ಎಸೆಯುವವರಿಗೆ ಇರಬೇಕು. 2014ರಲ್ಲಿ 3 ಮಂದಿ ಇಸ್ರೇಲಿ ಯೋಧರನ್ನು  ಹಮಾಸ್ ಅಪಹರಿಸಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ದಾಳಿಗೆ 2100 ಮಂದಿ ಫೆಲೆಸ್ತೀನಿ ನಾಗರಿಕರು ಮೃತಪಟ್ಟಿದ್ದರು.  ಅಂದಹಾಗೆ, ಇಸ್ರೇಲ್‌ನ ಕ್ರೌರ್ಯದ ಬಗ್ಗೆ ಏನೊಂದೂ ಮಾತನಾಡದೆ ಫೆಲೆಸ್ತೀನಿಯರ ಪ್ರತಿರೋಧವನ್ನೇ ಜಾಗತಿಕ ಬಲಿಷ್ಠ ರಾಷ್ಟ್ರಗಳು  ಈವರೆಗೆ ಕಟೆಕಟೆಯಲ್ಲಿ ನಿಲ್ಲಿಸುತ್ತಾ ಬಂದಿದೆ. ಅದರ ಫಲಿತಾಂಶವೇ ಸಹನೆಯ ಕಟ್ಟೆಯೊಡೆದ ಈ ಪ್ರತಿಕ್ರಿಯೆ ಎಂದೂ ಹೇಳಬಹುದು.  ಇದು ಸಮಸ್ಯೆಗೆ ಪರಿಹಾರ ಅಲ್ಲದೇ ಇರಬಹುದು. ಆದರೆ ಪರಿಹಾರ ಆಗಬಹುದಾದ ಅನೇಕ ಸಂದರ್ಭಗಳನ್ನು ಮತ್ತು ಅವಕಾಶಗಳನ್ನು  ಇವೇ ಬಲಿಷ್ಠ ರಾಷ್ಟ್ರಗಳು ಉದ್ದೇಶಪೂರ್ವಕ ಹಾಳುಮಾಡಿದುವಲ್ಲ, ಇಸ್ರೇಲ್‌ನ ಸಕಲ ಕ್ರೌರ್ಯಕ್ಕೂ ಬೆಂಗಾವಲಾಗಿ ನಿಂತುವಲ್ಲ, ಅದೇಕೆ  ಚರ್ಚೆಗೆ ಒಳಗಾಗುತ್ತಿಲ್ಲ? ಇಸ್ರೇಲ್‌ನ ಹಿಂಸೆಗೆ ಮೌನ ಸಮ್ಮತಿ ಕೊಡುತ್ತಾ ಫೆಲೆಸ್ತೀನಿಯರ ಪ್ರತಿರೋಧವನ್ನೇ ಗಂಟಲು ಬಿರಿದು  ವಿರೋಧಿಸುತ್ತಿರುವುದೇಕೆ? ಹಾಗಂತ, ಪ್ರತಿರೋಧವೊಂದು ನಾಗರಿಕರ ಮೇಲಿನ ಹಿಂಸಾತ್ಮಕ ದಾಳಿಯಾಗಿ ಪರಿವರ್ತನೆಗೊಳ್ಳುವುದನ್ನು  ಒಪ್ಪಲು ಖಂಡಿತ ಸಾಧ್ಯವಿಲ್ಲ. 

ಇನ್ನಾದರೂ ಬಲಿಷ್ಠರು ಫೆಲೆಸ್ತೀನಿಯರಿಗಾದ ಅನ್ಯಾಯವನ್ನು ಸರಿಪಡಿಸಲಿ.