ಕೊಡಗು; ಸೆ. 20- ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಸೋಲಿಡಾರಿಟಿ ಯೂತ್ ಮೂಮೆಂಟ್ ಉಳ್ಳಾಲದ ವತಿಯಿಂದ ಕೊಡಗು ನೆರೆ ಪೀಡಿತರಿಗೆ ಸಂಗ್ರಹಿಸಿದ ಆಹಾರ ಸಾಮಗ್ರಿ ಮತ್ತು ಸಂಗ್ರಹಿಸಿದ ದೇಣಿಗೆ ಸುಮಾರು 1,50,000 ರೂಪಾಯಿಯನ್ನು ಇತ್ತೀಚೆಗೆ ತೊಕ್ಕೊಟ್ಟಿನ ಅಮ್ಮ ಇಲೆಕ್ಟ್ರಾನಿಕ್ಸ್ ಹತ್ತಿರದ ಸೋಲಿಡಾರಿಟಿ ಕಛೇರಿಯಲ್ಲಿ ಕೊಡಗು ನೆರೆ ಪಿಡಿತರಿಗೆ ಕಳುಹಿಸಿ ಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ಯು. ರವರು ಮಾತನಾಡಿ ಕಳೆದ ವರ್ಷ ಕೂಡ ಕೊಡಗಿನಲ್ಲಿ ನೆರೆ ಬಂದು ಜನರು ತುಂಬಾ ಕಷ್ಟಗಳನ್ನು ಅನುಭವಿಸಿದ್ದಾರೆ. ಈ ಸಲ ಸುಮಾರು 800 ಮನೆಗಳು ನಷ್ಟದಲ್ಲಿದ್ದು ಇದರಲ್ಲಿ ಸಾಧಾರಣ 200 ಸಣ್ಣ ಬಡವರ ಮನೆಗಳಾಗಿವೆ. ಜನರೆಲ್ಲಾ ಈಗ ಪರಿಹಾರ ಕೇಂದ್ರದಲ್ಲಿದ್ದಾರೆ. ಈ ಮಧ್ಯೆ ಬೇರೆ ಸಂಘಟನೆಗಳು ಸಹಾಯ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ತಿಳಿಸಿದರು. ಕೊಡಗಿನಲ್ಲಿ ಈಗಾಗಲೇ ಸಾಧಾರಣ 600 ಮನೆಗಳ ಸರ್ವೆ ಕಾರ್ಯಗಳು ಸೋಲಿಡಾರಿಟಿ ವತಿಯಿಂದ ನಡೆದಿದೆ. ಇಂದು ಉಳ್ಳಾಲದಿಂದ ಸಹಾಯಾರ್ಥವಾಗಿ ಅವಶ್ಯಕ ಸಾಮಾನು ಹಾಗೂ ಹಣದೊಂದಿಗೆ ಕೆಲವು ಕಾರ್ಯಕರ್ತರು ಹೊರಡಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಯುನಿವರ್ಸಿಟಿಯ ಉಪನ್ಯಾಸಕರಾದ ಹನುಮಾನ್ ನಾಯಕ್ ರವರು ಮಾತನಾಡಿ ಇಸ್ಲಾಮ್ ಧಾನ ಧರ್ಮಕ್ಕೆ ಅತ್ಯಂತ ಪ್ರೋತ್ಸಾಹ ನೀಡಿದ ಧರ್ಮವೆಂದು ನಾನು ತಿಳಿದಿದ್ದೇನೆ. ಸೋಲಿಡಾರಿಟಿ ಯೂತ್ ಮೂಮೆಂಟ್ ಮಾಡುವಂತಹ ಈ ಪರಿಹಾರದ ಕೆಲಸ ದೇವನು ಮೆಚ್ಚುವಂತಹದು ಎಂದು ಈ ಕಾರ್ಯಕ್ರಮಕ್ಕೆ ಶುಭಕೋರಿದರು.
ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷರಾದ ಅಬ್ದುಲ್ ಕರೀಮ್ ರವರು ಮಾತನಾಡಿ ಇಂತಹ ಪುಣ್ಯ ಕಾರ್ಯಗಳಲ್ಲಿ ಎಲ್ಲರೂ ಭೇದಭಾವ ಮರೆತು ಕೈಜೋಡಿಸಿದ್ದಾರೆ. ಇದು ಬಹಳ ಸಂತೋಷದ ವಿಷಯ ಎಂದರು. ಅಲ್ಲದೆ ಜಮಾಅತೆ ಇಸ್ಲಾಮೀ ಹಿಂದ್ ತನ್ನ ಸ್ಥಾಪನಾ ದಿನದಿಂದಲೇ ಇಂತಹ ಪುಣ್ಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದರು.
ಅಬ್ದುರ್ರಹೀಮ್ ಹಾಗೂ ಇಲ್ಯಾಸ್ ಇಸ್ಮಾಯಿಲ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸೋಲಿಡಾರಿಟಿ ಯೂತ್ ಮೂಮೆಂಟ್ ಉಳ್ಳಾಲದ ಸಂಚಾಲಕರಾದ ಅಹ್ಮದ್ ಶರೀಫ್ ರವರು ಕುರ್ಆನ್ ಪಠಣ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊನೆಯದಾಗಿ ಮುಝಮ್ಮಿಲ್ ಅಹ್ಮದ್ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.












