ಸನ್ಮಾರ್ಗ ವಾರ್ತೆ
ನವದೆಹಲಿ: ಕೊರೋನಾ ಕಾಯಿಲೆಯ ಹಿನ್ನೆಲೆಯಲ್ಲಿ ಜಮಾಆತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸಆದತುಲ್ಲಾ ಹುಸೇನಿಯವರು ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದಿರುವಂತೆ ವಿನಂತಿಸಿದ್ದು, ಇದೊಂದು ಪರೀಕ್ಷೆಯಾಗಿದೆ ಎಂದು ಹೇಳಿದ್ದಾರೆ.
ಕೊರೋನಾ ಇಡೀ ಜಗತ್ತಿಗೆ ಒಂದು ಸವಾಲು ಮತ್ತು ಪರೀಕ್ಷೆಯಾಗಿದೆ. ನಮ್ಮ ದೇಶದಲ್ಲಿ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ. ಈ ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ನಾಗರಿಕರು ಜಾಗರೂಕರಾಗಿರಬೇಕು. ಸರ್ಕಾರ ಮತ್ತು ಅದಕ್ಕೆ ಸಂಬಂಧಪಟ್ಟ ಆರೋಗ್ಯ ತಜ್ಞರು ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದವರು ಹೇಳಿದ್ದಾರೆ.
1. ಜನರು ಗುಂಪಾಗಿ ಸೇರುವುದರಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಆದ್ದರಿಂದ, ಪ್ರಸ್ತುತ ಪರಿಸ್ಥಿತಿಯಲ್ಲಿ ದೊಡ್ಡ ಸಮ್ಮೇಳನ, ಸಭೆ ಮತ್ತು ಕಾರ್ಯಕ್ರಮಗಳನ್ನು ಏರ್ಪಡಿಸಬಾರದು. ಸಣ್ಣ ಸಭೆಗಳನ್ನು ನಡೆಸುವುದು ಅನಿವಾರ್ಯವಾದರೆ, ಅದಕ್ಕಾಗಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು.
2. ಪ್ರಯಾಣ ಮಾಡದಿರುವುದಕ್ಕೆ ಸಾಧ್ಯವಾದಷ್ಟು ಪ್ರಯತ್ನಿಸಿ, ನೀವಿರುವಲ್ಲೇ ಉಳಿದುಕೊಳ್ಳಿ. ಇದು ಪ್ರವಾದಿ ಮುಹಮ್ಮದ್ ಅವರ ಮಾರ್ಗದರ್ಶನವಾಗಿದೆ.
3. ಶುಕ್ರವಾರದ ನಮಾಜ್ ಮತ್ತು ಪ್ರವಚನವು ಸಂಕ್ಷಿಪ್ತವಾಗಿರಲಿ; ಜನರು ನಮಾಜ್ ನ ನಂತರ ತಕ್ಷಣ ಚದುರಿಹೋಗಬೇಕು ಮತ್ತು ಮನೆಯಲ್ಲಿ “ಸುನ್ನತ್” ನಮಾಜ್ ನಿರ್ವಹಿಸಬೇಕು.
4. ದೈನಂದಿನ ಐದು ನಮಾಜ್ ಗಳು ಕೂಡ ಚಿಕ್ಕದಾಗಿರಬೇಕು. ಮಸೀದಿಗಳಲ್ಲಿ ಕಡ್ಡಾಯ ನಮಾಝನ್ನು ಮಾತ್ರ ನಿರ್ವಹಿಸಬೇಕು. . ಮಸೀದಿಗಳಲ್ಲಿ ಸ್ವಚ್ಛತೆಗೆ ವಿಶೇಷ ಗಮನ ನೀಡಬೇಕು. ಸಾಧ್ಯವಾದರೆ, ಸ್ಯಾನಿಟೈಜರ್ಗಳ ವ್ಯವಸ್ಥೆ ಮಾಡಬೇಕು.
5. ಶೀತ, ಜ್ವರ, ಕೆಮ್ಮು ಮತ್ತು ಸೀನು ಇರುವವರು ಮಸೀದಿಗಳಿಗೆ ಹೋಗಬಾರದು. ವೃದ್ಧರು, ಅನಾರೋಗ್ಯ ಇರುವವರು ಮತ್ತು ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು.
6. ಸಿಎಎ-ಎನ್ಆರ್ಸಿ-ಎನ್ಪಿಆರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನಾ ಆಂದೋಲನವು ಮುಂದುವರಿಯಬೇಕು. ಆದರೆ ಸ್ಥಳೀಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಜನರ ಜೀವಕ್ಕೆ ಅಪಾಯವಾಗದಂತೆ ಮತ್ತು ಆರೋಗ್ಯ ಇಲಾಖೆಯಿಂದ ಹೊರಡಿಸಲಾದ ಸೂಚನೆಗಳನ್ನು ಉಲ್ಲಂಘಿಸದ ರೀತಿಯಲ್ಲಿ ಅದನ್ನು ಸಂಘಟಿಸಬೇಕು.
7. ಕೊರೋನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಆರೋಗ್ಯವಂತರಿಗೆ ಸೋಂಕು ತಗುಲಿದರೂ ಅವರ ಮೇಲೆ ಅದು ಪರಿಣಾಮ ಬೀರದೆ ಇರಬಹುದು. ಆದರೆ, ದುರ್ಬಲರಿಗೆ ಸೋಂಕು ತಗುಲಿದರೆ ಅದು ಅವರ ಸಾವಿಗೆ ಕಾರಣವಾಗಬಹುದು. ಇಸ್ಲಾಂ ಧರ್ಮವು ಸ್ವತಃ ಅಪಾಯಕ್ಕೆ ದೂಡಿಕೊಳ್ಳುವುದನ್ನೂ ಮತ್ತು ಇತರರನ್ನು ಅಪಾಯಕ್ಕೆ ತಳ್ಳುವುದನ್ನೂ (ಲಾ ಜರಾರ್ ವಲಾ ಜರಾರ್) ನಿಷೇಧಿಸುತ್ತದೆ. ಆದ್ದರಿಂದ, ರೋಗವನ್ನು ಹರಡುವ ಮಾಧ್ಯಮವಾಗದಿರಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಮತ್ತು ಅದಕ್ಕಾಗಿ ಅವನು / ಅವಳು ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನೂ ಅಳವಡಿಸಿಕೊಳ್ಳಬೇಕು.
8. ಮುನ್ನೆಚ್ಚರಿಕೆ ವಹಿಸುವ ಅವಶ್ಯಕತೆಯಿರುವಲ್ಲಿ, ಇಸ್ಲಾಂನಲ್ಲಿ ‘ಮುಬಾ’ (ಅನುಮತಿ) ಮತ್ತು ‘ಮುಸ್ತಹಬ್’ (ಶಿಫಾರಸು) ವಿಷಯಗಳ ಬಗ್ಗೆ ಯಾವುದೇ ಹಠ ಇಲ್ಲವೇ ನಿರ್ಬಂಧ ಇರಬಾರದು.
ಈ ನಿಟ್ಟಿನಲ್ಲಿ ಜಮಾಅತ್ನ ಎಲ್ಲಾ ಸ್ಥಳೀಯ ಘಟಕಗಳು ಮತ್ತು ಸಂಘಟನೆಯ ಕಾರ್ಯಕರ್ತರು ಸರ್ಕಾರ ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಅವರು ನಿರಂತರವಾಗಿ ಪ್ರಯತ್ನಿಸಬೇಕು. ಈ ಎಲ್ಲಾ ಪರಿಸ್ಥಿತಿಗಳು ಸೃಷ್ಟಿಕರ್ತನ ಅಪಾರ ಶಕ್ತಿ ಮತ್ತು ಮನುಷ್ಯನ ಅಸಹಾಯಕತೆಯನ್ನು ನಮಗೆ ನೆನಪಿಸುತ್ತವೆ. ಈ ಪರಿಸ್ಥಿತಿಯಲ್ಲಿ ನಾವು ದೇವನ ಕಡೆಗೆ ಮರಳೋಣ. ನಾವು ಪಶ್ಚಾತ್ತಾಪಪಟ್ಟು ಆತನಲ್ಲಿ ಕ್ಷಮೆ ಕೋರೋಣ. ನಮ್ಮನ್ನು ವಿಪತ್ತಿನಿಂದ ರಕ್ಷಿಸುವ “ಮಸ್ನೂನ್” ಪ್ರಾರ್ಥನೆಗಳ ಪಠಣವನ್ನು ಖಚಿತಪಡಿಸಿಕೊಳ್ಳೋಣ. ನಮ್ಮ ಕುಟುಂಬ, ರಾಷ್ಟ್ರ ಮತ್ತು ಮಾನವೀಯತೆಯ ಸುರಕ್ಷತೆ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾವು ನಿರಂತರವಾಗಿ ಪ್ರಾರ್ಥಿಸೋಣ.
ಈ ಪರಿಸ್ಥಿತಿಗಳು ನಮ್ಮ “ದಾವತಿ” ಜವಾಬ್ದಾರಿಗಳನ್ನು ಕೂಡ ನೆನಪಿಸುತ್ತವೆ. ನೈಸರ್ಗಿಕ ವಿಪತ್ತುಗಳಿಗೆ ಮುಖ್ಯ ಕಾರಣವೆಂದರೆ ಈ ಜಗತ್ತಿನಲ್ಲಿನ ಕ್ರೌರ್ಯ, ದಬ್ಬಾಳಿಕೆ, ಭ್ರಷ್ಟಾಚಾರ ಮತ್ತು ಅಶಾಂತಿ ಎಂದು ನಾವು ಜನರಿಗೆ ನೆನಪಿಸಬೇಕು. ಆದ್ದರಿಂದ, ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ನಮ್ಮ ಸ್ವ-ಮೌಲ್ಯಮಾಪನವನ್ನು ಕೈಗೊಳ್ಳಬೇಕು ಎಂದವರು ಹೇಳಿದ್ದಾರೆ.












