ಜಗಳ ಬಿಟ್ಟು ವಿಡಿಯೋ ಮಾಡುತ್ತಿದ್ದ ಪ್ರವಾಸಿಗರ ಮೇಲೆರಗಿದ ಘೇಂಡಾಮೃಗ ಜೋಡಿ: ಏಳು ಮಂದಿಗೆ ಗಾಯ

0
159

ಸನ್ಮಾರ್ಗ ವಾರ್ತೆ

ಕೊಲ್ಕತ್ತಾ: ಇಲ್ಲಿನ ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ವಾಹನದ ಮೇಲೆ ಎರಡು ಘೇಂಡಾಮೃಗಗಳು ಮೇಲೆರಗಿದ ಪರಿಣಾಮ ವಾಹನ ಪಲ್ಟಿಯಾಗಿ ಏಳು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.

ಪ್ರವಾಸಿಗರು ಜಲ್ದಪಾರಾ ನ್ಯಾಶನಲ್ ಪಾರ್ಕ್‌ನಲ್ಲಿ ಜೀಪ್‌ನಲ್ಲಿ ಸಫಾರಿ ಮಾಡುತ್ತಿದ್ದರು. ಈ ವೇಳೆ ರಸ್ತೆಯ ಪಕ್ಕದ ಪೊದೆಗಳಲ್ಲಿ ಎರಡು ಘೇಂಡಾ ಮೃಗಗಳು ಕಾದಾಟದಲ್ಲಿ ತೊಡಗಿದ್ದವು. ಪ್ರವಾಸಿಗರು ಆ ಕ್ಷಣವನ್ನು ಸೆರೆಹಿಡಿಯಲು ತಮ್ಮ ಕ್ಯಾಮೆರಾಗಳನ್ನು ಕೈಗೆತ್ತಿಕೊಂಡಿದ್ದರು. ಈ ವೇಳೆ ತಮ್ಮ ಜಗಳವನ್ನು ಅರ್ಧದಲ್ಲಿ ಬಿಟ್ಟು, ಎರಡು ಘೇಂಡಾಮೃಗ ಒಟ್ಟಿಗೆ ಪ್ರವಾಸಿಗರಿದ್ದ ವಾಹನದ ಮೇಲೆ ದಾಳಿ ಮಾಡಿದೆ.

ನೋಡ ನೋಡುತ್ತಿದ್ದಂತೆ ಎರಡು ಘೇಂಡಾಮೃಗಗಳು ಇವರತ್ತ ಧಾವಿಸಿದಾಗ ಜೀಪು ಚಾಲಕ ಕೂಡಲೇ ವಾಹನವನ್ನು ಚಲಾಯಿಸಲು ಯತ್ನಿಸಿದರು. ಆದರೆ ಈ ಪ್ರಯತ್ನದಲ್ಲಿ ವಾಹನ ಸ್ಕಿಡ್ ಆಗಿ ಕಂದಕಕ್ಕೆ ಉರುಳಿತು. ಈ ದೃಶ್ಯವನ್ನು ಇನ್ನೊಂದು ವಾಹನದಲ್ಲಿದ್ದ ಪ್ರವಾಸಿಗರು ಸೆರೆ ಹಿಡಿದಿದ್ದು, ಇದನ್ನು ಟ್ವಿಟರ್‌ನಲ್ಲಿ ಆಕಾಶ್ ದೀಪ್ ಎಂಬ ಐಎಫ್‌ಎಸ್ ಅಧಿಕಾರಿ ಹಂಚಿಕೊಂಡಿದ್ದಾರೆ.

ಎಲ್ಲ ಏಳು ಪ್ರವಾಸಿಗರು ಗಾಯಗೊಂಡಿದ್ದು, ಕೆಲವರ ಮೂಳೆ ಮುರಿತವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರು. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗಗಳು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದು ಇದೇ ಮೊದಲು ಎಂದು ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.