ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ- ಹತ್ತನೇ ವರ್ಷದ ಸಂಭ್ರಮದಲ್ಲಿ ಜಿಐಓ ರಾಜ್ಯ ವ್ಯಾಪಿ ಅಭಿಯಾನ; ಸೆ. 8ರಂದು ಸಮ್ಮೇಳನ

0
805

ಸನ್ಮಾರ್ಗ ವಾರ್ತೆ-

ಬೆಂಗಳೂರು; ಆ.31- ಸ್ಥಾಪನೆಯ ಹತ್ತನೇ ವರ್ಷದ ಅಂಗವಾಗಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಕರ್ನಾಟಕವು (ಜಿಐಓ) “ಅಲ್-ಇಹ್ಯಾ: ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ” ಎಂಬ ಶೀರ್ಷಿಕೆಯಡಿ ಅಗಸ್ಟ್ 26 ರಿಂದ ಸೆಪ್ಟಂಬರ್ 1 2019 ರವರೆಗೆ ರಾಜ್ಯಾದ್ಯಾ೦ತ ದಶವಾರ್ಷಿಕ ಅಭಿಯಾನವನ್ನು ನಡೆಸುತ್ತಿದೆ. ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಯುವತಿಯರಲ್ಲಿ ಚಾರಿತ್ರ್ಯ ನಿರ್ಮಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಐಓವು, ನೈತಿಕ ಮೌಲ್ಯಗಳ ಜೊತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಮಹಿಳೆಯರಲ್ಲಿ ವಾಕ್ ಸ್ವಾತಂತ್ರ್ಯಕ್ಕಾಗಿ ಹಾಗೂ ಅವರು ಘನತೆ-ಗೌರವದೊಂದಿಗೆ ಜೀವನ ಸಾಗಿಸುವುದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವುದಕ್ಕಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಭಾಗವಾಗಿ ಸೆಪ್ಟೆಂಬರ್ 8, 2019 ರಂದು ಮಂಗಳೂರಿನ ಪುರಭವನದಲ್ಲಿ ಬೆಳಗ್ಗೆ 9.30 ರಿಂದ ರಾಜ್ಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ.

ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಅಮೀನುಲ್ ಹಸನ್ (ಉಪಾಧ್ಯಕ್ಷರು, ಜಮಾಅತೆ ಇಸ್ಲಾಮಿ ಹಿಂದ್), ರಹಮತುನ್ನೀಸ (ರಾಷ್ಟ್ರ ಉಪಾಧ್ಯಕ್ಷರು ಮಹಿಳಾ ವಿಭಾಗ ಜಮಾಅತೆ ಇಸ್ಲಾಮಿ ಹಿಂದ್) ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ನ ರಾಜ್ಯ ನಾಯಕರು, ಮಹಿಳಾ ವಿಭಾಗದ ಪ್ರಮುಖರು, ಜಿಐಓನ ನಾಯಕಿಯರು ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.