ಹಿಂದೂ ಧರ್ಮದಿಂದ ಇಸ್ಲಾಮ್‌ಗೆ ಮತಾಂತರಗೊಂಡವರು ಹಿಂದುಳಿದ ವರ್ಗಗಳ ಮೀಸಲಾತಿಗೆ ಅರ್ಹರಲ್ಲ: ಸುಪ್ರೀಂ ಕೋರ್ಟ್

0
124

ಸನ್ಮಾರ್ಗ ವಾರ್ತೆ

ಹೊಸದೆಹಲಿ: ಹಿಂದೂ ಧರ್ಮದಿಂದ ಇಸ್ಲಾಮ್‌ಗೆ ಮತಾಂತರಗೊಳ್ಳುವ ವ್ಯಕ್ತಿಯು ಮತಾಂತರಕ್ಕೂ ಮುಂಚಿನ ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಹೊಸ ಧರ್ಮದಲ್ಲಿ ಮೀಸಲಾತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮತಾಂತರಗೊಂಡ ವ್ಯಕ್ತಿಯು ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಮದ್ರಾಸ್ ಹೈಕೋರ್ಟ್‌ನ ಜೂನ್ 25 ರ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ನ್ಯಾಯಮೂರ್ತಿಗಳಾದ ಪಿ. ಕೆ. ಮಿಶ್ರಾ ಮತ್ತು ಶ್ರೀ ಚಂದ್ರಶೇಖರ್ ಅವರಿದ್ದ ಪೀಠವು ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ.

ಹೊಸದಾಗಿ ಸ್ವೀಕರಿಸಿದ ಧರ್ಮದಲ್ಲಿ ಹಿಂದುಳಿದ ವರ್ಗದ ಸ್ಥಾನಮಾನವನ್ನು ಒದಗಿಸಲು ಮತಾಂತರಕ್ಕೂ ಮುನ್ನ ಸಾಮಾಜಿಕ ವ್ಯವಸ್ಥೆಯಲ್ಲಿ ಅನುಭವಿಸಿದ ಹಿಂದುಳಿದಿರುವಿಕೆಯನ್ನು ‘ಮುಂದಕ್ಕೆ ತೆಗೆದುಕೊಂಡು ಹೋಗಲು’ (ಕ್ಯಾರಿ ಫಾರ್ವರ್ಡ್ ಮಾಡಲು) ಸಾಧ್ಯವಿಲ್ಲ ಎಂದು ಪೀಠವು ಗಮನಿಸಿದೆ.

ಸಂವಿಧಾನದ ಮೂರನೇ ಪ್ಯಾರಾಗ್ರಾಫ್ ಅಡಿಯಲ್ಲಿ, ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮಗಳನ್ನು ಹೊರತುಪಡಿಸಿ ಇತರ ಧರ್ಮಗಳನ್ನು ಅನುಸರಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬೆಟ್ಟು ಮಾಡಿದೆ. ಆದ್ದರಿಂದ, ನಿರ್ದಿಷ್ಟಪಡಿಸದ ಧರ್ಮಕ್ಕೆ ಮತಾಂತರಗೊಳ್ಳುವುದರೊಂದಿಗೆ, ಈ ಹಿಂದೆ ಹೊಂದಿದ್ದ ಜಾತಿಗೆ ಸಂಬಂಧಿಸಿದ ಪರಿಶಿಷ್ಟ ಜಾತಿಯ ಸ್ಥಾನಮಾನವು ಇಲ್ಲವಾಗುತ್ತದೆ. ಸಂವಿಧಾನದ ವಿಧಿ 16(4) ರ ಅಡಿಯಲ್ಲಿ ಪರಿಶಿಷ್ಟ ಜಾತಿಯ ಸದಸ್ಯತ್ವದ ಆಧಾರದ ಮೇಲಿನ ಮೀಸಲಾತಿ ಸೌಲಭ್ಯಗಳನ್ನು ನಂತರ ಪಡೆಯಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹೊಸ ಧರ್ಮದಲ್ಲಿ ಅಧಿಸೂಚಿತ ಹಿಂದುಳಿದ ವರ್ಗಕ್ಕೆ ಮತಾಂತರಗೊಳ್ಳುವ ವ್ಯಕ್ತಿಯ ಹಿಂದಿನ ಜಾತಿ ಅಥವಾ ಸಮುದಾಯದ ಸ್ಥಾನಮಾನವನ್ನು ಮತಾಂತರವೊಂದೇ ಬದಲಾಯಿಸಲು ಸಾಧ್ಯವಿಲ್ಲ ಎಂದೂ ಪೀಠವು ವಿವರಿಸಿದೆ. ಹಿಂದಿನ ಸಾಮಾಜಿಕ ಹಿಂದುಳಿದಿರುವಿಕೆಯು ಹೊಸ ಧರ್ಮದಲ್ಲಿ ಮತ್ತೊಂದು ಹಿಂದುಳಿದ ವರ್ಗದ ಸ್ಥಾನಮಾನಕ್ಕೆ ಕಾನೂನುಬದ್ಧ ಆಧಾರವಾಗಲು ಸಾಧ್ಯವಿಲ್ಲ.

ಹಿಂದೂ ಧರ್ಮದಿಂದ ಇಸ್ಲಾಮ್‌ಗೆ ಮತಾಂತರಗೊಂಡು, 2016 ರಲ್ಲಿ ಇಸ್ಲಾಮಿಕ್ ಸಂಪ್ರದಾಯದಂತೆ ವಿವಾಹವಾದ ಇಬ್ಬರು ಮಕ್ಕಳ ತಂದೆಯೊಬ್ಬರು ತಮ್ಮನ್ನು ‘ಮುಸ್ಲಿಂ ಲಬ್ಬೈ’ ಎಂದು ತೋರಿಸುವ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ ಅವರ ಅರ್ಜಿಯನ್ನು ತಿರಸ್ಕರಿಸಿದ ನಂತರ ಅರ್ಜಿದಾರರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಹಶೀಲ್ದಾರ್ ಅವರ ಕ್ರಮವನ್ನು ಎತ್ತಿಹಿಡಿದಿದ್ದ ಮದ್ರಾಸ್ ಹೈಕೋರ್ಟ್, ಇಂತಹ ಪ್ರಕರಣಗಳಲ್ಲಿ ಮೀಸಲಾತಿಯನ್ನು ನೀಡುವ ತಮಿಳುನಾಡು ಸರ್ಕಾರದ 2024 ರ ಆದೇಶವನ್ನು ಅಸಂವಿಧಾನಿಕ ಎಂದು ಘೋಷಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್‌ನ ಈ ನಿಲುವನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ.

ತಮಿಳುನಾಡು ಸರ್ಕಾರದ ಆದೇಶವು ಸಿಂಧುವಲ್ಲ ಮತ್ತು ಹೈಕೋರ್ಟ್ ಅದನ್ನು ಸರಿಯಾಗಿಯೇ ರದ್ದುಗೊಳಿಸಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಗತ್ಯ ಸಾಮಾಜಿಕ ಮತ್ತು ಕಾನೂನಾತ್ಮಕ ಬಾಂಧವ್ಯಗಳನ್ನು ಸಾಬೀತುಪಡಿಸದೆ ವ್ಯಕ್ತಿಯೊಬ್ಬನನ್ನು ಆತನ ಹಿಂದಿನ ಸ್ಥಾನಮಾನದಿಂದ ಅಧಿಸೂಚಿತ ಮುಸ್ಲಿಂ ಹಿಂದುಳಿದ ವರ್ಗಕ್ಕೆ ವರ್ಗಾಯಿಸುವ ಕೃತಕ ಮಾರ್ಗವನ್ನು ಸರ್ಕಾರಿ ಆದೇಶವು ಸೃಷ್ಟಿಸಿದೆ ಎಂದು ನ್ಯಾಯಾಲಯ ಗಮನಿಸಿದೆ.

ಹಿಂದೂ ವ್ಯಕ್ತಿಯೊಬ್ಬ ಇಸ್ಲಾಮ್‌ಗೆ ಮತಾಂತರಗೊಳ್ಳುವುದನ್ನು ಸಂವಿಧಾನದ ವಿಧಿ 25 ರ ಅಡಿಯಲ್ಲಿ ಮೂಲಭೂತ ಹಕ್ಕುಗಳ ಚಲಾವಣೆ ಎಂದು ಪರಿಗಣಿಸಬಹುದಾದರೂ, ಅಂತಹ ಬದಲಾವಣೆಯ ನಂತರವೂ ಮೀಸಲಾತಿ ಸೌಲಭ್ಯಗಳನ್ನು ಕೋರುವುದು ಅದರ ಕಾನೂನುಬದ್ಧತೆಯ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಈ ಹಿಂದೆ ಅಭಿಪ್ರಾಯಪಟ್ಟಿತ್ತು.