ಸನ್ಮಾರ್ಗ ವಾರ್ತೆ
ಉಚಿತ ಅಕ್ಕಿ ಹಂಚಿಕೆ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ನಮ್ಮ ಪಾಲಿನ ಅಕ್ಕಿಯನ್ನು ತಡೆ ಹಿಡಿದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರ್ ಶಕ್ತಿ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯದ್ದು ಬಡವರ ವಿರೋಧಿ ನಡೆ, ಅದಕ್ಕಾಗಿ ರಾಜ್ಯಕ್ಕೆ ಅಕ್ಕಿ ಕೊಡಬಾರದು ಎಂದು ತಡೆ ಹಿಡಿದಿದ್ದಾರೆ ಎಂದರು.
ನಾವು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೂ, ಅದರಲ್ಲಿ ಒಂದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಪ್ರತಿಯೊಬ್ಬರಿಗೆ ತಲಾ 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಹೇಳಿದ್ದೂ, ಬಿಪಿಎಲ್, ಅಂತ್ಯೋದಯ ಕಾರ್ಡ್ನವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ. ಜುಲೈ 1ರಿಂದ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದವರು ಹೇಳಿದರು.
ಉಚಿತ ಅಕ್ಕಿ ವಿತರಣೆಗಾಗಿ ತಿಂಗಳಿಗೆ 2 ಲಕ್ಷದ 28 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಬೇಕು. ಅನ್ನಭಾಗ್ಯ ಯೋಜನೆಗಾಗಿ ತಿಂಗಳಿಗೆ 840 ಕೋಟಿ ರೂ. ವೆಚ್ಚ ತಗಲುತ್ತದೆ. ಪ್ರತಿ ವರ್ಷ 10,092 ಕೋಟಿ ರೂ. ಅಗತ್ಯವಿದೆಯೆಂದು ಅವರು ಹೇಳಿದರು.
ಹೆಚ್ಚುವರಿ ಅಕ್ಕಿ ವಿತರಣೆ ಬಗ್ಗೆ ಎಫ್ಸಿಐ ಡೆಪ್ಯುಟಿ ಮ್ಯಾನೇಜರ್ ಜೊತೆ ಚರ್ಚೆ ಮಾಡಿದ್ದೆವು. ಅವರು ಹೆಚ್ಚುವರಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಜೂನ್12ರಂದು ಪತ್ರ ಬರೆದ ಅವರು ಹೆಚ್ಚುವರಿ ಅಕ್ಕಿ ಕೊಡುವುದಾಗಿ ಒಪ್ಪಿಗೆ ನೀಡಿದ್ದರು.
ಆದರೆ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ. ಉಚಿತ ಅಕ್ಕಿ ವಿತರಣೆಯಲ್ಲಿ ವಿಳಂಬ ಧೋರಣೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ.
ಡೆಪ್ಯುಟಿ ಮ್ಯಾನೇಜರ್ 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ಮಾಹಿತಿ ನೀಡಿದ್ದರೂ, ಕೇಂದ್ರ ನಮಗೆ ಪೂರೈಕೆ ಮಾಡಲು ಏಕೆ? ಹಿಂದೇಟು ಹಾಕುತ್ತಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸದ್ಯ ಎಫ್ ಸಿಐನವರು ಹಿಂದೆ ಸರಿದಿದ್ದಾರೆ. ಖಾಸಗಿಯವರಿಗೆ ಅಕ್ಕಿ ಕೊಡುವ ಅವರು ನಮ್ಮ ರಾಜ್ಯಕ್ಕೆ ಅಕ್ಕಿ ಇಲ್ಲ ಎನ್ನುತ್ತಿದ್ದಾರೆ. ಮೋದಿ ಸರ್ಕಾರ ಬಡವರ ವಿರೋಧಿ ಧೋರಣೆ ತೋರುತ್ತಿದೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೇಂದ್ರ ಈ ಕೆಲಸಕ್ಕೆ ಕೈ ಹಾಕಿದೆ. ಅಕ್ಕಿ ಪೂರೈಸಲು ನಾವು ಛತ್ತೀಸ್ಘಡ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಏನಿದ್ದರೂ ನಾವು ನಮ್ಮ ವಾಗ್ದಾನ ಈಡೇರಿಸುತ್ತೇವೆ ಎಂದು ಸಿಎಂ ಇದೇ ವೇಳೆ ಭರವಸೆ ನೀಡಿದರು.












