ಗುರ್ಗಾಂವ್ ನಲ್ಲಿ ಹಲವರಿಗೆ ಆಕ್ಸಿಜನ್ ಕೊಟ್ಟು ರಕ್ಷಿಸಿದ್ದ NGOನ ಆಕ್ಸಿಜನ್ ಸೆಂಟರ್ ಗೆ ನುಗ್ಗಿ ದಾಂಧಲೆ ನಡೆಸಿದ ಗೂಂಡಾಗಳು

0
762

ಸನ್ಮಾರ್ಗ ವಾರ್ತೆ

ಹರಿಯಾಣ: ಆಕ್ಸಿಜನ್ ಅಗತ್ಯವಿದ್ದ ಕೊರೋನ ರೋಗಿಗಳ ನೆರವಿಗೆ ಹರಿಯಾಣದ ಗುರ್ಗಾಂವ್‍ನಲ್ಲಿ ಹೋಂಕುಂಡ್ ಫೌಂಡೇಶನ್ ಎಂಬ ಎನ್‍ಜಿಒ ಸ್ಥಾಪಿಸಿದ್ದ ತಾತ್ಕಾಲಿಕ ಆಕ್ಸಿಜನ್ ಟೆಂಟನ್ನು ಅಪರಿಚಿತ ಗೂಂಡಾಗಳು ನಾಶಪಡಿಸಿದ್ದಾರೆ.

ಕೊರೊನ ಎರಡನೇ ತರಂಗದ ಅತ್ಯಂತ ಗಂಭೀರ ಹಂತದಲ್ಲಿ ದಿಲ್ಲಿಯಲ್ಲಿ ಮತ್ತು ಸಮೀಪದ ಊರಿನ ಹಲವು ಜನರಿಗೆ ಈ ಕೇಂದ್ರ ಆಕ್ಸಿಜನ್ ನೆರವು ನೀಡಿತ್ತು. ಗುರುಗ್ರಾಮದ ಸೆಕ್ಟರ್ 61ರ ಕೇಂದ್ರದಲ್ಲಿ ಗೂಂಡಾಗಳ ದಾಂಧಲೆ ನಡೆಯುವಾಗ ರೋಗಿಗಳು ಇರಲಿಲ್ಲ.

ಆಕ್ಸಿಜನ್ ಸಿಲಿಂಡರ್ ತುಂಬಿಸಿಕೊಳ್ಳಲು ನಿರಂತರ ಜನರು ಬರುತ್ತಿದ್ದರು. ದಾಂಧಲೆ ಬಳಿಕ ರೋಗಿಗಳ ಸಹಾಯಕ್ಕಾಗಿ ನಗರದ ಕೇಂದ್ರದ ಬಳಿ ಮತ್ತು ಇನ್ನೆಲ್ಲಾದರೂ 20,000 ಚದರ ಅಡಿ ಮೀಟರ್ ಸ್ಥಳ ಉಚಿತವಾಗಿ ಕೊಡಬೇಕೆಂದು ಫೌಂಡೇಶನ್ ಜನರನ್ನು ವಿನಂತಿಸಿಕೊಂಡಿದೆ.

ಗುರುವಾರ ಬೆಳಗ್ಗೆ ಆರುಗಂಟೆಗೆ ದಾಂಧಲೆ ನಡೆಯಿತು. ಸ್ಥಳೀಯ ಗೂಂಡಾಗಳೇ ಈ ಕೆಲಸ ಮಾಡಿದ್ದಾರೆ ಎನ್ನಲಾಗಿದ್ದು ಕೆಲವರು ಬಂದೂಕು ಹಿಡಿದಿದ್ದರು. ಇನ್ನು ಕೆಲವರ ಕೈಯಲ್ಲಿ ಆಯುಧಗಳಿದ್ದವು‌. ದಾಂಧಲೆ ಕೋರರು ಮೊದಲು ಜನರೇಟರ್ ತೆಗೆದುಹಾಕಿ ವಿದ್ಯುತ್ ಸರಬರಾಜು ತಪ್ಪಿಸಿದ್ದಾರೆ. ಇದರ ಹಿಂದೆ ಯಾರಿದ್ದಾರೆಂದು ನಮಗೆ ಗೊತ್ತು. ಅವರ ಹೆಸರುಗಳನ್ನು ಹೇಳಲು ಬಯಸುವುದಿಲ್ಲ . ಈ ಹಿಂದೆಯೂ ಬೆದರಿಕೆಯಿತ್ತು. ದಾಳಿಯ ಬಳಿಕ ಮಹಿಳೆಯರು ಸಹಿತ ಎಲ್ಲ ಸ್ಟಾಫ್‍ಗಳನ್ನು ಅಲ್ಲಿಂದ ಹಿಂದಕ್ಕೆ ಕರೆಸಿಕೊಳ್ಳಲಾಯಿತು. ಎಲ್ಲ ಸ್ವಯಂಸೇವಕರೂ ಅಲ್ಲಿಂದ ಹೊರ ಹೋಗಿದ್ದಾರೆ ಎಂದು ಫೌಂಡೇಶನ್ ನಿರ್ದೇಶಕ ಪಾರ್ಥೀರತ್ ಸಿಂಗ್ ಹೇಳಿದರು.

ಏನೇ ಆದರೂ ನಾವು ಸೇವೆ ಮುಂದುವರಿಸುತ್ತೇವೆ.ಆದರೆ,ದುರದೃಷ್ಟವಶಾತ್ ಅಧಿಕಾರದಲ್ಲಿರುವ ಜನರು ಈ ಘಟನೆಯ ಹಿಂದಿದ್ದಾರೆ. ನಾವು ದೂರು ನೀಡಿದ್ದೇವೆ. ಪೊಲೀಸರು ಇಲ್ಲಿದ್ದಾರೆ. ಆದರೆ, ನಮ್ಮ ವ್ಯವಸ್ಥೆ ಹೇಗೆ ಕೆಲಸ ಮಾಡಬೇಕು ಎಂದು ನಮಗೆ ಗೊತ್ತಿದೆ ಎಂದು ಅವರು ಹೇಳಿದರು.

ಸ್ಥಳೀಯಾಡಳಿತದ ಲೆಕ್ಕದ ಪ್ರಕಾರ 3.5 ಲಕ್ಷ ರೂಪಾಯಿ ಒಪ್ಪಂದ ಮಾಡಿಕೊಂಡು ಹೋಂಕುಂಡ್ ಫೌಂಡೇಶನ್ ಎರಡು ತಿಂಗಳಿಗೆ ರಾಮ ಟೆಂಟ್ ಫೌಂಡೇಶನ್‍ನಿಂದ ಜಮೀನು ಲೀಸ್‍ಗೆ ಪಡೆದುಕೊಂಡಿತ್ತು. ಗುರುವಾರ ಬೆಳಗ್ಗೆ ಕಂಪೆನಿಯವರು ಬಂದು ಸ್ಥಳವನ್ನು ಬಲವಂತದಿಂದ ತೆರವುಗೊಳಿಸಲು ತೊಡಗಿದರು. ಘಟನೆಯಲ್ಲಿ ಕೇಸು ದಾಖಲಿಸಲಾಗಿದ್ದು ಘಟನೆಗೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಪೊಲೀಸರು ಹೇಳಿದರು.