ವಾಹನ ಚಾಲಕರೇ, ಜಾಗ್ರತೆ- ನಿಯಮ ಉಲ್ಲಂಘಿಸುವವರಿಗೆ ಕಾದಿದೆ ಭಾರೀ ದಂಡ, 2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕದಲ್ಲಿ ಏನೇನಿವೆ- ನೀವೇ ಓದಿ

0
1098

ವಿರೋಧ ಪಕ್ಷಗಳ ಆಕ್ಷೇಪಗಳ ನಡುವೆಯೇ 2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕವನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಲಾಗಿದೆ. ಈ ನಿಯಮವು ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ಹೆಚ್ಚಿನ ದಂಡ ವಿಧಿಸಲು ನೆರವಾಗುತ್ತದೆ. ಅಲ್ಲದೆ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಿಗೆ ಹಾಗೂ ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡುವುದು, ಗಾಯಾಳುಗಳ ಸಹಾಯಕ್ಕೆ ಬರುವ ಸಾರ್ವಜನಿಕರಿಗೆ ಪೊಲೀಸ್ ವಿಚಾರಣೆಯ ಕಿರಿಕಿರಿಯಿಂದ ವಿನಾಯಿತಿ ನೀಡುವುದು ಮುಂತಾದ ಸುಧಾರಣಾ ಕ್ರಮಗಳನ್ನು ತಿದ್ದುಪಡಿಯಲ್ಲಿ ನೀಡಲಾಗಿದೆ.

ಹಾಗಂತ ಈ ವಿಧೇಯಕ ಮಂಡನೆ ಇದು ಮೊದಲಿನದ್ದಲ್ಲ. ಈ ಹಿಂದೆ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 1988ರ ಮೋಟಾರು ವಾಹನ ಕಾಯ್ದೆಯನ್ನು ಪರಿಷ್ಕರಿಸುವ `ಮೋಟಾರು ವಾಹನ ತಿದ್ದುಪಡಿ ವಿಧೇಯಕ’ವನ್ನು ಲೋಕ ಸಭೆಯಲ್ಲಿ ಮಂಡಿಸಲಾಗಿತ್ತು. ಅಲ್ಲಿ ಅನುಮೋದನೆಯೂ ಸಿಕ್ಕಿತ್ತು. ಆದರೆ ರಾಜ್ಯಸಭೆಯಲ್ಲಿ ಸೋಲಾಗಿತ್ತು. ಹೀಗಾಗಿ ಸಂಸತ್ತಿನ ಸ್ಥಾಯಿ ಸಮಿತಿಯ ಹಲವು ಶಿಫಾರಸುಗಳನ್ನು ಪರಿಗಣಿಸಿ ಹೊಸ ನಿಯಮಗಳ ಅಳವಡಿಕೆಯೊಂದಿಗೆ ರಸ್ತೆ ಸಾರಿಗೆ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್ ಅವರು ವಿಧೇಯಕವನ್ನು ಮತ್ತೊಮ್ಮೆ ಲೋಕಸಭೆಯಲ್ಲಿ ಮಂಡಿಸಿದರು.

ವಿಧೇಯಕದ ಹೀಗಿದೆ:

ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ವಾಹನದ ಮಾಲೀಕರು ಅಥವಾ ವಿಮೆದಾರರಿಂದ ಗರಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು. ಒಂದು ವೇಳೆ ಗಂಭೀರವಾಗಿ ಗಾಯಗೊಂಡವರಿಗೆ ಅಪಘಾತ ಮಾಡಿದವರೇ 2.5 ಲಕ್ಷ ರೂ. ಕನಿಷ್ಠ ಆರ್ಥಿಕ ನೆರವನ್ನು ನೀಡಬೇಕು. ಹಾಗೆಯೇ ಲೈಸೆನ್ಸ್ ನವೀಕರಣದ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಏರಿಸಲಾಗಿದೆ. ಜೊತೆಗೆ ವಿಶೇಷ ಚೇತನರಿಗೆ ಲೈಸೆನ್ಸ್ ನೀಡಲು ಸಾರಿಗೆ ಇಲಾಖೆಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ವಿಧೇಯಕದಲ್ಲಿ ಹೇಳಲಾಗಿದೆ.

ಯಾವ ನಿಯಮ ಉಲ್ಲಂಘನೆಗೆ ಎಷ್ಟೆಷ್ಟು ದಂಡ?

ಚಾಲನಾ ಪರವಾನಗಿ (ಡಿ ಎಲ್) ಇಲ್ಲದೆ ವಾಹನ ಚಲಾಯಿಸುವವರಿಗೆ 5,000 ರೂ. ದಂಡ ವಿಧಿಸಲಾಗುವುದು. ಹಾಗೆಯೇ ರಸ್ತೆಯಲ್ಲಿ ಸಾಗುವಾಗ ಆಂಬ್ಯುಲೆನ್ಸ್ ಗೆ ದಾರಿ ಬಿಡದ ವಾಹನ ಸವಾರರಿಗೆ 10,000 ರೂ. ದಂಡ ವಿಧಿಸಲಾಗುವುದು. ಅತಿ ವೇಗದ ಚಾಲನೆಗೆ 2,000 ರೂ. ದಂಡ, ಹೆಲ್ಮೆಟ್ ಧರಿಸದೇ ದ್ವಿಚಕ್ರ ಚಲಾಯಿಸಿದರೆ 1,000 ರೂ. ದಂಡದ ಜೊತೆಗೆ 3 ತಿಂಗಳು ಲೈಸೆನ್ಸ್ ರದ್ದುಗೊಳಿಸಲಾಗುವುದು. ಜೊತೆಗೆ ವಿಮೆ ಇಲ್ಲದೆ ವಾಹನ ಓಡಿಸಿದರೆ 2,000 ರೂ. ಹಾಗೂ ಕುಡಿದು ವಾಹನ ಚಲಾಯಿಸಿದರೆ 10,000 ರೂ. ದಂಡ ವಿಧಿಸಲಾಗುತ್ತದೆ.