ಸನ್ಮಾರ್ಗ ವಾರ್ತೆ
ದಮ್ಮಾಮ್,ಸೆ.13: ಊರಿನಿಂದ ಸಂದರ್ಶಕ ವೀಸಾದಲ್ಲಿ ಬಂದು ದೇಣಿಗೆ ಸಂಗ್ರಹಿಸುವುದನ್ನು ಕಸುಬು ಮಾಡಿಕೊಂಡಿದ್ದ ಕೇರಳದ ವ್ಯಕ್ತಿಯನ್ನು ದಮ್ಮಾಮ್ ಪೊಲೀಸರು ಬಂಧಿಸಿದ್ದಾರೆ. ಈತನನ್ನು ತನಿಖೆ ಗೊಳಪಡಿಸಿದ ಬಳಿಕ ಗಡಿಪಾರು ಕೇಂದ್ರಕ್ಕೆ ರವಾನಿಸಲಾಗಿದೆ. ಕಲ್ಲಿಕೋಟೆ, ಕಲ್ಲಾಯಿಯ ವ್ಯಕ್ತಿಯನ್ನು, ದಮ್ಮಾಮ್ನ ಸಿಕೊ ಪರಿಸರದಲ್ಲಿ ಸೌದಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಮನೆ ಜಫ್ತಿಯಾಗದಂತೆ ತಡೆಯಲು, ಹೆಣ್ಣುಮಕ್ಕಳ ಮದುವೆಗೆ ಈತ ಹಣ ಸಂಗ್ರಹಿಸುತ್ತಿದ್ದ. 2008ರಿಂದ ಹಲವು ಬಾರಿ ಈತ ಸೌದಿಗೆ ಬಂದು ದೇಣಿಗೆ ಸಂಗ್ರಹಿಸಿದ್ದಾನೆ. ಕೆಲವು ದಿವಸದ ಹಿಂದೆ ಮಸೀದಿಯಲ್ಲಿ ನಮಾಝ್ನ ನಂತರ ಎದ್ದು ನಿಂತು ಸಹಾಯ ಮಾಡುವಂತೆ ಮಲೆಯಾಳಂ ಭಾಷೆಯಲ್ಲಿ ವಿನಂತಿಸಿದ್ದ.
ಈತ ಏನು ಹೇಳಿದ್ದೆಂದು ಮಸೀದಿಯಲ್ಲಿದ್ದ ವಿವಿಧ ಭಾಷಾವಾರು ಜನರಿಗೆ ಗೊತ್ತಾಗಲಿಲ್ಲ. ಆದರೆ ಎಲ್ಲರೂ ದೇಣಿಗೆ ಕೊಟ್ಟಿದ್ದರು. ಇದು ಗಮನಕ್ಕೆ ಬಂದ ಕೆಲವು ಕೇರಳೀಯರು ಈತನಿಗೆ ಎಚ್ಚರಿಕೆ ನೀಡಿದ್ದರು. ಅವರ ಮಾತುಗಳಿಗೆ ಸೊಪ್ಪು ಹಾಕದೇ ಪುನಃ ಇದೇ ಕೆಲಸಕ್ಕೆ ಮುಂದಾದಾಗ ಇಂಟಲಿಜೆನ್ಸ್ ಪೊಲೀಸರ ವಶವಾಗಿದ್ದಾನೆ. ಮಸೀದಿಯಲ್ಲಿ ಬಹಿರಂಗ ಹಣ ಕಲೆಕ್ಷನ್ ಮಾಡಿದ್ದು ಸೌದಿ ಅಧಿಕಾರಿಗಳ ಗಮಕ್ಕೂ ಬಂದಿತ್ತು. ವಿಶೇಷ ಸಂದರ್ಶಕ ವೀಸಾದಲ್ಲಿ ಬಂದು ಹೀಗೆ ಮಾಡುವವರಿಗೆ ಈ ಘಟನೆ ಒಂದು ಮುನ್ನೆಚ್ಚರಿಕೆ ಕೂಡ ಆಗಿದೆ.












