ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದ ಎಲ್​ಜೆಪಿ ಸಂಸದರು: ಬಂಡಾಯದ ತಂಡಕ್ಕೆ ಚಿಕ್ಕಪ್ಪನೇ ಸಾರಥ್ಯ..!

0
207

ಸನ್ಮಾರ್ಗ ವಾರ್ತೆ

ಪಾಟ್ನ: ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ್ ಜನಶಕ್ತಿ ಪಾರ್ಟಿ(ಎಲ್​ಜೆಪಿ)ಯಲ್ಲಿ ಬಂಡಾಯ ಸೃಷ್ಟಿಯಾಗಿದ್ದು ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್‍ರನ್ನು ಕೈಬಿಟ್ಟು ಪಾರ್ಟಿಯ ಉಳಿದ ಐವರು ಸಂಸದರು ಬೇರೆಯೇ ಬಣ ಮಾಡಿಕೊಂಡಿದ್ದಾರೆ. ಲೋಕಸಭೆಯಲ್ಲಿ ಬೇರೆಯೇ ಗುಂಪಾಗಿ ತಮ್ಮ ಪರಿಗಣಿಸಬೇಕೆಂದು ಚಿರಾಗ್ ತಂದೆಯ ಸಹೋದರ ಹಾಜಿಪುರ ಸಂಸದ ಪಶುಪತಿ ಕುಮಾರ್ ಪಾರಸ್ ನೇತೃತ್ವದಲ್ಲಿ ಸ್ಪೀಕರ್ ಗೆ ಪತ್ರ ಬರೆದಿದ್ದಾರೆ.

ಚಿರಾಗ್ ವಿರುದ್ಧ ತಮಗೆ ಯಾವುದೇ ವಿರೋಧ ಇಲ್ಲ ಎಂದು ಪಶುಪತಿ ಕುಮಾರ್ ಪಾರಸ್ ಹೇಳಿದ್ದು ನಾವು ಪಾರ್ಟಿಯನ್ನು ಒಡೆದಿಲ್ಲ. ರಕ್ಷಿಸಿದ್ದೇವೆ ಎಂದು ಹೇಳಿದ್ದಾರೆ. ಚಿರಾಗ್‍ರನ್ನು ಲೋಕಸಭೆಯಿಂದ ಪಾರ್ಟಿ ನಾಯಕತ್ವದಿಂದ ತೆರವು ಐವರು ಸಂಸದರ ನಿರ್ಧಾರವಾಗಿದೆ ಎಂದು ಅವರು ಹೇಳಿದರು.

ಚೌಧರಿ ಮೆಹಬೂಬ ಅಲಿ ಕೈಸರ್, ವೀಣಾ ದೇವಿ. ಪ್ರಿನ್ಸ್ ರಾಜ್ ಚಂದನ್ ಸಿಂಗ್ ಲೋಕಸಭೆ ಸ್ಪೀಕರ್ ಓಮ್ ಬಿರ್ಲರನ್ನು ಭೇಟಿಯಾಗಿ ಚಿರಾಗ್‍ರಿಂದ ಪ್ರತ್ಯೇಕಗೊಂಡಿರುವುದನ್ನು ತಿಳಿಸಿದ್ದಾರೆ. ಎನ್‍ಡಿಎಯ ಭಾಗವಾಗಿ ಎಲ್​ಜೆಪಿ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ. ಇದರ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದ್ದಾರೆ ಎಂದು ಹೇಳಲಾಗಿದ್ದು ಪಶುಪತಿನಾಥ್ ಪರಸ್‍ಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೊಡುವ ಭರವಸೆ ನೀಡಲಾಗಿದೆ ಎಂದು ವದಂತಿ ಎಲ್‍ಜೆಪಿಯೊಳಗೆ ಹರಡಿದೆ.

ಮಾಜಿ ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ನಿಧನರಾದ ನಂತರ ಅವರ ಮಗ ಚಿರಾಗ್ ಪಾಸ್ವಾನ್ ಎಲ್‍ಜೆಪಿ ಅಧ್ಯಕ್ಷರಾಗಿದ್ದರು. ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ರವರ ಜೆಡಿಯುಗೆ ಹಲವು ಕ್ಷೇತ್ರದಲ್ಲಿ ಭಾರೀ ಹೊಡೆತವನ್ನು ಎಲ್‍ಜೆಪಿ ನೀಡಿತ್ತು. ಚುನಾವಣೆಯ ಮೊದಲು ಎನ್‍ಡಿಎ ತೊರೆದ ಚಿರಾಗ್ ಜೆಡಿಯು ವಿರುದ್ಧ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ಇದೇ ವೇಳೆ ಈಗಿನ ಬೆಳವಣಿಗೆಯ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಹೊಸ ಬದಲಾವಣೆ ಬಿಜೆಪಿ-ಜೆಡಿಯುಗೆ ಲಾಭಕರವಾಗಲಿದೆ ಎಂದು ಪಾರ್ಟಿ ನಾಯಕರು ಹೇಳಿದರು.

ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕರಾಗಿ ಪಶುಪತಿ ಪಾರಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ANI ಸೋಮವಾರ ವರದಿ ಮಾಡಿದೆ. ಎಲ್‌ಜೆಪಿ ಆರು ಸಂಸದರಲ್ಲಿ ಐವರು ಅದರ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರುದ್ಧ ಕೈಜೋಡಿಸಿ ಪಾರಸ್ ಅವರನ್ನು ಅವರ ಸ್ಥಾನಕ್ಕೆ ಆಯ್ಕೆ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.