ಸನ್ಮಾರ್ಗ ವಾರ್ತೆ-
ಬೆಂಗಳೂರು; ಸೆ. 12- ಗೋವಿಂದೂರು ಜಾರಿಗೆಬೈಲ್ ನಿಂದ ಸೆಟಲೈಟ್ ಕರೆ ಮಾಡಲಾಗಿದೆ ಎಂದು ಸುದ್ದಿ ತಯಾರಿಸುವ ಭರದಲ್ಲಿ ಅಬ್ದುರ್ರವೂಫ್ ಮುಸ್ಲಿಯಾರರ ಬಗ್ಗೆ ಗುಮಾನಿ ಹುಟ್ಟಿಸಿ, ಟಿವಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಚಿತ್ರ ವಿಚಿತ್ರ ವರದಿ ಪ್ರಕಟ/ ಪ್ರಸಾರವಾದ ವಿಷಯ ನಿಮಗೆ ಗೊತ್ತಿರಬಹುದು. ಆಗಸ್ಟ್ 17 ರಿಂದ ತೊಡಗಿ 19 ರವರೆಗೆ ಈ ಬಗ್ಗೆ ಮಾಧ್ಯಮಗಳಲ್ಲಿ ಭರಪೂರ ಸುದ್ದಿಗಳು ಪ್ರಕಟವಾಗಿದ್ದುವು. ಈ ಬಗ್ಗೆ ಇತ್ತೀಚೆಗಷ್ಟೇ ರಾಜ್ಯ ಮುಸ್ಲಿಂ ಲೇಖಕರ ಸಂಘವು ಸತ್ಯ ಶೋಧನಾ ಸಮಿತಿಯನ್ನು ರಚಿಸಿ ಪ್ರಕರಣದ ಬೆನ್ನು ಹತ್ತಿತ್ತು. ಗೋವಿಂದೂರು, ಜಾರಿಗೆಬೈಲು ಪರಿಸರದಲ್ಲಿ ಸುತ್ತಾಡಿ ಮಾಹಿತಿಗಳನ್ನು ಕಲೆಹಾಕಿತ್ತು.

ಆಗಸ್ಟ್ 17ರಿಂದ 19 ರವರೆಗೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳ ದೆಸೆಯಿಂದಾಗಿ ಅಬ್ದುರ್ರವೂಫ್ ಮುಸ್ಲಿಯಾರ್ ಪಟ್ಟ ಹಿಂಸೆ, ಅಲೆದಾಟ, ಎಸ್ಪಿ ಕಚೇರಿಗೆ ಭೇಟಿ, ಪತ್ರಿಕಾ ಗೋಷ್ಠಿ ಹೀಗೆ ತನ್ನದಲ್ಲದ ತಪ್ಪಿಗೆ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಇದೀಗ ಯುಎನ್ ಐ (UNI- ಯುನೈಟೆಡ್ ನ್ಯೂಸ್ ಆಫ್ ಇಂಡಿಯ) ಕನ್ನಡ ಸುದ್ದಿ ಜಾಲತಾಣವು ತನ್ನ ಸುದ್ದಿಗೆ ವಿಷಾದ ಸೂಚಿಸಿ ಸೆ. 11ರಂದು ಸುದ್ದಿ ಪ್ರಕಟಿಸಿದೆ. ಆಗಸ್ಟ್ 19 ರಂದು ಈ ಕನ್ನಡ ಸುದ್ದಿ ಜಾಲದಲ್ಲಿ, “ಸೆಟಲೈಟ್ ಕರೆ- ಮೌಲಿಯ ಬಂಧನ” ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು.
ಈ ಸುದ್ದಿಯು ಯಾವುದೇ ವ್ಯಕ್ತಿಗೆ ಅಪಮಾನ ಅಥವಾ ನೋವುಂಟು ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಸುದ್ದಿ ಮನೆಯ ಧಾವಂತದಿಂದಾಗಿ ಈ ಅಚಾತುರ್ಯದ ಸುದ್ದಿ ಪ್ರಕಟವಾಗಿದೆ ಎಂದು ಅದು ಬರೆದಿದೆ.












