ಸನ್ಮಾರ್ಗ ವಾರ್ತೆ
ಅಲ್ಮೈಡಾ ಗ್ಲಾಡ್ಸನ್
ಆನೆಗಾಗಿ ಸಿನೆಮಾ ನಟ-ನಟಿಯರು, ಕೇಂದ್ರ ಮಂತ್ರಿ, ಸಂಸದರು, ಎಡ, ಬಲ, ಮಧ್ಯಪಂಥೀಯರು, ಸೋಷಿಯಲ್ ಮೀಡಿಯಾ ವಾರಿಯರ್ಸ್, ಐಟಿ ಸೆಲ್ ಸೋಲ್ಜರ್ಸ್ ಹೀಗೆ ಎಲ್ಲರೂ ಒಟ್ಟು ಸೇರಿದ್ದು ನೋಡಿ ಮನತುಂಬಿ ಬಂತಪ್ಪಾ. ಈ ದೇಶದಲ್ಲಿ, ದೇಶದ ಜನರಲ್ಲಿ ಎಷ್ಟೊಂದು ಸಂವೇದನೆಗಳಿವೆಯಲ್ವಾ? ಜನ ಎಷ್ಟೊಂದು ಭಾವುಕರಲ್ವಾ? ಒಂದು ದಿನದಲ್ಲಿ ಅದೆಷ್ಟು ಪೋಸ್ಟ್, ಎಷ್ಟೊಂದು ಆರ್ಟ್, ಸ್ಯಾಂಡ್ ಆರ್ಟ್, ವಿಡಿಯೋಗಳು, ‘ಐ ಸ್ಟ್ಯಾಂಡ್ ವಿದ್ ಆನೆ’ ಎನ್ನುವ ಅಭಿಯಾನಗಳು. ಸೂಪರ್ ಕಣ್ರೀ. ಲವ್ ಯೂ ಇಂಡಿಯಾ, ಸಾರಿ ಭಾರತ.
ಅಂದಹಾಗೆ ಕಳೆದ ಒಂದು ತಿಂಗಳಿನಿಂದ ಆಳುವ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ ಕಾರಣಕ್ಕೆ ಸಫೂರ್ ಝರ್ಗಾರ್ ಎನ್ನುವ ಇಪ್ಪತ್ತೆಂಟು ವರುಷದ ಗರ್ಭಿಣಿ ತಿಹಾರ್ ಜೈಲಿನಿದ್ದಾಳೆ. ಆಕೆ ಜೈಲಿಗೋದಾಗ, CAA/NRC ವಿರುದ್ಧದ ಪ್ರತಿಭಟನೆಗಾಗಿ ದೆಹಲಿಯ ಶಾಹೀನ್ಬಾಗ್ಗ್ ಎರಡು ತಿಂಗಳುಗಳ ಕಾಲ ಹೋಗುತ್ತಿದ್ದಾಗ, ಪ್ರತಿಭಟನೆಯ ನೆಪದಲ್ಲಿ ಸ್ವೇಚ್ಛಾಚಾರ ಮಾಡಿ ಶಾಹೀನ್ಬಾಗ್ನಲ್ಲಿ ಗರ್ಭ ಧರಿಸಿದ್ದಳೆಂದು ಟ್ವಿಟ್ಟರ್, ಫೇಸ್ಬುಕ್ ಹಾಗೂ ಇತರೆಡೆ ಬಾಡಿಗೆ ಪೋಸ್ಟ್ ಮಾಡಿದವರು ಇವತ್ತು ‘ಗರ್ಭಿಣಿ ಆನೆ’ಯ ಬಗ್ಗೆ ಮರುಕಪಡುತ್ತಿದ್ದಾರೆ. ಸಫೂರ್ ಮದುವೆಯಾಗದೇ, ಶಾಹೀನ್ಬಾಗ್ ಬಿರಿಯಾನ್ ತಿನ್ನುತ್ತಲೇ ಗರ್ಭಿಣಿಯಾದದ್ದು ಎಂದು ಕುಹಕವಾಡುತ್ತಿದ್ದವರಿದ್ದು ಇವತ್ತು ‘ಐ ಸ್ಟ್ಯಾಂಡ್ ವಿದ್ ಆನೆ’ಯಂತೆ. ದಂಗೆಗಳ ಸಮಯದಲ್ಲಿ ಐದು ತಿಂಗಳ ಗರ್ಭಿಣಿ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರಗೈದುದ್ದನ್ನು ಸಮರ್ಥಿಸಿಕೊಂಡವರು, ಇನ್ನೊಬ್ಬ ಗರ್ಭಿಣಿಯ ಹೊಟ್ಟೆಬಗೆದು ಭ್ರೂಣವನ್ನು ಚೆಂಡಾಡಿದ್ದನ್ನೂ ಸಮರ್ಥಿಸಿಕೊಂಡವರೆಲ್ಲಾ ನಿನ್ನೆಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸ್ಟ್ಯಾಂಡ್ ಹಾಕಿ ನಿಂತುಕೊಂಡಿದ್ದಾರೆ. ಹಿಪಾಕ್ರಿಟ್ಸ್!
ಹಳ್ಳಿಕಡೆಯಿಂದ ಬಂದವರಿಗೆ, ರೈತರಿಗೆ, ಕೃಷಿಕರಿಗೆ ಈ ‘ಪೈನಾಪಲ್ ಬಾಂಬ್’ನ ಕಥೆ ಗೊತ್ತಿರುತ್ತದೆ. ಹೊಲಕ್ಕೆ ನುಗ್ಗಿ ಬೆಳೆ ಹಾಳು ಮಾಡುವ ಕಾಡುಹಂದಿ, ನರಿ ಹಾಗೂ ಇತರೆ ಪ್ರಾಣಿಗಳನ್ನು ಗಾಯಗೊಳಿಸಲು, ಕೊಲ್ಲಲು, ಬೇಟೆಯಾಡಲು ಬಳಸುವ ವಿಧಾನ ಇದು. ಹೊಸತೇನಲ್ಲ. ಸೌತೆಕಾಯಿಯಲ್ಲೋ, ಅನಾನಸು, ಲಿಂಬೆಯಲ್ಲೋ ಸಿಡಿಮದ್ದನ್ನು ಅಡಗಿಸಿಟ್ಟು, ಹೊಲದಲ್ಲಿಡುತ್ತಾರೆ. ಕಾಡುಹಂದಿ ಬೇಟೆ ಮಾಡುವವರೂ ಇದನ್ನು ಬಳಸುತ್ತಾರೆ. ಇದನ್ನು ಕಾಡುಹಂದಿ, ನರಿ, ಅಥವಾ ಯಾವುದೇ ಪ್ರಾಣಿ ಕಚ್ಚಿದೊಡನೆ ಅದರಲ್ಲಿರುವ ಸಿಡಿಮದ್ದು ಸ್ಪೋಟಿಸಿ, ಅವುಗಳ ಬಾಯಿಗೆ ಗಾಯವಾಗುತ್ತೆ ಹಾಗೂ ಕೆಲವೊಮ್ಮೆ ಅವು ಸಾಯುತ್ತವೆ. ಈ ಆನೆಗೂ ಕೂಡಾ ನನಗನಿಸೋಲ್ಲ ಯಾರೂ ಇದನ್ನು ತಿನ್ನಿಸಿರಬಹುದೆಂದು. ಕಾಡುಬಿಟ್ಟ ನಾಡಿಗೆ ಬಂದ ಆನೆ ಎಲ್ಲೋ ಕಾಡುಹಂದಿಯನ್ನು ಬೇಟೆಯಾಡಲು ಅಡಗಿಸಿಟ್ಟ ಇಂಥದೊಂದು ಅನಾನಸನ್ನು ತಿಂದಿರೋದರಿಂದ ಅದು ಸ್ಪೋಟಿಸಿ ಆನೆಯ ಗಂಟಲು, ಬಾಯಿಯಲ್ಲಿ ತೀವೃ ಗಾಯಗಳಾಗಿವೆ. ಇದು ನಿನ್ನೆ-ಮೊನ್ನೆ ಅಥವಾ ಒಂದು ವಾರದ ಹಿಂದೆ ನಡೆದಿರಲಿಕ್ಕಿಲ್ಲ. ನಡೆದು ಇಪ್ಪತ್ತು-ಮೂವತ್ತು ದಿನಗಳೇ ಆಗಿರಬಹುದು. ಆದರೆ ಆನೆಗೆ ಸರಿಯಾದ ಚಿಕಿತ್ಸೆ ಸಿಗದೇ, ಗಾಯಗಳಿದ್ದ ಕಾರಣ ಸರಿಯಾಗಿ ಹೊಟ್ಟೆಗೆ ತಿನ್ನಲೂ ಆಗದೇ, ಅದು ಅಸುನೀಗಿದೆ. ಹೀಗಾಗಬಾರದಿತ್ತು. ಕಾಡಿನಲ್ಲಿದ್ದ ಆನೆ ನಾಡಿಗೆ ಬರುವಂತೆ ಮಾಡಿದ ಕಾರಣಗಳು, ಪರಿಸ್ಥಿತಿಗಳು ಹಾಗೂ ವ್ಯಕ್ತಿಗಳ ಬಗ್ಗೆ ಚರ್ಚೆಯಾಗಲಿ. ಆದರೆ
ಅದು ಆನೆಯನ್ನು ಕೊಲ್ಲಲೆಂದೇ ಮಾಡಿದೆನ್ನುವುದು ತೀರಾ ಬಾಲಿಶ. ಆ ಆನೆಯ ಬದಲಿಗೆ ಯಾವುದೋ ಕಾಡುಹಂದಿಯೋ, ಮೊಲನೋ, ಅಥವಾ ಇತರ ಯಾವುದೇ ಪ್ರಾಣಿ ತಿಂದು ಸತ್ತಿದ್ದರೆ, ಯಾರಿಗೂ ತಿಳಿಯುತ್ತಿದ್ದಿಲ್ಲ, ಯಾರೂ ‘ಐ ಸ್ಟ್ಯಾಂಡ್ ವಿದ್ ಕಾಡುಹಂದಿ’ ಎಂದು ಪೋಸ್ಟರ್ ಹಾಕಿ ತಿರುಗುತ್ತಿದ್ದಿಲ್ಲ. ತಮ್ಮ ಎಸಿ ಕೋಣೆಗಳು, ಐಷಾರಾಮಿ ಮನೆಗಳು, ಅಷ್ಟೇ ಐಷಾರಾಮಿ ಆಫೀಸ್ಗಳ ಹೊರಗೆನೂ ಒಂದು ಸಾಮಾನ್ಯವಾದ ಜಗತ್ತಿದೆಯೆಂದು ತಿಳಿಯದ ‘ಹೈ ಕ್ಲಾಸ್ ಬಟ್ ಲೋ ಐಕ್ಯೂ’ ಫೆಲ್ಲಾ ಹಾಗೂ ಫೆಲ್ಲಿಸ್ಗಳ ಪ್ರಕಾರ ಅದು ಕಮ್ಯೂನಿಸ್ಟರ ಬಾಂಬ್ ಅಂತೆ. ಬಲಪಂಥೀಯರನ್ನು ಕೊಲ್ಲಲು ತಯಾರಿಸಿಟ್ಟಿದ್ದ ಬಾಂಬನ್ನು ಆನೆಗೆ ಕೊಟ್ಟಿದ್ದಾರಂತೆ. ಹೆಚ್ಚಿನವರು ನಿನ್ನೆಯಿಂದ ‘ಸ್ಟ್ಯಾಡಿಂಗ್ ಪೊಜಿಶನ್’ನಲ್ಲಿರುವುದು ಘಟನೆ ನಡೆದದ್ದು ಕೇರಳದಲ್ಲೆಂದು. ಕಳೆದ ವರುಷ ಉತ್ತರಾಖಂಡ್ನಲ್ಲಿ ರಾಜಕಾರಣಿಯೊಬ್ಬರು ಕುದುರೆಯ ಕಾಲು ಮುರಿದು ಕೊನೆಗೆ ಆ ಕುದುರೆ ಸತ್ತಾಗ, ‘ಸ್ಲೀಪಿಂಗ್ ಪೊಜಿಶನ್’ನಲ್ಲಿದ್ದ ‘ಪೊಜಿಶನ್ ತಿಮ್ಮ’ಗಳೆಲ್ಲಾ ನಿನ್ನೆಯಿಂದ ಸ್ಟ್ಯಾಂಡ್ ಹಾಕಿ ನಿಂತುಬಿಟ್ಟಿದ್ದಾರೆ. ಇನ್ನೇನೆಲ್ಲಾ ಹೊರಬರುತ್ತೋ ನೋಡಬೇಕು.
ಆನೆ, ದನ ಅಥವಾ ಇನ್ಯಾವುದೇ ಪ್ರಾಣಿಗಾಗಿ ನಮ್ಮ ಹೃದಯ, ಮನಸ್ಸು ಮಿಡಿಯುವುದು ಉತ್ತಮನೇ. ತಪ್ಪಲ್ಲ. ಅವುಗಳೂ ಜೀವಸಂಕುಲದ ಕೊಂಡಿಗಳು. ಆದರೆ ಎರಡು ತಿಂಗಳುಗಳಿಂದ ಊಟ, ನೀರಿಲ್ಲದೆ ದೇಶದ ರಸ್ತೆಗಳಲ್ಲಿ ಸಾವಿರಾರು ಕಿಲೋಮೀಟರ್ ದೂರವನ್ನು ನಡೆದುಕೊಂಡೇ ಸ್ಲಿಪ್ಪರ್ ಅಲ್ಲ ಪಾದಗಳನ್ನೇ ಸವೆಸಿರುವ ಜನರ ಬಗ್ಗೆ ಒಂದೇ ಒಂದು ಮಾತೆತ್ತದವರ ವಾಲಿನಲ್ಲೆಲ್ಲಾ ಆನೆಗಾಗಿ ದುಖದ ಸಾಗರ ಹರಿದು, ಫೇಸ್ಬುಕ್ ವಾಲ್ ಕೂಡಾ ಒದ್ದೆಯಾಗಿ, ಲೀಕ್ ಆಗಲಾರಂಭಿಸಿದ್ದ ಮಾತ್ರ ಚೋದ್ಯದ ಸಂಗತಿ. ನನ್ನ ಪೋಸ್ಟಿನಲ್ಲೇ ‘ಕಾರ್ಮಿಕರು ತಮ್ಮ ಊರುಗಳನ್ನು ಬಿಡಲು ಯಾರು ಹೇಳಿದ್ದು’ ಎಂದು ಕೊಮೆಂಟ್ ಮಾಡಿದ ಮಹಾನುಭಾವನೊಬ್ಬ ನಿನ್ನೆಯಿಂದ ಆನೆಯನ್ನು ಮುದ್ದಾಡಿದ್ದೇ ಮುದ್ದಾಡಿದ್ದು. ಅದೆಷ್ಟು ಮಂದಿ ಗರ್ಭಿಣಿಯರು ಇದ್ದರು ಈ ಕಾರ್ಮಿಕರಲ್ಲಿ? ಅದೆಷ್ಟು ಮಂದಿ ಗರ್ಭಿಣಿಯರು ರಸ್ತೆಬದಿಯಲ್ಲೇ ಪ್ರಸವ ವೇದನೆ ಪಟ್ಟರು? ಅದೆಷ್ಟು ಮಂದಿ ಲಾರಿಯಲ್ಲೋ, ಬೀದಿಯಲ್ಲೋ ತಮ್ಮ ಮಗುವಿಗೆ ಜನುಮ ಕೊಟ್ಟರು? ಅದೆಷ್ಟು ಮಂದಿ ಮಹಿಳೆಯರು ಋತುಸ್ರಾವದ ಸಮಯದಲ್ಲಿ ಸರಿಯಾದ ಸ್ವಚ್ಚತೆ ಕಾಪಾಡಲಾಗದೇ, ನೀರು, ಟಾಯ್ಲೆಟ್, ಸ್ಯಾನಿಟರಿ ಪ್ಯಾಡ್ಸ್ ಇಲ್ಲದೇ ಹೈರಾಣಾದರು? ಆವಾಗ ಎಲ್ಲೋಗಿದ್ದವು ಈ ಇಮೋಷನ್ಸ್, ಸಂವೇದನೆ, ದುಖ, ಕಣ್ಣೀರು?
ಈ ದೇಶನೇ ವಿಚಿತ್ರ, ಇಲ್ಲಿನ ಜನಗಳು ಇನ್ನೂ ವಿಚಿತ್ರ. ಇಲ್ಲಿ ಒಂದು ದನ, ನಾಯಿ, ಆನೆಗಿರುವ ಬೆಲೆ ಮನುಷ್ಯ ಜೀವಕ್ಕಿಲ್ಲ. ದನದ ಮಾಂಸ ತಿಂದ ಎಂದು ಎರ್ರಾಬಿರ್ರಿಯಾಗಿ ಹೊಡೆದು ವ್ಯಕ್ತಿಯೊಬ್ಬನನ್ನು ಇರಿದು ‘ಜೈ’ ಎನ್ನುವರಲ್ಲಿ ಧುತ್ತೆಂದು ‘ದಯೆ’ ಎಲ್ಲಿಂದ ಹಾಗೂ ಹೇಗೆ ಹುಟ್ಟಿಕೊಳ್ಳುತ್ತೆ, ಅದು ನಾಟಕೀಯವಲ್ಲದಿದ್ದರೇ? ಪ್ರಾಣಿಗಳಿಗಾಗಿ ಮಿಡಿಯುವ ಹೃದಯಗಳಲ್ಲಿ ಮನುಷ್ಯರಿಗಾಗಿ ಒಂದು ನಯಾಪೈಸೆಯ ಸಂವೇದನೆಗಳಿಲ್ಲ. ಸೃಷ್ಟಿಯಲ್ಲಿನ ಎಲ್ಲಾ ಜೀವಗಳೂ ಸರಿಸಮಾನ, ಎಲ್ಲದಕ್ಕೂ ಬೆಲೆಯಿದೆ ಎಂದಮೇಲೆ, ಮನುಷ್ಯ ಜೀವಕ್ಕೂ ಬೆಲೆಯಿರಬೇಕಲ್ವೇ? ಐ ಸ್ತ್ಗ್ಯಾಂಡ್ ವಿದ್ ಆನೆಯೆನ್ನುವಾಗ ಕಣ್ಣೀರುಕ್ಕಿ ಬಂದು ‘ಐ ಸ್ಟ್ಗ್ಯಾಂಡ್ ವಿದ್ ಮೈಗ್ರೇಂಟ್ಸ್ ಎನ್ನಲು ನಾಲಿಗೆಗೆ ಗರಬಡಿಯುತ್ತದೆ ಎಂದರೆ ಹೃದಯ, ಮೆದುಳು ಇರಬೇಕಾದ ಜಾಗದಲ್ಲಿಲ್ಲ ಎಂದರ್ಥ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












