ಕೃಷಿ ಕಾನೂನನ್ನು ಒಂದೋ ನೀವು ತಡೆಯಿರಿ; ಇಲ್ಲದಿದ್ದರೆ ನಾವು ತಡೆಯುತ್ತೇವೆ: ಸುಪ್ರೀಂ ಕೋರ್ಟ್ ಚಾಟಿ

0
594

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರೈತರ ಪ್ರತಿಭಟನೆ ತೀವ್ರಗೊಂಡಿದ್ದು ಮೂರು ಕೃಷಿ ಕಾನೂನು ಜಾರಿಯಾಗದಂತೆ ತಾತ್ಕಾಲಿಕವಾಗಿ ತಡೆ ಹಿಡಿಯಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ತಿಳಿಸಿದೆ.

ನೀವು ಕಾನೂನು ತಡೆ ಹಿಡಿಯಬೇಕು. ಇಲ್ಲದಿದ್ದರೆ ನಾವು ಅದಕ್ಕೆ ತಡೆಯಾಜ್ಞೆ ನೀಡುತ್ತೇವೆ. ಇಲ್ಲಿ ಸ್ವ ಪ್ರತಿಷ್ಠೆಯ ಅಗತ್ಯವಿಲ್ಲ ಎಂದು ಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.

ಕೃಷಿ ಕಾನೂನು ಮತ್ತು ದಿಲ್ಲಿ ಗಡಿಯ ರೈತರ ಪ್ರತಿಭಟನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ವಾದ ಆಲಿಸಿದ ಕೋರ್ಟ್ ಮೇಲಿನಂತೆ ಹೇಳಿದೆ. ರೈತರ ಪ್ರತಿಭಟನೆ ನಿರ್ವಹಿಸಿದ ರೀತಿಯಲ್ಲಿ ಸರಕಾರದ ಬಗ್ಗೆ ಕೋರ್ಟ್ ಅತೃಪ್ತಿ ಸೂಚಿಸಿತು. ಚರ್ಚೆಗಳಲ್ಲಿ ತೀರ್ಮಾನ ಯಾಕಾಗಿಲ್ಲ. ಕಳೆದ ಬಾರಿ ಚರ್ಚೆ ಆಗುತ್ತಿದೆ ಎಂದಿರಿ. ಆದರೂ ತೀರ್ಮಾನವಾಗಿಲ್ಲ. ರೈತರ ಹೋರಾಟವನ್ನು ಚರ್ಚಿಸಲು ಸಮಿತಿಯನ್ನು ನೇಮಿಸಬೇಕು. ಸಮಿತಿಯ ವರದಿ ಬರುವವರೆಗೆ ಕಾನೂನು ಜಾರಿಗೊಳಿಸಬಾರದು. ಹೋರಾಟ ಇನ್ನಷ್ಟು ತೀವ್ರವಾಗುತ್ತಿದೆ. ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡರು. ರೈತರ ರಕ್ತ ಕೈಯಲ್ಲಿ ಮೆತ್ತಿಕೊಳ್ಳಲು ಬಯಸುವುದಿಲ್ಲ. ಸಮಾಲೋಚನೆ ಇಲ್ಲದೆ ಕಾನೂನು ಮಾಡಿದ್ದು ಹೋರಾಟಕ್ಕೆ ಕಾರಣವಾಗಿದೆ. ಕಾನೂನು ತಡೆಯುವವರೆಗೆ ರೈತರು ಪ್ರತಿಭಟನೆ ಮುಂದುವರಿಸಬಹುದು ಎಂದು ಕೋರ್ಟ್ ಹೇಳಿತು.

ಇದೇ ವೇಳೆ, ಸಮಿತಿ ರೂಪಿಸಬಹುದು.ಆದರೆ ಕಾನೂನಿಗೆ ತಡೆಯಾಜ್ಞೆ ನೀಡಬಾರದೆಂದು ಸರಕಾರದ ಪರ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಕೋರ್ಟಿಗೆ ತಿಳಿಸಿದರು. ಎರಡು ಮೂರು ರಾಜ್ಯಗಳ ರೈತರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಬೇರೆ ಕಡೆಯಲ್ಲಿ ರೈತರು ಇದರಲ್ಲಿ ಇಲ್ಲ ಎಂದು ಅಟಾರ್ನಿ ಜನರಲ್ ವಾದಿಸಿದ್ದಾರೆ.