ಗ್ಯಾನ ವಾಪಿ ಮಸೀದಿ: ಪೂಜೆಗೆ ಅವಕಾಶ ನೀಡಿ ನಿವೃತ್ತರಾದ ನ್ಯಾಯಾಧೀಶ ಬಿಟ್ಟು ಹೋಗಿರುವ ಪ್ರಶ್ನೆಗಳು

0
406

ಸನ್ಮಾರ್ಗ ವಾರ್ತೆ

ಗ್ಯಾನ್ ವಾಪಿ ಮಸೀದಿಯ ವಿವಾದದಲ್ಲಿ ವಾರಣಾಸಿ ಜಿಲ್ಲಾ ಮತ್ತು ಸೆಷನ್ಸ್ ಜಡ್ಜ್ ಡಾಕ್ಟರ್ ಅಜಯ್ ಕೃಷ್ಣ ವಿಶ್ವೇಶ್ವ ಅವರು ನೀಡಿರುವ ತೀರ್ಪು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ತಮ್ಮ ವೃತ್ತಿಗೆ ವಿದಾಯ ಹೇಳಿದ ದಿನದಂದೇ ಅವರು ಈ ತೀರ್ಪು ನೀಡಿದ್ದಾರೆ. ಜನವರಿ 31ರಂದು ಅವರು ನ್ಯಾಯಾಧೀಶ ವೃತ್ತಿಯಿಂದ ನಿರ್ಗಮಿಸಿದ್ದು ಅದೇ ದಿನ ಅವರು ಗ್ಯಾನ್ ವಾಪಿ ಮಸೀದಿಯ ಕೆಳ ಮಹಡಿಯಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡಿದ್ದಾರೆ.

ನೆಲ ಅಂತಸ್ತನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಮತ್ತು 1993 ಡಿಸೆಂಬರ್ ಗಿಂತ ಮೊದಲಿನಂತೆ ತಮಗೆ ಪೂಜೆ ನಡೆಸಲು ಅವಕಾಶ ನೀಡಬೇಕು ಎಂದು ಹೇಳಿ 2023 ಸೆಪ್ಟೆಂಬರ್ 25ರಂದು ಶೈಲೇಂದ್ರ ಕುಮಾರ್ ಪಥಕ್ ಎಂಬ ವ್ಯಕ್ತಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇವರು ತೀರ್ಪು ನೀಡಿದ್ದಾರೆ. ಈ ಸ್ಥಳದಲ್ಲಿ ಕಳೆದ 30 ವರ್ಷಗಳಿಂದ ಪೂಜೆ ನಡೆಯುತ್ತಿರಲಿಲ್ಲ ಎಂದು ನ್ಯಾಯಾಧೀಶರೇ ಹೇಳಿದ್ದಾರೆ. ಅದೇ ವೇಳೆ ಇಲ್ಲಿ ಪೂಜೆ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗೆ ಇದೇ ನ್ಯಾಯಾಧೀಶರು ಆದೇಶ ನೀಡಿದ್ದಾರೆ