ನಿರ್ಭಯ ಆರೋಪಿಗಳ ಮೃತದೇಹ ಪೋಸ್ಟ್ ಮಾರ್ಟಂ, ಮೃತದೇಹ ಬಂಧುಗಳ ವಶಕ್ಕೆ

0
1577

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 20: ನಿರ್ಭಯ ಪ್ರಕರಣದಲ್ಲಿ ಇಂದು ಬೆಳಗ್ಗೆ 5:30ಕ್ಕೆ ಗಲ್ಲು ವಿಧಿಸಲಾದ ನಾಲ್ವರು ಆರೋಪಿಗಳ ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗುವುದು ಎಂದು ತಿಹಾರ್ ಜೈಲಿನ ನಿರ್ದೇಶಕ ಜನರಲ್ ಸಂದೀಪ್ ಗೋಯಲ್ ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಅಕ್ಷಯ್ ಸಿಂಗ್ ಠಾಕೂರ್, ಪವನ್ ಗುಪ್ತ, ವಿನಯ್ ಶರ್ಮ, ಮುಕೇಶ್ ಸಿಂಗ್‍ರ ಮೃತದೇಹವನ್ನು ಬೆಳಗ್ಗೆ 8:20ಕ್ಕೆ ಜೈಲಿನಿಂದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. 2014ರ ಸುಪ್ರೀಂಕೋರ್ಟಿನ ತೀರ್ಪಿನಂತೆ ಪೋಸ್ಟ್ ಮಾರ್ಟಂ ನಡೆಸಲಾಗುತ್ತಿದೆ.

ಗಲ್ಲಿಗೇರಿಸಲ್ಪಟ್ಟದವರು ಉಸಿರುಗಟ್ಟಿ ಸಾಯುತ್ತಾರೆ. ಇವೆಲ್ಲವನ್ನೂ ಪೋಸ್ಟ್ ಮಾರ್ಟಂನಿಂದ ಪತ್ತೆಹಚ್ಚಲು ಸಾಧ್ಯವಿದೆ. 2012ರಲ್ಲಿ ದಿಲ್ಲಿಯಲ್ಲಿ ಆರು ಮಂದಿ ಸೇರಿ ಓರ್ವ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರು. ರಾತ್ರೆ ಚಲಿಸುತ್ತಿರುವ ಬಸ್ಸಿನಲ್ಲಿ ಈ ದುಷ್ಕೃತ್ಯವೆಸಗಿದ್ದರು. ಆರೋಪಿಗಳಲ್ಲಿ ಒಬ್ಬ ವಿಚಾರಣೆಯ ವೇಳೆ ಮೃತಪಟ್ಟಿದ್ದ. ಆತ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಅಪ್ರಾಪ್ತ ವಯಸ್ಕನನ್ನು ಜುವೈನಲ್ ಕೋರ್ಟಿನಲ್ಲಿ ವಿಚಾರಣೆ ಮಾಡಲಾಗಿತ್ತು. ಅತ್ಯಂತ ಕ್ರೂರ ದೌರ್ಜನ್ಯವನ್ನು ಈ ಆರೋಪಿ ಮಾಡಿದ್ದ ಎಂದು ತನಿಖಾ ತಂಡ ಪತ್ತೆ ಹಚ್ಚಿತ್ತು. ಮೂರು ವರ್ಷದ ಜೈಲು ಶಿಕ್ಷೆಯ ಬಳಿಕ ಈತನನ್ನು ಬಿಡುಗಡೆಗೊಳಿಸಲಾಗಿತ್ತು. ನಂತರ ಉಳಿದ ನಾಲ್ಕು ಮಂದಿಯನ್ನು ಇಂದು ಬೆಳಗ್ಗೆ 5:30ಕ್ಕೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ.