ಬಿಜೆಪಿಯಿಂದ ಹಫ್ತಾ ವಸೂಲಿ…?

0
274

✍️ಅರಫಾ ಮಂಚಿ

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಬಿಜೆಪಿಯು ಸಿಬಿಐ, ಐಟಿ, ಇಡಿಗಳನ್ನು ದುರುಪಯೋಗಿಸಿ ಖಾಸಗಿ ಕಂಪೆನಿಗಳಿಂದ ಹಫ್ತಾ ವಸೂಲಿ ಮಾಡಿಸುತ್ತಿದೆ ಎಂದು ಹೇಳುತ್ತಾರೆ. ದೇಶದ 30 ಖಾಸಗಿ ಕಂಪೆನಿಗಳಿಂದ ಇಡಿ, ಐಟಿ, ಸಿಬಿಐಗಳ ಮೂಲಕ ಬಿಜೆಪಿ 335 ಕೋಟಿ ರೂಪಾಯಿ ಹಫ್ತಾ ವಸೂಲು ಬಿಜೆಪಿ ಮಾಡಿತು ಎನ್ನುವುದು ಕಾಂಗ್ರೆಸ್ಸಿನ ಕೇವಲ ಆರೋಪವಲ್ಲ. ಕಾಂಗ್ರೆಸ್ ಈ ಲೆಕ್ಕ ಎತ್ತಿಕೊಂಡದ್ದು ಚುನಾವಣಾ ಆಯೋಗದ ವೆಬ್‌ಸೈಟಿನಿಂದ. ಆದುದರಿಂದ ಕಾಂಗ್ರೆಸ್ ಹೇಳುವಂತೆ ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರವೇ ಬಿಜೆಪಿ ಈ ಕಂಪೆನಿಗಳನ್ನು ಬ್ಲ್ಯಾಕ್‌ಮೈಲ್ ಮಾಡಿ ದೋಚಿತು ಎಂದಾಗುತ್ತದೆ.

ಹಾಗೇ ಹೇಳುವುದಿದ್ದರೆ,
ಇಲೆಕ್ಟ್ರಾಲ್ ಬಾಂಡ್ ಅನ್ನು ಸುಪ್ರೀಂ ಕೋರ್ಟು ಕಾನೂನು ಬಾಹಿರ (ಅಸಂವಿಧಾನಿಕ) ಎಂದು ಘೋಷಿಸಿದ ಮೇಲೆ ಬಿಜೆಪಿಯ ಒಂದೊಂದು ಭ್ರಷ್ಟಾಚಾರದ ಕತೆಗಳು ದೇಶದ ಜನರ ಕಣ್ಣು ಕುಕ್ಕುವಂತೆ ಬಹಿರಂಗವಾಗುತ್ತಿದೆ. ಸುಪ್ರೀಂ ಕೋರ್ಟು ಆದೇಶವಿದ್ದುದರಿಂದ ಯಾವ್ಯಾವ ಪಾರ್ಟಿಗೆ ಯರ‍್ಯಾರು ಹಣ ಕೊಟ್ಟಿದ್ದಾರೆ ಎಂಬ ವಿವರಗಳನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದ್ದು. ಬಿಜೆಪಿಗೆ ಅಕ್ರಮವಾಗಿ ಸಂದಾಯವಾದ ಹಣದ ಲೆಕ್ಕವನ್ನು ಕಾಂಗ್ರೆಸ್ ಅಲ್ಲಿಂದ ಎತ್ತಿಕೊಂಡದ್ದು.

ಇತ್ತೀಚೆಗೆ ನಡೆದಿದ್ದ ಬಿಜೆಪಿಯ ಒಂದು ಸಭೆಯಲ್ಲಿ ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿ ತನ್ನ ಮೂರನೇ ಅವಧಿ ಈ ಹಿಂದಿನ ಎರಡೂ ಅವಧಿಗಿಂತ ಭಿನ್ನವಾಗಿರುತ್ತದೆ ಎಂದು ಹೇಳಿ ಕೊಂಡಿದ್ದರು. ಆ ಅವಧಿ ಶುರುವಾಗುವ ಮೊದಲೇ ಬಿಜೆಪಿಯ ಭ್ರಷ್ಟಾಚಾರದ ಭಿನ್ನವಿಭಿನ್ನ ಕತೆಗಳು ದೇಶದೊಳಗೆ ಬಹಿರಂಗಗೊಳ್ಳುತ್ತಿದೆ. ಅದರ ಗಬ್ಬು ನಾತ ವಿದೇಶಗಳಿಗೂ ಹರಡುತ್ತಿದೆ.

ಇತ್ತೀಚೆಗೆ, ಮೋದಿ ಸರಕಾರವು ತನ್ನನ್ನು ಹೆಚ್ಚೆಚ್ಚು ಆಡಳಿತಾತ್ಮಕ ಎಡವಟ್ಟುಗಳಲ್ಲಿ ತೊಡಗಿಸಿಕೊಂಡಿದೆ.
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್‌ರ ಮನೆ ಮತ್ತು ಅವರಿಗೆ ಸಂಬಂಧಿಸಿದ ಜಾಗಗಳಿಗೆ ಸಿಬಿಐ ದಾಳಿ ಮಾಡಿದ್ದು ಇಂತಹದ್ದರಲ್ಲೊಂದು ಎನ್ನಬಹುದು. ಮಲಿಕ್ ಅವರು ಪ್ರಧಾನಿ ಮೋದಿಯ ಬಹುದೊಡ್ಡ ಟೀಕಾಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ವಿರುದ್ಧ ಸಿಬಿಐ ಚುನಾವಣೆ ಹೊತ್ತಿಗೆ ದಾಳಿ ಮಾಡಿದರೆ ರೈತ ಸಮುದಾಯ ಜಾಟ್ ಸಮುದಾಯ ರೊಚ್ಚಿಗೇಳುವುದಿಲ್ಲವೇ. ಇದು ಕೂಡಾ ನಡೆದುದು ಪಂಜಾಬ್ ಗಡಿಯಲ್ಲಿ ರೈತರು 21 ಅಂಶಗಳ ಬೇಡಿಕೆಯನ್ನು ಮುಂದಿಟ್ಟು ಹೋರಾಟ ನಡೆಸುತ್ತಿರುವಾಗ. ಜಾಟರು, ರೈತರು ಉತ್ತರಪ್ರದೇಶ, ರಾಜಸ್ತಾನ ಮಧ್ಯ ಪ್ರದೇಶಗಳಲ್ಲಿ ಪ್ರಬಲ ಸಮುದಾಯ. ಈ ಸಮುದಾಯವನ್ನು ಎದುರು ಹಾಕಿಕೊಂಡರೆ ಬಿಜೆಪಿಗೆ ಮತ್ತೆ ಯಾರು ವೋಟು ಕೊಡುವುದು? ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಬಡವರಾ, ಮಧ್ಯಮ ವರ್ಗವಾ? ಅದರಲ್ಲೂ ಸತ್ಯಪಾಲ್ ಮಲಿಕ್‌ರು ರೈತನಾಗಿದ್ದಾರೆ. ರೈತರಿಗಾಗಿ ಕೊನೆ ಉಸಿರಿನವರೆಗೂ ಹೋರಾಡುತ್ತೇನೆ ಎನ್ನುತ್ತಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ವಿರುದ್ಧ ಸಿಬಿಐ ದಾಳಿ ಆದುದು ಖಂಡಿತ ರೈತರನ್ನು ಮತ್ತು ರೈತರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಬಿಜೆಪಿ ಹಾಕುತ್ತಿರುವ ಒಂದೊಂದು ಪಟ್ಟುಗಳು ಇತ್ತಿತ್ತಲಾಗಿ ತಿರುಗಾ ಮುರುಗಾ ಆಗುತ್ತಿದೆ. ಇದೇ ವೇಳೆ ಬಿಜೆಪಿ ನಾನೂರು ಸೀಟು ಗೆಲ್ಲುವ ಮಾತು ಚಪ್ಪರಿಸುತ್ತಿದೆ. ಆಶ್ಚರ್ಯ ಇದು.

ಬಿಜೆಪಿಯ ಭ್ರಷ್ಟಾಚಾರವನ್ನು ಕೆಚ್ಚೆದೆಯಿಂದ ದಿಟ್ಟವಾಗಿ ಬಹಿರಂಗ ಪಡಿಸಿದವರು ಸತ್ಯಪಾಲ್ ಮಲಿಕ್ ಆಗಿದ್ದಾರೆ. ಪುಲ್ವಾಮ ಸೇನಾ ಯೋಧರು ವೀರಮೃತ್ಯು ಘಟನೆಯನ್ನು ಮೊತ್ತಮೊದಲು ಬಹಿರಂಗವಾಗಿ ಪ್ರಶ್ನಿಸಿದವರೂ ಇವರೇ.

ಬಿಜೆಪಿಗೆ ಆದ ಇನ್ನೊಂದು ಬಹು ದೊಡ್ಡ ಮುಖಭಂಗ ಚಂಡೀಗಡ ಮೇಯರ್ ಚುನಾವಣೆಯಲ್ಲಿ ನಡೆದ ಮೋಸ. ಚುನಾವಣಾ ಆಯೋಗ ಬಿಜೆಪಿಯ ವ್ಯಕ್ತಿ ಅನಿಲ್ ಮಸಿ ಎಂಬವರನ್ನು ಮೇಯರ್ ಆಯ್ಕೆಯ ಚುನಾವಣಾಧಿಕಾರಿಯಾಗಿ ನೇಮಿಸಿತ್ತು. ಈ ವ್ಯಕ್ತಿ ಕಾಂಗ್ರೆಸ್ಸಿನ ವೋಟುಗಳನ್ನು ಅಸಿಂಧುಗೊಳಿಸಿ ಇಂಡಿಯಾ ಕೂಟದ ಅಭ್ಯರ್ಥಿಯನ್ನು ಸೋಲಿಸಿದ್ದರು. ಬಿಜೆಪಿಯನ್ನು ಗೆಲ್ಲಿಸಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟಿನ ಕಟಕಟೆಗೆ ಏರಿತು. ಈ ವಂಚನೆಯನ್ನು ಸುಪ್ರೀಂಕೋರ್ಟು ಎತ್ತಿಹಿಡಿಯಿತು. ಇದು ಕೂಡ ರೈತಾಂದೋಲನದ ತರ ಅಂತಾರಾಷ್ಟ್ರೀಯ ಸುದ್ದಿಯಾಗಿದೆ.

ಬಿಜೆಪಿಯ ತಂತ್ರ ಕುತಂತ್ರಗಳು ಜಗಜ್ಜಾಹೀರಾಯಿತು ಮತ್ತು ಇಂತಹ ಘಟನಾವಳಿಗಳಿಂದ ದೇಶದೊಳಗೆ ಮತ್ತು ಅಂತಾರಾಷ್ಟ್ರೀಯವಾಗಿಯೂ ಬಿಜೆಪಿ ಮುಖಭಂಗಕ್ಕೊಳಾಗಿದೆ. ಇಷ್ಟೆಲ್ಲ ಸಹಿಸಿಕೊಂಡು ಬಿಜೆಪಿಯನ್ನು ಜನರು ಮತ್ತೆ ಗೆಲ್ಲಿಸುತ್ತಾರೆ ಎನ್ನುವ ಬಿಜೆಪಿಯ ಪ್ರಚಾರಗಳಿಗೆ ಆಧಾರ ಇಲ್ಲ. ಹೌದು ರಾಮಮಂದಿರ ಕಟ್ಟಿಸಿದ ಕ್ರೆಡಿಟ್ಟು ಬಿಟ್ಟು ಬಿಜೆಪಿಯ ಬಳಿ ಇನ್ನೇನಿದೆ ಎಂದು ಈಗ ಜನರು ಪ್ರಶ್ನಿಸುತ್ತಿದ್ದಾರೆ. ಹಾಗಿದ್ದರೆ ಬಿಜೆಪಿ ತನ್ನನ್ನು ಗೆಲ್ಲಿಸಿಕೊಳ್ಳುವುದಕ್ಕೆ ಎಲ್ಲಿಂದ ಮತಗಳನ್ನು ತರುತ್ತಿದೆ? ಈ ಪ್ರಶ್ನೆ ಇಂದು ಇವಿಎಂ ಟೆಂಪರಿಂಗ್ ಆಗುತ್ತಿದೆ ಎಂದು ಬ್ಯಾಲೆಟ್ ಪೇಪರಿನಲ್ಲಿ ಚುನಾವಣೆ ನಡೆಸಬೇಕೆಂದು ಹೋರಾಟಕ್ಕಿಳಿದಿರುವ ಸುಪ್ರೀಂಕೋರ್ಟಿನ ವಕೀಲರು ಕೇಳುತ್ತಿದ್ದಾರೆ.

ಇನ್ನೊಂದು ಕಡೆ ಇವತ್ತು ಬಿಜೆಪಿಗೆ 3ನೇ ಬಾರಿ ಗೆಲ್ಲುವ ಭರವಸೆ ಇಲ್ಲ ಎಂಬ ಚರ್ಚೆಯೂ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ. ಆದ್ದರಿಂದ ಪ್ರತಿಪಕ್ಷಗಳ ಇಂಡಿಯ ಕೂಟವನ್ನು ಒಡೆಯುವ ತಂತ್ರಕ್ಕೆ ಕೈ ಹಾಕಿದ್ದು ಎನ್ನುವವರೂ ಇದ್ದಾರೆ. ಅದಕ್ಕೆ ಸೂಕ್ತ ಆಧಾರಗಳೂ ಇವೆ.
ನೋಡಿ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್‌ರನ್ನು ಬಿಜೆಪಿಗೆ ಕರೆತಂದು ರಾಜಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದು ಯಾಕೆ? ಈ ಸಲವೂ ಮಹಾರಾಷ್ಟ್ರದ ಗರಿಷ್ಠ ಸೀಟುಗಳನ್ನು ಗೆಲ್ಲಬೇಕೆಂಬ ಉದ್ದೇಶದಿಂದಾಗಿದೆ. ಬಿಹಾರದಲ್ಲಿ ಕಳೆದ ಬಾರಿಯಂತೆ ಕ್ಲೀನ್ ಸ್ವೀಪ್ ಮಾಡಬೇಕೆಂದು ನಿತೀಶ್‌ರನ್ನು ಎಳೆತಂದುದು. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಜೊತೆ ಇದ್ದ ಜಯಂತ್ ಚೌಧರಿಯವ ರನ್ನು ಎನ್‌ಡಿಎ ಸೇರಿಸಿದ್ದು. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಶಿವಸೇನೆಯನ್ನು ಹೋಳು ಮಾಡಿಸಿದ್ದು. ಇವೇ ಅಲ್ಲದೆ ಕೆಲವು ಮಹಾರಾಷ್ಟ್ರದ ಕಾಂಗ್ರೆಸ್ಸಿನ ಮುಸ್ಲಿಮ್ ಶಾಸಕರನ್ನು ಬಿಜೆಪಿಗೆ ಸೇರಿಸಿದ್ದು.

ಆಶ್ಚರ್ಯವೆಂದರೆ ನಮಗೂ ಮುಸ್ಲಿಮರ ಮತ ಗಳೂಬೇಕು ಎಂದು ಬಿಜೆಪಿ ಪ್ರಚಾರ ಮಾಡಲು ತೊಡಗಿದ್ದು ಬಿಜೆಪಿ ಬರೇ ಪ್ರಚಾರ ಮಾಡುತ್ತಿದೆ ಮತ್ತು ಗೆಲ್ಲುವ ಧೈರ್ಯ ಕಳಕೊಂಡಿದೆ ಎಂಬುದಕ್ಕೆ ಕಾರಣವಾಗಿ ಸೂಚಿಸಲಾಗುತ್ತಿದೆ. ಇನ್ನೊಂದು ಕಡೆ ಈ ಸಲ ಇನ್ನೂರಕ್ಕಿಂತ ಹೆಚ್ಚು ಸೀಟು ಬಿಜೆಪಿ ಗೆಲ್ಲುವುದಿಲ್ಲ ಎಂದು ಅರೆಸ್ಸೆಸ್ಸಿನ ಆಂತರಿಕ ಸರ್ವೇ ಕೂಡ ಹೇಳುತ್ತಿದೆ ಎಂದು ವರದಿಯಾಗಿತ್ತು. ಜೊತೆಗೆ ಈಗ ಕಾಂಗ್ರೆಸ್ ಎತ್ತಿದ 335 ಕೋಟಿ ಅಕ್ರಮ ಹಫ್ತಾ ವಸೂಲಿ ಆರೋಪ ಬೇರೆ.

ಹೌದು, ಬಿಜೆಪಿಯ ದುರದೃಷ್ಟಕ್ಕೆ ಇಂಡಿಯ ಕೂಟ ಮತ್ತೆ ಬಲಿಷ್ಠವಾಗುತ್ತಿದೆ. ಮಮತಾ ಬ್ಯಾನರ್ಜಿ, ದಿಲ್ಲಿಯ ಕೇಜ್ರಿವಾಲ್, ಅಖಿಲೇಶ್ ಯಾದವ್ ಎಲ್ಲರೂ ಇಂಡಿಯ ಕೂಟದೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ನಡುವೆ 28 ಸೀಟುಗಳ ಸೀಟು ಹಂಚಿಕೆ ಮುಗಿಯಿತು. ದಿಲ್ಲಿಯಲ್ಲಿ ಕಾಂಗ್ರೆಸ್, ಮೂರು, ಆಮ್ ಆದ್ಮಿಪಾರ್ಟಿ 4 ಸೀಟುಗಳಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಗುಜರಾತ್, ಮಧ್ಯಪ್ರದೇಶ ಹರ್ಯಾಣಗಳಲ್ಲಿ ಆಮ್ ಆದ್ಮಿ ಪಾರ್ಟಿಯೊಂದಿಗೆ ಕಾಂಗ್ರೆಸ್ ಸೀಟು ಹಂಚಿಕೆ ಕೂಡ ಆಗಿದೆ. ಇನ್ನೂ ಕುತೂಹಲ ಅಂದರೆ, ನಿತೀಶ್ ಕುಮಾರ್ ಮತ್ತೆ ಆರ್ ಜೆ ಡಿ, ಕಾಂಗ್ರೆಸ್ ಎಡಪಕ್ಷಗಳ ಕೂಟಕ್ಕೆ ಸೇರುತ್ತಾರೆ ಎಂದು ಸುದ್ದಿಯಾಗುತ್ತಿದೆ. ನಿತೀಶ್ ಬಿಹಾರದ ವಿಧಾನಸಭೆ ವಿಸರ್ಜಿಸಿ ಲೋಕಸಭೆಗೆ ಜೊತೆಯಲ್ಲಿ ಚುನಾವಣೆ ನಡೆಸಬೇಕೆಂದು ಬಿಜೆಪಿ ಜೊತೆ ಪುನಃ ಹೋಗಿದ್ದರು. ಬಿಜೆಪಿ ಕೊಟ್ಟ ಮಾತು ಈಡೇರಿಸಿಲ್ಲ. ಪುನಃ ಅವರು ಆರ್‌ಜೆಡಿ ಜೊತೆ ಸೇರ್ಪಡೆಯಾಗಬಹುದು ಎನ್ನಲಾಗುತ್ತಿದೆ. ಹೀಗೆ ಬಿಜೆಪಿಗೆ ಪರಿಸ್ಥಿತಿ ಅನಾನುಕೂಲವಾಗಿರುವಾಗ ಹೇಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾಲ್ನೂರು ಸೀಟುಗಳನ್ನು ಬಿಜೆಪಿ ಗೆಲ್ಲಬಹುದು?

ಹೌದು, ಯಾವಾಗಲೂ ಮೋಸ, ಕಪಟ, ಕುತಂತ್ರಗಳಿಂದ ಜನರ ಮನ ಗೆಲ್ಲುವುದು ಸಾಧ್ಯವಿಲ್ಲ. ಯಾವುದೇ ಪಕ್ಷದಿಂದ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾದರೆ ಜನರು ವೋಟು ಹಾಕಲು ಸಾಧ್ಯವಿಲ್ಲ.

ವಿಷಯ ಬದಲಿಸೋಣ:
ಉತ್ತರ ಪ್ರದೇಶದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಪರೀಕ್ಷೆಯ ಪೇಪರ್ ಲೀಕ್ ಆಗಿದೆ. ಇದು ಕಾನ್ಸ್ಟೇಬಲ್ ಉದ್ಯೋಗದ ಕನಸ್ಸು ಕಂಡಿದ್ದ ಯುವಕರ ನಿರಾಶೆ ಮಡುಗಟ್ಟುವುಕ್ಕೆ ಕಾರಣವಾಗಿದ್ದು 60 ಸಾವಿರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ 50 ಲಕ್ಷ ಜನ ಉದ್ಯೋಗಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಘಟನೆ ಒಂದು ಕಡೆ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಎಷ್ಟು ಘೋರ ರೂಪ ತಾಳಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಇನ್ನೊಂದು ಕಡೆ ಯೋಗಿ ಆದಿತ್ಯನಾಥರ ಸರಕಾರ ಚುನಾವಣೆ ಹತ್ತಿರ ಬರುವವರೆಗೂ ಇಷ್ಟು ಉದ್ಯೋಗಗಳನ್ನು ಖಾಲಿಯಾಗಿಟ್ಟು ಯುವಕರನ್ನು ನಿರುದ್ಯೋಗಿಯಾಗಿ ಉಳಿಸಿತ್ತು ಎಂಬುದನ್ನು ಬಹಿರಂಗಗೊಳಿಸುತ್ತದೆ. ಅಲ್ಲ, ಅಷ್ಟು ಮಂದಿ ಪರೀಕ್ಷೆ ಬರೆದರು. ಬರೆದೂ ಈ ಯುವಕರಿಗೆ ಏನು ಸಿಕ್ಕಿತು. ಮಣ್ಣಾಂಗಟ್ಟಿ? ಅಲ್ಲ, ಬಿಜೆಪಿಗೆ ಇವರ ವೋಟು ಬೇಕು ಅವರಿಗೆ ಕೊಟ್ಟದ್ದು ಮಾತ್ರ ಬರೇ ನಿರಾಶೆ.

ಹೌದು, ಯುವಕರಲ್ಲಿ ಬಿಜೆಪಿ ಸರಕಾರಗಳ ಕುರಿತು ಖಂಡಿತಾ ಆಕ್ರೋಶ ಭುಗಿಲೇಳುವುದಕ್ಕೆ ಇಂತಹ ಹಲವು ಕಾರಣಗಳಿವೆ. ಚುನಾವಣೆ ಗೆಲ್ಲುವುದಕ್ಕೆ ಬಿಜೆಪಿ ಏನೂ ಮಾಡಬಹುದು. ಇದೇ ವೇಳೆ ಜನರ ಬಗ್ಗೆ, ಪ್ರಜೆಗಳ ಅವರ ಬದುಕು ಮತ್ತು ಸಮಸ್ಯೆಗಳ ಬಗ್ಗೆ, ಅವರ ಜೀವನದ ಕಷ್ಟಗಳ ಬಗ್ಗೆ ಬಿಜೆಪಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಇದು ತೋರಿಸುತ್ತಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟಿನ ಚೀಫ್ ಜಸ್ಟಿಸ್ ಚಂದ್ರಚೂಡರು ನೀವು ನಾರಿ ಶಕ್ತಿ ಎಂದು ಪದೇ ಪದೇ ಹೇಳುತ್ತೀರಲ್ಲ, ಅದನ್ನು ಮಾಡಿ ತೋರಿಸಿ ಎಂದು ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ. ಮಹಿಳೆಯರಿಗೆ ಗಡಿ ಕಾಯಲು ಸಾಧ್ಯವಿದೆ ಎಂದಾದರೆ ತೀರವನ್ನು ಕಾಯಲು ಸಾಧ್ಯವಿದೆ. ನಾರಿಶಕ್ತಿಯನ್ನು ಪದೇಪದೇ ಹೇಳುವ ಸರಕಾರಕ್ಕೆ ಇದನ್ನು ಸಾಬೀತುಪಡಿಸಲು ಒದಗಿದ ಸಂದರ್ಭ ಇದೆಂದು ಚಂದ್ರ ಚೂಡರು ಹೇಳಿದರು.

ಭೂ ಸೇನೆ, ನೌಕಾ ಸೇನೆಯಲ್ಲಿ ಮಹಿಳೆಯರಿಗೆ ನೇಮಕಾತಿ ನೀಡುವಾಗ ಕೋಸ್ಟ್ ಗಾರ್ಡಿಗೆ ಮಾತ್ರ ಖಾಯಂ ನೇಮಕಾತಿ ಮಾಡುವ ಕುರಿತ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟು ಹೀಗಂದದ್ದು. ಕೋಸ್ಟ್ ಗಾರ್ಡಿನ ಕಡಿಮೆ ಅವಧಿಯ ಅಧಿಕಾರಿಯಾದ ಪ್ರಿಯಾಂಕ ತ್ಯಾಗಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ನಾರಿಶಕ್ತಿಯನ್ನು ಗೌರವಿಸುವ ಬಿಜೆಪಿ ಇಲ್ಲೇನು ಮಾಡಿತು?

ಮಹಿಳಾ ಮೀಸಲಾತಿಗೆ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ಕರೆದ ಮೋದಿ ಸರಕಾರ ಯಾಕೆ ಸೇನೆಯ ಉದ್ಯೋಗದಲ್ಲಿ ಮಹಿಳೆಯರೊಂದಿಗೆ ತಾರತಮ್ಯ ತೋರಿಸುತ್ತಿದೆ, ಇದು ಸರಿಯಲ್ಲ ಎಂದು ಸುಪ್ರೀಂಕೋರ್ಟು ಹೇಳುತ್ತಿದೆ. ಹಾಗಿದ್ದರೆ ಬಿಜೆಪಿ ಸರಕಾರ ನಾರಿ ಶಕ್ತಿಯನ್ನು ಅಪಮಾನಿಸಿದೆ ಎನ್ನಬಹುದು.

ಇತ್ತೀಚೆಗೆ ಚೆನ್ನೈ ಹೈಕೋರ್ಟು, ಮಹಿಳಾ ಪತ್ರಕರ್ತೆಯೊಬ್ಬರನ್ನು ಅಪಮಾನಿಸಿದ ಪ್ರಕರಣದಲ್ಲಿ ಬಿಜೆಪಿ ನಾಯಕ ತಮಿಳು ನಟ ಎಸ್‌ವಿ ಶೇಖರ್ ಎಂಬಾತನಿಗೆ ಮೂರು ತಿಂಗಳ ಸಜೆ ಮತ್ತು 15,000 ರೂಪಾಯಿ ದಂಡ ವಿಧಿಸಿದೆ. ಎಸ್‌ವಿ ಶೇಖರ್ ಮಹಿಳಾ ಪತ್ರಕರ್ತರು ಅನಕ್ಷರಸ್ಥರು, ಮೂರ್ಖರು, ಗಲೀಜುಗಳು ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ. 2018ರಲ್ಲಿ ಅಂದಿನ ತಮಿಳ್ನಾಡಿನ ರಾಜ್‌ಪಾಲ ಬನ್ವಾರಿಲಾಲ್ ಈ ಮಹಿಳಾ ಪತ್ರಕರ್ತೆಯ ಕೆನ್ನೆ ತಟ್ಟಿದ್ದರು. ಇದು ಈತನಿಗೆ ಸರಿ ಬರಲಿಲ್ಲ. ಈತ ಪತ್ರಕರ್ತೆಯನ್ನೇ ದೂಷಿಸಿದ್ದ. ಅದಕ್ಕೆ ಈಗ ಕೋರ್ಟು ಆತನ ಮನಸ್ಸಿನೊಳಗಿದ್ದ ಗಲೀಜು ನಂಜು ಗಳಿಗೆಲ್ಲ ತಕ್ಕ ಶಾಸ್ತಿ ಮಾಡಿದೆ.

ಇನ್ನೊಂದು ಘಟನೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ನಾಯಕ ಸಬ್ಯಸಾಚಿ ಘೋಷ್ ಸಹಿತ ಹನ್ನೊಂದು ಮಂದಿಯನ್ನು ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಿದ್ದಾರೆ. ಈತ ಹೌರಾದ ಹೊಟೇಲೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ಇದಕ್ಕೆ ಆತ ಅಪ್ರಾಪ್ತ ಬಾಲಕಿಯರನ್ನು ಕೂಡ ಬಳಸುತ್ತಿದ್ದ ಎಂದು ಪೊಲೀಸರು ಹೇಳುತ್ತಾರೆ. ಅಧಿಕಾರ ಬಲದಲ್ಲಿ ಬಿಜೆಪಿಯಲ್ಲಿ ಕೆಲವರು ಹೀಗೂ ಮಾಡುತ್ತಾರೆ. ಹಣ ಗಳಿಸುವುದಕ್ಕಾಗಿ ಎಷ್ಟು ನೀಚ ಮಟ್ಟಕ್ಕೂ ಇಳಿಯುತ್ತಾರೆ. ಹೀಗಿದ್ದೂ ಬಿಜೆಪಿಯನ್ನು ಜನರು ಗೆಲ್ಲಿಸಬಹುದು ಎಂದು ಯೋಚಿಸುವುದು ತರ್ಕಬದ್ಧ ಎಂದು ಹೇಳಲು ಸಾಧ್ಯವಿಲ್ಲ. ಇರಲಿ,

ವಿಷಯಕ್ಕೆ ಬರೋಣ:
400ಕ್ಕೂ ಹೆಚ್ಚು ಸೀಟುಗಳನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಬಿಜೆಪಿಯ ‘ಅಬ್‌ಕಿ ಬಾರ್ ಚಾರ್ ಸೌ ಪಾರ್’ ಘೋಷಣೆಗೆ ಕಾಂಗ್ರೆಸ್ ಎತ್ತಿದ ಹಫ್ತಾ ಭ್ರಷ್ಟಾಚಾರ ಬಹುದೊಡ್ಡ ಹಿನ್ನಡೆಯನ್ನು ತಂದಿಟ್ಟಿದೆ ಎಂದು ದಿಟವಾಗಿ ಹೇಳಬಹುದು. ಇನ್ನು ಬಿಜೆಪಿಯ ಹಿನ್ನಡೆಗೆ ಸತ್ಯಪಾಲ್ ಮಲಿಕ್ ಅವರು ಬಹಿರಂಗಪಡಿಸಿದ ಭ್ರಷ್ಟಾಚಾರ ಕತೆ ಬೇರೆಯೇ ಇದೆ. ಅವರು ಕಾಶ್ಮೀರದಲ್ಲಿ ರಾಜ್ಯಪಾಲರಾಗಿದ್ದಾಗ ಅವರ ಮುಂದೆ ಬಂದ 150-150 ಕೋಟಿಗಳ ಇಂಡೈರೆಕ್ಟ್ ಲಂಚ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಖಂಡಿತ ಬಿಜೆಪಿಯ ಭ್ರಷ್ಟಾಚಾರದ ಕಥೆಯನ್ನು ಹೇಳುತ್ತದೆ. ಅವರ ಮುಂದೆ ಅಂಬಾನಿಯ ಇನ್ಶೂರೆನ್ಸ್ ಪ್ರಾಜೆಕ್ಟ್‌ನ ಫೈಲಿಗೆ ಮತ್ತು ಹೈಡ್ರೋಪ್ರಾಜೆಕ್ಟ್ ಗೆ ಸಂಬಂಧಿಸಿದ ಎರಡು ಫೈಲುಗಳು ಇದ್ದವು. ಸರಕಾರದ ಮುಖ್ಯ ಕಾರ್ಯದರ್ಶಿ ಈ ಯೋಜನೆಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರಿಂದ ಸಹಿ ಹಾಕದೆ ಹಿಂದಿರುಗಿಸಿದ್ದರು. ನಂತರ ಬಿಜೆಪಿ ನಾಯಕ ರಾಮ್ ಮಾಧವ್ ರಾಜ್ಯಪಾಲರ ಸಹಿ ಮಾಡಿಸಲು ಪ್ರಯತ್ನಿಸಿದ್ದರು. 150 ಮತ್ತು 150 ಕೋಟಿ ರೂಪಾಯಿ ಲಂಚದ ಪ್ರಸ್ತಾವವೂ ಬಂದಿತ್ತು. ಇದನ್ನು ಮೋದಿಗೆ ತಿಳಿಸಿದ್ದೆ ಎಂದು ಈಗಲೂ ಸತ್ಯಪಾಲ್ ಮಲಿಕ್ ಹೇಳುತ್ತಾರೆ. ಅದರ ವಿರುದ್ಧ ಸರಕಾರದಿಂದ ಯಾವುದೇ ಕಾರ್ಯಾಚರಣೆ ಆಗಲಿಲ್ಲ ಬದಲಾಗಿ ತನ್ನನ್ನು ಜಮ್ಮು ಕಾಶ್ಮೀರದಿಂದ ಗೋವಾಕ್ಕೆ ವರ್ಗಾಯಿಸಲಾಯಿತು ಎನ್ನುತ್ತಾರೆ. ಸಾಲದ್ದಕ್ಕೆ ಈಗ ಅವರ ಮೇಲೆ ಸಿಬಿಐ ತನಿಖೆ ನಡೆಯುತ್ತಿದೆ. ಇದು ಮೋದಿ ಸರಕಾರದ ಮತ್ತು ಬಿಜೆಪಿಯವರ ಭ್ರಷ್ಟಾಚಾರ ಬಹಿರಂಗಗೊಳಿಸಿದ್ದಕ್ಕೆ ಸಿಕ್ಕ ಪಾರಿತೋಷಕ ಎಂದು ಜನರು ಹೇಳುತ್ತಿದ್ದಾರೆ.

ತಮ್ಮಲ್ಲಿ ಇಂತಹ ಭ್ರಷ್ಟಾಚಾರ ಇಟ್ಟುಕೊಂಡು ವಿಪಕ್ಷಗಳ ಭ್ರಷ್ಟಾಚಾರದ ಕತೆಗಳನ್ನು ಹೇಳುವ ಬಿಜೆಪಿಯನ್ನು ನಂಬಿ ಅದಕ್ಕೆ ಜನರು ವೋಟು ಹಾಕುತ್ತಾರಾ? ಇಂತಹ ಅನಾನುಕೂಲಕರ ಪರಿಸ್ಥಿತಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ನೂರಕ್ಕೂ ಹೆಚ್ಚು ಸೀಟು ಗೆಲ್ಲುವುದು ಹೇಗೆ?

ಇನ್ನೊಂದು ಕಡೆ ಬಿಜೆಪಿ ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಎರಡು ವರ್ಷದ ಹಿಂದೆ ಮಾತು ಕೊಟ್ಟು ವಂಚಿಸಿದೆ ಎನ್ನುವ ರೈತರು, ಬೇಡಿಕೆ ಈಡೇರದೆ ಕದಲುವುದಿಲ್ಲ ಎಂದು ಗಡಿಯಲ್ಲಿ ಹೋರಾಟಕ್ಕಿಳಿದಿದ್ದಾರೆ. ಇಂತಹ ಹಲವು ಬೇಡಿಕೆಗಳಲ್ಲಿ ಕೇಂದ್ರ ಸರಕಾರ ಮುಖ ತಿರುಗಿಸಿದ ರೋಷ ರೈತರಿಗಿದೆ. ಅವರು ಗಡಿಯಲ್ಲಿ ತಮ್ಮ ಮೇಲೆ ಅಶ್ರುವಾಯು ಪ್ರಯೋಗಿಸಿದರೂ ಪೆಲೆಟ್ ಗನ್ ನಿಂದ ಹೊಡೆದು ಗಾಯಗೊಳಿಸಿದರೂ ಕೊಂದರೂ ಪ್ರತಿಭಟನೆ ಕೊನೆಗೊಳಿಸುವುದಿಲ್ಲ ಎಂದು ಹಟ ಹಿಡಿದಿದ್ದಾರೆ. ಮೋದಿ ಸರಕಾರ ರೈತರನ್ನು ಹೇಗೆ ವಿಚಾರಿಸಿಕೊಂಡರೂ ವೋಟುಗಳು ಕೈ ತಪ್ಪುತ್ತವೆಯೇ ಹೊರತು ಬಿಜೆಪಿಗೆ ಪ್ರಯೋಜನ ಆಗುವುದಿಲ್ಲ.

ಇನ್ನೊಂದು ಕಡೆ, ಚುನಾವಣಾ ಆಯೋಗದ ಪಾರದರ್ಶಕ ಚುನಾವಣೆಯ ಬಗ್ಗೆಯೇ ಇವಿಎಂ ಹೋರಾಟಗಾರರು, ರೈತರು ಜನಸಾಮಾನ್ಯರು ಸಂದೇಹ ಪಡುತ್ತಿರುವಂತೆ ಚುನಾವಣಾ ಆಯೋಗದ ವೆಬ್‌ಸೈಟೇ 30 ಖಾಸಗಿ ಕಂಪೆನಿಗಳು ಬಿಜೆಪಿಗೆ 335 ಕೋಟಿ ರೂಪಾಯಿ ಹಣ ಕೊಟ್ಟ ಕತೆಯನ್ನು ಬಹಿರಂಗಪಡಿಸಿದ್ದು. ಕಾಂಗ್ರೆಸ್ ಇದನ್ನು ಲಂಚ (ಹಫ್ತಾ) ಎಂದು ಕರೆದದ್ದು. ಇಲೆಕ್ಟ್ರಾಲ್ ಬಾಂಡ್ ಮೂಲಕ ರಾಜಕೀಯ ಪಕ್ಷಗಳು ದೇಣಿಗೆ ಪಡೆಯುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟು ತೀರ್ಪಿನ ನಂತದ ಬೆಳವಣಿಗೆಗಳು ಇವು. ನಿಜಕ್ಕೂ ಬಿಜೆಪಿ 30 ಖಾಸಗಿ ಕಂಪೆನಿಗಳನ್ನು ಬೆದರಿಸಿ ಈ ಹಣ ಪಡೆದಿದೆಯೇ? ತನಿಖೆ ನಡೆಯಬೇಕಾಗಿದೆ. ಆದರೆ ಆಳುವ ಪಕ್ಷದ ವಿರುದ್ಧ ಕ್ರಮ ಜರಗುವುದು ಎಲ್ಲಿಯ ಮಾತು?

ಹೌದು,
ಇವತ್ತು ಬಿಜೆಪಿಯ ಭ್ರಷ್ಟಾಚಾರ ಮತ್ತು ವಿಪಕ್ಷಗಳ ವಿರುದ್ಧ ಕಾರ್ಯ ವೈಖರಿಯಿಂದ ವಿಪಕ್ಷಗಳು ಮಾತ್ರ ಅಲ್ಲ, ಅವರನ್ನು ಬೆನ್ನಟ್ಟುತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆಗಳ ಕಾರ್ಯಶೈಲಿ ನೋಡಿ ಜನಸಾಮಾನ್ಯರೂ ರೋಸಿ ಹೋಗಿದ್ದಾರೆ. ಈ ಸಿಟ್ಟು ಇಳಿಸುವುದಕ್ಕಾಗಿ ಅವರು ಪಾರ್ಲಿಮೆಂಟು ಚುನಾವಣೆಯನ್ನು ಕಾಯುತ್ತಿದ್ದಾರೆ.

ಇಂತಹ ಆಡಳಿತ ವಿರೋಧಿ ಅಲೆ ಇರುವಾಗ ಬಿಜೆಪಿ ಹೇಗೆ ನಾನೂರು ಸೀಟು ಗೆಲ್ಲುವುದು? ಆದ್ದರಿಂದ ಬಿಜೆಪಿಯ ‘ಅಬ್ ಕಿ ಬಾರ್ ಚಾರ್ ಸೌ ಪಾರ್’ ಎಂಬುದು. ವಿಪಕ್ಷಗಳು ಮತ್ತು ಬಿಜೆಪಿ ನಡುವೆ ಬರೇ ಹಫ್ತಾ ವಾರ್ ಆಗಿ ಅದು ಅಧಿಕಾರದಿಂದ ಕೆಳಗಿಳಿಯಬೇಕಾದ ಅನಿವಾರ್ಯತೆ ಸದ್ಯಕ್ಕೆ ಎದ್ದು ಕಾಣುತ್ತಿದೆ.