ಎಲಾನ್ ಮಸ್ಕ್‌ರ ಸ್ಟಾರ್‌ಲಿಂಕ್ ‘ಯುದ್ಧ ಸಾಧನ’: ಕ್ರಮ ಕೈಗೊಳ್ಳಲು ಇರಾನ್ ನಿರ್ಧಾರ

0
195

ಸನ್ಮಾರ್ಗ ವಾರ್ತೆ

ಟೆಹ್ರಾನ್: ಎಲಾನ್ ಮಸ್ಕ್ ಅವರ ಉಪಗ್ರಹ ಇಂಟರ್ನೆಟ್ ಸೇವೆಯಾದ ಸ್ಟಾರ್‌ಲಿಂಕ್ ವಿರುದ್ಧ ಇರಾನ್ ಸರ್ಕಾರ ಎಚ್ಚರಿಕೆ ನೀಡಿದೆ. ಸ್ಟಾರ್‌ಲಿಂಕ್ ಅನ್ನು ಶತ್ರು ದೇಶಗಳ ಯುದ್ಧದ ಆಯುಧ ಎಂದು ಇರಾನ್ ಬಣ್ಣಿಸಿದೆ. ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದು ಉಲ್ಲೇಖಿಸಿ ದೇಶದಲ್ಲಿ ನಿಷೇಧಿಸಲ್ಪಟ್ಟಿರುವ ಸ್ಟಾರ್‌ಲಿಂಕ್ ನೆಟ್‌ವರ್ಕ್ ಅನ್ನು ನಿರ್ಬಂಧಿಸಲು ಹೊಸ ತಂತ್ರಜ್ಞಾನಗಳನ್ನು ಬಳಸುವುದಾಗಿ ಇರಾನ್ ಘೋಷಿಸಿದೆ.

ಇರಾನ್‌ನ ಸುಪ್ರೀಂ ನ್ಯಾಷನಲ್ ಸೈಬರ್‌ಸ್ಪೇಸ್ ಕೌನ್ಸಿಲ್ ಕಾರ್ಯದರ್ಶಿ ಮೊಹಮ್ಮದ್ ಅಮೀನ್ ಅಗಮಿರಿ ಅವರು, ಸ್ಟಾರ್‌ಲಿಂಕ್ ಅನ್ನು ಮಾಹಿತಿ ಸಂಗ್ರಹಣೆ ಮತ್ತು ಗೂಢಚಾರಿಕೆಗಾಗಿ ಶತ್ರುಗಳು ಬಳಸುವ ಯುದ್ಧದ ಆಯುಧ ಎಂದು ಬಣ್ಣಿಸಿದ್ದಾರೆ. ಸ್ಟಾರ್‌ಲಿಂಕ್ ಟರ್ಮಿನಲ್‌ಗಳ ಸಿಗ್ನಲ್‌ಗಳನ್ನು ತಡೆಯಲು ಇರಾನ್ ವಿಶೇಷ ವ್ಯವಸ್ಥೆಗಳನ್ನು ಹೊಂದಿದೆ ಎಂದೂ ಅವರು ತಿಳಿಸಿದ್ದಾರೆ.

ಸ್ಟಾರ್‌ಲಿಂಕ್ ಸೇವೆಯನ್ನು ನಿರ್ಬಂಧಿಸಲು ಇರಾನ್ ರೇಡಿಯೋ ಫ್ರೀಕ್ವೆನ್ಸಿ ಜಾಮಿಂಗ್, ನಕಲಿ ಜಿಪಿಎಸ್ ಸ್ಥಳಗಳು, ಡ್ರೋನ್ ಗಸ್ತುಗಳು ಮತ್ತು ದಾಳಿಗಳನ್ನು ಬಳಸುತ್ತಿದೆ. ಸ್ಟಾರ್‌ಲಿಂಕ್ ಅನ್ನು ಬಳಸುವವರು ಅಥವಾ ಹೊಂದಿರುವವರು ಆರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗಬಹುದು. ಸಾಧನವನ್ನು ದೇಶಕ್ಕೆ ಕಳ್ಳಸಾಗಣೆ ಮಾಡುವವರು ಅಥವಾ ವಿತರಿಸುವವರು ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಬಹುದು. ರಾಷ್ಟ್ರೀಯ ಭದ್ರತೆ ಅಥವಾ ಗೂಢಚಾರಿಕೆ ಉಲ್ಲಂಘನೆ ಆರೋಪ ಹೊರಿಸಲ್ಪಟ್ಟವರು ಮರಣದಂಡನೆಯನ್ನು ಎದುರಿಸಬೇಕಾಗಬಹುದು.

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಕೈಗೊಂಡ ಮಿಲಿಟರಿ ಕ್ರಮಗಳ ನಂತರ ಇರಾನ್ ತೀವ್ರ ಆರ್ಥಿಕ ಮತ್ತು ಮಿಲಿಟರಿ ಪರಿಣಾಮಗಳನ್ನು ಎದುರಿಸುತ್ತಿದೆ. ಇರಾನ್ ಈ ವರ್ಷವೇ ಎರಡು ಪ್ರಮುಖ ಇಂಟರ್ನೆಟ್ ಕಡಿತಗಳಿಗೆ ಸಾಕ್ಷಿಯಾಗಿದೆ. ತಮ್ಮ ಅಧಿಕಾರವಧಿಯಲ್ಲಿ (2021-2022) ಹತ್ತಾರು ಸಾವಿರ ಸ್ಟಾರ್‌ಲಿಂಕ್ ಸಾಧನಗಳನ್ನು ರಹಸ್ಯವಾಗಿ ಇರಾನ್‌ಗೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಇಸ್ರೇಲ್‌ನ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ದಾವೆ ಮಾಡಿದ್ದಾರೆ.

ಸ್ಟಾರ್‌ಲಿಂಕ್‌ನ ಕಾನೂನುಬಹಿರ ಪ್ರಸಾರವನ್ನು ನಿಲ್ಲಿಸುವಂತೆ ಅಮೆರಿಕ ಮತ್ತು ನಾರ್ವೆ ಮೇಲೆ ಒತ್ತಡ ಹೇರಲು ಇರಾನ್ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟವನ್ನು ಸಂಪರ್ಕಿಸಿದೆ. ಅಕ್ಟೋಬರ್ 4 ರಂದು, ಇರಾನ್ ವಿದೇಶಾಂಗ ಸಚಿವಾಲಯವು ಟೆಹ್ರಾನ್‌ನಲ್ಲಿರುವ ನಾರ್ವೆಯ ರಾಯಭಾರಿಯನ್ನು ಕರೆಸಿ ತನ್ನ ಅಧಿಕೃತ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ಸ್ಟಾರ್‌ಲಿಂಕ್ ಸೌಲಭ್ಯವು ವಿಸ್ತರಿಸಿದರೆ ಅದು ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಇರಾನ್ ನಂಬುತ್ತದೆ.

ಸರ್ಕಾರದ ಕಣ್ಗಾವಲು ಸಂಪೂರ್ಣವಾಗಿ ತಪ್ಪಿಸಿ, ಒಂದೇ ಟರ್ಮಿನಲ್ ಬಳಸಿ ಏಕಕಾಲದಲ್ಲಿ ಅನೇಕ ಜನರು ಇಂಟರ್ನೆಟ್ ಬಳಸಲು ಸ್ಟಾರ್‌ಲಿಂಕ್ ಅವಕಾಶ ಮಾಡಿಕೊಡುವುದು ಇದರ ವಿಶೇಷತೆಯಾಗಿದೆ.