ಸನ್ಮಾರ್ಗ ವಾರ್ತೆ
ಭೋಪಾಲ,ಅ.14: ಮಧ್ಯಪ್ರದೇಶದ ಹೊಶಂಗಾಬಾದಿನಲ್ಲಿ ಕಾರು ಅಪಘಾತದಲ್ಲಿ ನಾಲ್ವರು ಹಾಕಿ ಪಟುಗಳು ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ. ಇವರು ಮಧ್ಯಪ್ರದೇಶ ಹಾಕಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಹಾಕಿ ಪಟುಗಳೆಂದು ವರದಿ ತಿಳಿಸಿದೆ. ಸೋಮವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಯಸಾಲ್‍ಪುರ ಗ್ರಾಮದಲ್ಲಿ ಕಾರು ಮರಕ್ಕೆ ಢಿಕ್ಕಿಹೊಡೆಯಿತು.
ಧ್ಯಾನ್‍ಚಂದ್ ಟ್ರೋಫಿ ಹಾಕಿ ಸ್ಪರ್ಧೆಯಲ್ಲಿ ಭಾಗವಹಿಸಲು ಹೊಶಂಗಬಾದ್‍ನಿಂದ ಇತರಸಿಗೆ ಹೋಗುತ್ತಿದ್ದ ಹಾಕಿಪಟುಗಳ ಕಾರು ಅಪಘಾತಕ್ಕೊಳಗಾಯಿತು. ಇವರು ಸಂಚರಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿದೆ. ಅದು ರಸ್ತೆ ಬದಿಯ ಮರಕ್ಕೆ ಗುದ್ದಿ ನಂತರ ಕೆಳಗೆ ಪಲ್ಟಿಯಾಯಿತು. ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಓರ್ವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.












