ಕಾಂಗ್ರೆಸ್​ನಲ್ಲಿ ಬಂಡಾಯ: ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ರಾಜೀನಾಮೆ ನೀಡಿದ ಗುಲಾಂ ನಬಿ ಆಝಾದ್

0
177

ಸನ್ಮಾರ್ಗ ವಾರ್ತೆ

ದೆಹಲಿ: ಕಾಂಗ್ರೆಸ್​ನಲ್ಲಿ ಬಂಡಾಯದ ಬಿರುಗಾಳಿ ಆರಂಭವಾಗಿದ್ದು, ಕಾಂಗ್ರೆಸ್​ನ ಹಿರಿಯ ನಾಯಕ ಗುಲಾಂ ನಬಿ ಆಝಾದ್ ತಮಗೆ ವಹಿಸಿದ್ದ ಜಮ್ಮು ಕಾಶ್ಮೀರ ಕಾಂಗ್ರೆಸ್ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಗುಲಾಂ ನಬಿ ಆಝಾದ್ ಅವರು ಮಂಗಳವಾರ (ಆಗಸ್ಟ್ 16) ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ (ಜೆಕೆಪಿಸಿಸಿ) ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ಆಝಾದ್ ಅವರನ್ನು ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಿಸಿದ್ದರು. ಆದರೆ, ಆರೋಗ್ಯ ಕಾರಣಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಆಝಾದ್ ನಿರಾಕರಿಸಿದ್ದಾರೆ. ವರಿಷ್ಠೆಯ ಆದೇಶ ಬಂದ ಕೆಲವೇ ಗಂಟೆಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಝಾದ್ ರಾಜೀನಾಮೆ ನೀಡಿದ್ದಾರೆ.

ಅಲ್ಲದೆ, ಅವರು ಜಮ್ಮು-ಕಾಶ್ಮೀರದ ಕಾಂಗ್ರೆಸ್ ರಾಜಕೀಯ ವ್ಯವಹಾರ ಸಮಿತಿಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ದೀರ್ಘ ಕಾಲದಿಂದ ಪಕ್ಷದ ಜೊತೆ ಇದ್ದ ಅಸಮಾಧಾನವೇ ರಾಜೀನಾಮೆಗೆ ಕಾರಣ ಎಂದು ಮೂಲಗಳು ಹೇಳಿವೆ.

ಆಝಾದ್ ಅವರ ಆಪ್ತ ಗುಲಾಮ್ ಅಹ್ಮದ್ ಮಿರ್ ಅವರು ಜಮ್ಮು-ಕಾಶ್ಮೀರದ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರು ಜುಲೈ 6ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೋನಿಯಾ ಗಾಂಧಿ ಅವರು ಮಂಗಳವಾರ ವಿಕ‌ ರಸೂಲ್ ವಾನಿ ಅವರನ್ನು ಜಮ್ಮು ಮತ್ತು ಕಾಶ್ಮೀರದ ಅಧ್ಯಕ್ಷರಾಗಿ ಮತ್ತು ರೇಮನ್ ಭಲ್ಲಾ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದರು. ಇದೇ ವೇಳೆ, 11 ಸದಸ್ಯರನ್ನೊಳಗೊಂಡ ಪ್ರಚಾರ ಸಮಿತಿಗೆ ಆಜಾದ್ ಅವರನ್ನು ಅಧ್ಯಕ್ಷರಾಗಿ ಮತ್ತು ತಾರಿಕ್ ಹಮೀದ್ ಕರ್ರಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು.

ಗುಲಾಂ ನಬಿ ಆಝಾದ್ ಅವರನ್ನು ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಆಝಾದ್ ಅವರು ಮುಂಬರುವ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲಿದ್ದಾರೆ ಎಂದು ಹೇಳಿತ್ತು. ಆದರೆ, ಆಝಾದ್ ಆ ಜವಾಬ್ದಾರಿಯನ್ನು ನಿರಾಕರಿಸಿ, ರಾಜೀನಾಮೆ ನೀಡಿದ್ದಾರೆ.