ಮಗಳನ್ನೇ ಹತ್ಯೆ ಮಾಡಿದ ತಂದೆ: ಈ ಕ್ರೌರ್ಯಕ್ಕೆ ಯಾರು ಹೊಣೆ?

0
457

✍️ ಇಷಲ್

ಹುಬ್ಬಳ್ಳಿಯಲ್ಲಿ ನಡೆದ ಕ್ರೌರ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಒಳಗಾಗಿದೆ. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನೇ ಸ್ವಂತ ತಂದೆಯೇ ಹತ್ಯೆ ಮಾಡಿದ ಭೀಕರ ಕೃತ್ಯ ಇದು. ಹುಬ್ಬಳ್ಳಿ ತಾಲೂಕಿನ ಇನಾಮ್ ವೀರಾಪುರ ಗ್ರಾಮದಲ್ಲಿ ಗರ್ಭಿಣಿ ಯುವತಿ ಮಾನ್ಯಳನ್ನು ಆಕೆಯ ತಂದೆ ಪ್ರಕಾಶ್ ಗೌಡ ಪಾಟೀಲ ಹಾಗೂ ಕುಟುಂಬ ಸದಸ್ಯರಾದ ವೀರನಗೌಡ ಪಾಟೀಲ ಮತ್ತು ಅರುಣ ಗೌಡ ಪಾಟೀಲ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದಲಿತ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮಾನ್ಯ ಪ್ರೀತಿಸಿ ವಿವಾಹವಾಗಿದಳು . ಇಬ್ಬರದ್ದು ಜಾತಿ ಬೇರೆಬೇರೆ. ಕಾಲೇಜಿನಲ್ಲಿದ್ದಾಗ ಇವರಿಬ್ಬರೂ ಪ್ರೀತಿಸತೊಡಗಿದ್ದರು . ಕುಟುಂಬದ ವಿರೋಧದ ನಡುವೆಯೂ ಮೇ ತಿಂಗಳಲ್ಲಿ ವಿವಾಹವಾಗಿದ್ದರು ಮತ್ತು ಪ್ರಾಣ ಭಯದಿಂದ ಹಾವೇರಿಯಲ್ಲಿ ಹೋಗಿ ವಾಸ ಮಾಡಿದ್ದರು. ಡಿಸೆಂಬರ್ 8ರಂದು ಇವರು ಮರಳಿ ಹುಬ್ಬಳ್ಳಿಗೆ ಮರಳಿದ್ದಾರೆ. ತಮ್ಮಷ್ಟಕ್ಕೆ ಈ ಕುಟುಂಬ ಬದುಕ್ತಾ ಇತ್ತು. ಈ ನಡುವೆ ಡಿಸೆಂಬರ್ 21ರಂದು ಇವರ ಮನೆಗೆ ಏಕಾಏಕಿ ದಾಳಿ ನಡೆಸಿದ ಮಾನ್ಯಳ ತಂದೆ ಹಾಗೂ ಸಂಬಂಧಿಕರು ಸಿಸಿಟಿವಿ ಒಡೆದು ಹಾಕಿದ್ದಾರೆ. ಅಲ್ಲದೆ ಮನೆಯಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಕುಟುಂಬದ ಮರ್ಯಾದೆ ಹಾಳು ಮಾಡಿದ್ದಾಳೆ ಎಂದು ನಿಂದಿಸಿ ಆರು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಳ ಮೇಲೆ ಕ್ರೂರ ದಾಳಿ ನಡೆಸಲಾಗಿದೆ. ತಲೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರವಾಗಿ ತಿವಿಯಲಾಗಿದೆ. ಮಾನ್ಯಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.. ಈ ಹಲ್ಲೆಯಲ್ಲಿ ವಿವೇಕಾನಂದರ ತಾಯಿ ರೇಣವ್ವ ಹಾಗೂ ದೊಡ್ಡಪ್ಪ ಅವರ ಸ್ಥಿತಿ ಗಂಭೀರವಾಗಿದೆ. ಅವರಿಬ್ಬರೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಷ್ಟೇ ಅಲ್ಲ ಡಿಸೆಂಬರ್ 21ರಂದು ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವಿವೇಕಾನಂದ ಹಾಗೂ ಅವರ ತಂದೆಯ ಮೇಲೆ ಪ್ರಕಾಶ್ ಗೌಡ ಪಾಟೀಲ್ ಹಾಗೂ ಆತನ ಕುಟುಂಬಕರು ಹಲ್ಲೆ ನಡೆಸಿದ್ದಾರೆ. ಇವರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಲು ಮುಂದಾಗಿದ್ದಾರೆ. ಬಳಿಕ ಯುವಕನ ಮನೆಗೆ ತೆರಳಿದ ಆರೋಪಿಗಳು ಹಲ್ಲೆ ನಡೆಸಿ ಮಾನ್ಯಳ ಹತ್ಯೆ ನಡೆಸಿದ್ದಾರೆ .

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ ನಡೆದಿದೆ. ಸಚಿವ ಪ್ರಿಯಾಂಕ ಖರ್ಗೆ ಅವರೇ ತಮ್ಮ facebook ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಒಂದು ಕಡೆ ಹಿಂದುಗಳು ನಾವೆಲ್ಲ ಒಂದು ಎಂದು ಹೇಳುತ್ತಾರೆ. ಇನ್ನೊಂದು ಕಡೆ ಹಿಂದೂ ಆಗಿದ್ದ ಮಾನ್ಯಳನ್ನು ಹಿಂದುವಾಗಿರುವ ಆಕೆಯ ಅಪ್ಪ ಮತ್ತು ಕುಟುಂಬಕರೇ ಹತ್ಯೆ ಮಾಡುತ್ತಾರೆ. ಹಿಂದೂ ಆಗಿದ್ದ ವಿವೇಕಾನಂದ ಮತ್ತು ಅವರ ಕುಟುಂಬದ ಮೇಲೆ ಗಂಭೀರ ಹಲ್ಲೆ ನಡೆಸುತ್ತಾರೆ. ಇದು ಯಾವ ಬಗೆಯ ಸಿದ್ಧಾಂತ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಪ್ರಶ್ನಿಸಿದ್ದಾರೆ.

ಅಂತೂ ಜಾತಿಯ ಹೆಸರಲ್ಲಿ ಹುಬ್ಬಳ್ಳಿ ಅತ್ಯಂತ ಆಘಾತಕಾರಿ ಕ್ರೌರ್ಯವೊಂದಕ್ಕೆ ಸಾಕ್ಷಿಯಾಗಿದೆ. ಮಾನ್ಯಳ ಅಂತಿಮ ಸಂಸ್ಕಾರದ ಸಮಯದಲ್ಲಿ ಪತಿ ವಿವೇಕಾನಂದ ಅಳುತ್ತಿರುವ ದೃಶ್ಯ ಯಾರ ಮನಸ್ಸನ್ನು ತಾಕದೆ ಇರದು. ಮಗಳನ್ನು ಸಾಕಿ ಬೆಳೆಸಬೇಕಾದ ಮತ್ತು ಯಾವ ಸಂದರ್ಭದಲ್ಲೂ ಮಕ್ಕಳ ಪರ ನಿಲ್ಲಬೇಕಾದ ಹೆತ್ತವರೆ ಹೀಗೆ ಹತ್ಯೆಗೆ ನೇತೃತ್ವ ನೀಡಿದರೆ ಹೆತ್ತವರು ಮತ್ತು ಮಕ್ಕಳ ಸಂಬಂಧ ಪಾವಿತ್ರ್ಯತೆ ಏನು ಎಂದು ಪ್ರಶ್ನೆ ಮುಂದಕ್ಕೆ ಬರುತ್ತದೆ. ಮಕ್ಕಳು ತಪ್ಪು ಮಾಡಿದ್ರು ಕ್ಷಮಿಸುವ ಗುಣ ಹೆತ್ತವರದು. ಆ ತಪ್ಪು ಎಷ್ಟೇ ದೊಡ್ಡದಾದ್ರು ಹೆತ್ತವರು ಕ್ಷಮಿಸುತ್ತಾರೆ. ಆದರೆ ಇಲ್ಲಿ ಅಪ್ಪನೇ ಮಗಳ ಪಾಲಿಗೆ ಖಳನಾಯಕನಾಗಿದ್ದಾನೆ. ಗರ್ಭಿಣಿ ಎಂದೂ ನೋಡದೆ ಹೊಟ್ಟೆಗೆ ಚುಚ್ಚಿ ಮಗಳ ಹತ್ಯೆ ನಡೆಸಿದ್ದಾನೆ. ಮಾತ್ರ ಅಲ್ಲ ಮಗಳ ಗಂಡನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಲು ಯತ್ನಿಸಿದ್ದಾನೆ.

ಮಾನವ ಸಂಬಂಧಗಳು ಎಷ್ಟು ಸಡಿಲವಾಗುತ್ತಿವೆ ಅನ್ನುವುದಕ್ಕೆ ಈ ಕ್ರೌರ್ಯ ಮತ್ತೊಂದು ಸಾಕ್ಷಿಯಾಗಿ ನಮ್ಮೆದುರು ನಿಂತಿದೆ.