ಉತ್ತರ ಪ್ರದೇಶ: ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಮುಸ್ಲಿಂ ವೃದ್ಧನ ಗಡ್ಡ ಕತ್ತರಿಸಿ ಹಲ್ಲೆ

0
1917

ಸನ್ಮಾರ್ಗ ವಾರ್ತೆ

ಗಾಝಿಯಾಬಾದ್: ಉತ್ತರ ಪ್ರದೇಶದ ಗಾಝಿಯಾಬಾದ್‍ನ ಲೋನಿ ಎಂಬಲ್ಲಿ ಮಸೀದಿಗೆ ಹೋದ ಮುಸ್ಲಿಂ ವೃದ್ಧನನ್ನು ಎತ್ತಿಕೊಂಡು ಹೋಗಿ ಜೈಶ್ರೀರಾಮ್, ವಂದೇ ಮಾತರಂ ಕೂಗಲು ಹೇಳಿದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಲ್ಲದೇ, ಗಡ್ಡ ಕತ್ತರಿಸಿ ಅಮಾನವೀಯತೆ ಮೆರೆದ ಬಗ್ಗೆ ವರದಿಯಾಗಿದೆ. ಜೂನ್ ಐದರಂದು ಘಟನೆ ನಡೆದಿದ್ದು ಇದರ ವೀಡಿಯೊ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಅಬ್ದುಸ್ಸಮದ್ ಎಂಬ ಹಿರಿಯ ವ್ಯಕ್ತಿ ಆಟೊದಲ್ಲಿ ಹೋಗುವಾಗ ದುಷ್ಕರ್ಮಿಗಳು ಅವರನ್ನು ಅಪಹರಿಸಿ ಹತ್ತಿರದ ಗುಡಿಸಲಿಗೆ ಎತ್ತಿಕೊಂಡು ಹೋಗಿ ಕೋಣೆಯಲ್ಲಿ ಕೂಡಿ ಹಾಕಿ ಜೈಶ್ರೀರಾಮ್, ವಂದೇ ಮಾತರಂ ಕೂಗಲು ಹೇಳಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಬೆತ್ತದಿಂದ ಹೊಡೆಯುತ್ತಿರುವುದು ವೀಡಿಯೊದಲ್ಲಿ ಕಾಣಬಹುದಾಗಿದೆ.

ಸಮದ್ ಪಾಕಿಸ್ತಾನಿ ಗೂಢಚಾರನೆಂದು ದುಷ್ಕರ್ಮಿಗಳು ಆರೋಪಿಸಿದ್ದು, ಮೂವರು ಸೇರಿ ಈ ವೃದ್ಧನಿಗೆ ಹಲ್ಲೆ ನಡೆಸಿದ್ದಾರೆ. ಒಬ್ಬ ಸಮದ್‍ರಿಗೆ ಕತ್ತಿ ತೋರಿಸಿ ಬೆದರಿಸಿದ್ದಾರೆ. ಗಡ್ಡ ಕತ್ತರಿಸಿದ್ದಾನೆ.’ ಮಸೀದಿಗೆ ಹೋಗುವಾಗ ಆಟೊದಲ್ಲಿ ಬಂದ ಒಬ್ಬ ಲಿಫ್ಟ್ ಕೊಟ್ಟಿದ್ದು, ಬಳಿಕ ಇಬ್ಬರು ಅದರಲ್ಲಿ ಹತ್ತಿದರು. ನಂತರ ನನ್ನನ್ನು ಅವರು ಒಂದು ಮನೆಗೆ ಕರೆದುಕೊಂಡು ಹೋಗಿ ಘೋಷಣೆ ಕೂಗಲು ಬಲವಂತಪಡಿಸಿದರು. ನನ್ನ ಮೊಬೈಲ್ ಕಿತ್ತುಕೊಂಡರು. ಗಡ್ಡ ಕತ್ತರಿಸಿದರು. ಎಂದು ಸಮದ್ ಗದ್ಗದಿತರಾಗಿ ಹೇಳಿದರು.

ಬೇರೆ ಮುಸ್ಲಿಮರಿಗೆ ಹೊಡೆಯುವ ವೀಡಿಯೊವನ್ನು ತೋರಿಸಿಕೊಟ್ಟರು. ಇದಕ್ಕಿಂತ ಮೊದಲು ಹಲವು ಮುಸ್ಲಿಮರನ್ನು ಕೊಂದದ್ದಾಗಿ ಅವರು ಹೇಳುತ್ತಿದ್ದರು ಎಂದು ಸಮದ್ ಹೇಳಿದರು. ಪ್ರಧಾನ ಆರೋಪಿ ಪ್ರವೇಶ್ ಗುಜ್ಜರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತರರ ಬಂಧನಕ್ಕೆ ಶೋಧ ನಡೆಸಲಾಗಿದ್ದು ಸೂಕ್ತ ಕ್ರಮ ಜರಗಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಅತುಲ್ ಕುಮಾರ್ ಸೋಲಂಕಿ ಹೇಳಿದರು. ಇದೇ ವೇಳೆ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಈವರೆಗೆ ತಪ್ಪೊಪ್ಪಿಕೊಂಡಿಲ್ಲ.