ಚೈಬಾಸ್ ಖಜಾನೆ ಪ್ರಕರಣ: ಲಾಲು ಪ್ರಸಾದ್ ಯಾದವ್‍ರಿಗೆ ಜಾಮೀನು

0
251

ಸನ್ಮಾರ್ಗ ವಾರ್ತೆ

ಪಾಟ್ಮ,ಅ.9: ಚೈಬಾಸ್ ಖಜಾನೆ ದುರ್ಬಳಕೆ ಪ್ರಕರಣದಲ್ಲಿ ಆರ್‍ಜೆಡಿ ಅಧ್ಯಕ್ಷ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವರಿಗೆ ಜಾರ್ಖಂಡ್ ಹೈಕೋರ್ಟಿನಿಂದ ಜಾಮೀನು ಲಭಿಸಿದೆ. ಆದರೆ, ದುಂಕ ಖಜಾನೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವುದರಿಂದ ಅವರು ಜೈಲಿನಲ್ಲಿಯೇ ಮುಂದುವರಿಯಲಿದ್ದಾರೆ. ಲಾಲುರವರಿಗೆ 72 ವರ್ಷ ವಯಸ್ಸಾಗಿದ್ದು ಅವರು ರಾಂಚಿಯ ಬಿರ್ಸಾ ಮುಂಡ ಜೈಲಿನಲ್ಲಿದ್ದಾರೆ.

ಲಾಲು ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ 950 ಕೋಟಿ ರೂಪಾಯಿಯ ಮೇವು ಹಗರಣಕ್ಕೆ ಸಂಬಂಧಿಸಿ 1992 ಮತ್ತು 1993ರಲ್ಲಿ ಚೈಬಾಸ್ ಖಜಾನೆಯಿಂದ 33.67 ಕೋಟಿ ರೂಪಾಯಿ ಹೆಚ್ಚು ಹಣವನ್ನು ಡ್ರಾಮಾಡಿಕೊಂಡಿದ್ದಾರೆ ಎಂದು ಕೇಸು ದಾಖಲಾಗಿತ್ತು.

ಪ್ರಕರಣದಲ್ಲಿ ಶಿಕ್ಷೆಗೊಳಗಾದ ಲಾಲು ಪ್ರಸಾದ್ ಯಾದವ್ ಐದು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದಾರೆ. ದುಂಕ ಟ್ರಷರಿ ವಂಚನೆ ಪ್ರಕರಣದಲ್ಲಿ ಲಾಲುರಿಗೆ 14 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. 1991 ಮತ್ತು 1996ರ ನಡುವೆ ಲಾಲು ಪ್ರಸಾದ್ ಯಾದ್ ಪ್ರಾಣಿ ಸಂರಕ್ಷಣಾ ಅಧಿಕಾರಿಗಳ ಮೂಲಕ ದುಂಕ ಟ್ರಷರಿಯಿಂದ 3.5ಕೋಟಿ ರೂಪಾಯಿ ವಂಚನೆ ನಡೆಸಿರುವುದು ದುಂಕ ಪ್ರಕರಣವಾಗಿದೆ. ಪ್ರಕರಣಗಳಲ್ಲಿ ತಲಾ 3.5 ವರ್ಷ, 5 ವರ್ಷ, 14 ವರ್ಷ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಈ ಎಲ್ಲ ಶಿಕ್ಷೆಗಳನ್ನು ಅವರು ಒಟ್ಟಿಗೆ ಅನುಭವಿಸುತ್ತಿದ್ದಾರೆ. 2017ರಿಂದ ಅವರು ಜೈಲಿನಲ್ಲಿದ್ದಾರೆ.

ಸಾರ್ವಜನಿಕ ನಿಧಿ ದುರುಪಯೋಗಿಸಿದ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್‍‌ರವರು ಆರು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾರೆ. ದಿಯೊಗರ್ ಟ್ರಷರಿ ಪ್ರಕರಣದಲ್ಲಿ 2013ರ ಡಿಸೆಂಬರಿನಲ್ಲಿ ಜಾರ್ಖಂಡ್ ಹೈಕೋರ್ಟು ಜಾಮೀನು ನೀಡಿತ್ತು. ಮೇವು ಹಗರಣದಲ್ಲಿ ಸೇರಿದ ದಿಯೊಗರ್ ಟ್ರಷರಿ ಪ್ರಕರಣದಲ್ಲಿ 3.5 ವರ್ಷ ಜೈಲು ಶಿಕ್ಷೆ ನೀಡಲಾಗಿದೆ.

ಟೈಪ್ 2 ಮಧುಮೇಹ, ರಕ್ತದೊತ್ತಡ ಇರುವುದರಿಂದ ಎರಡು ವರ್ಷಗಳಿಂದ ಲಾಲು ಪ್ರಸಾದ್ ಯಾದವ್ ಜಾರ್ಖಂಡಿನ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಟೋಬರ್ 28ರಿಂದ ಮೂರು ಹಂತದ ಚುನಾವಣೆ ಬಿಹಾರದಲ್ಲಿ ನಡೆಯುತ್ತಿದೆ. ಇದರಲ್ಲಿ ಅವರಿಗೆ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಮೇವು ಹಗರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವ ಲಾಲು ಪ್ರಸಾದ್ ಯಾದವ್‍ರಿಗೆ ಚುನಾವಣೆ ಸ್ಪರ್ಧಿಸುವುದರಿಂದ ತಡೆಹಿಡಿಯಲಾಗಿದೆ. ಪಾರ್ಲಿಮೆಂಟ್ ಸದಸ್ಯತ್ವವನ್ನು ಅನರ್ಹ ಗೊಳಿಸಲಾಗಿತ್ತು.