ಚರ್ಮ ರೋಗಗಳಿಗೆ ಹೋಮಿಯೋಪತಿ ಮದ್ದು- 1

0
1902

ಡಾ| ಅಲ್‍ಫ್ರೀಡಾ ಲವಿನ ಪಿಂಟೊ
ಹೋಮಿಯೋಪತಿ ತಜ್ಞರು, ಮಂಗಳೂರು
(ಪೋ: 9449300306)

ಚರ್ಮವು ನಮ್ಮ ದೇಹದ ಅತೀ ದೊಡ್ಡ ಅಂಗಾಂಗವಾಗಿದೆ. ಸಾಮಾನ್ಯ ಮನುಷ್ಯನ ಚರ್ಮವು ಅಂದಾಜು 4 ಕಿಲೋದಷ್ಟು ತೂಕವಿರುತ್ತದೆ. ಹೀಗಿರುವಾಗ ಇದರ ಪ್ರಾಮುಖ್ಯತೆ ಎಷ್ಟೆಂಬುದು ತಿಳಿಯುತ್ತದೆ. ನಮ್ಮ ಚರ್ಮಕ್ಕೆ, ದೇಹವನ್ನು ರಕ್ಷಣೆ ಮಾಡುವು ದರ ಜೊತೆಗೆ ಹಲವಾರು ಇತರ ಕಾರ್ಯಗಳಿವೆ- ಆಂತರಿಕ ಪರಿಸರದ ಸಮತೋಲನ, ನಮ್ಮ ದೇಹದ ಉಷ್ಣತೆ ಕಾಪಾಡುವುದು, ದೇಹದ ತೇವಾಂಶ ಕಾಪಾಡಿಕೊಳ್ಳುವುದು, ವಿಟಮಿನ್ `ಡಿ’ ಸಂಶ್ಲೇಷಣೆ ಇತ್ಯಾದಿ.

ಚರ್ಮದ ಮಹತ್ವ ಅಷ್ಟೊಂದಿರುವಾಗ ಚರ್ಮದ ಕಾಯಿಲೆಗಳೂ ಹಲವಾರು. ಒಂದು ಅಧ್ಯಯನದ ಪ್ರಕಾರ 20-30% ಜನರಿಗೆ ಚಿಕಿತ್ಸೆ ಅಗತ್ಯವಿರುವ ಚರ್ಮದ ಕಾಯಿಲೆಯಿದೆ. ಆದರೆ ಹಲವು ತೊಂದರೆ ಗಳಿಗೆ ಜನರು ಸ್ವಂತ ಚಿಕಿತ್ಸೆ, ಮನೆ ಮದ್ದು ಅಥವಾ ಯಾವುದಾದರೂ ಮುಲಾಮು ಹಚ್ಚಿ ಸುಮ್ಮನಿರುತ್ತಾರೆ. ಚರ್ಮ ರೋಗವು ಸಮಾಜದಲ್ಲಿ ಒಂದು ಬಗೆಯ ಕೀಳರಿಮೆ ಉಂಟುಮಾಡುವ ಸನ್ನಿವೇ ಶಗಳು ಇರುತ್ತವೆ. ಚರ್ಮ ರೋಗವು ಹೋಮಿಯೋಪತಿ ವೈದ್ಯರನ್ನು ಜನರು ಸಂಪರ್ಕಿಸುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಂತಹ ಕೆಲವು ಚರ್ಮ ರೋಗಗಳನ್ನು ಒಂದೊಂದಾಗಿ ವಿವರಿಸುವ ಪ್ರಯತ್ನ ಇಲ್ಲಿದೆ.

ಬಿಳಿ ತೊನ್ನು (ವಿಟಿಲಿಗೊ):

ಚರ್ಮದ ಬಣ್ಣ ನಶಿಸಿ ಹೋಗಿ ಚರ್ಮ ಬಿಳಿ ಬಣ್ಣಕ್ಕೆ ತಿರುಗುವ ಕಾಯಿಲೆಯೇ ವಿಟಿಲಿಗೊ. ಚರ್ಮದ ಸಹಜ ಬಣ್ಣಕ್ಕೆ ಕಾರಣವಾಗಿರು ವುದು ಮೆಲಾನಿನ್ ಎಂಬ ಅಂಶ. ಇದು ಮೆಲಾನೊಸೈಟ್ ಎಂಬ ಚರ್ಮದ ಕೋಶಗಳಲ್ಲಿ ಉತ್ಪತ್ತಿಯಾಗುತ್ತದೆ. ವಿಟಿಲಿಗೊ ಕಾಯಿಲೆಯಲ್ಲಿ ಈ ಕೋಶಗಳು ನಾಶವಾಗುವುದರಿಂದ ಮೆಲಾನಿನ ಅಂಶದ ಕೊರತೆಯುಂಟಾಗುತ್ತದೆ. ಹಾಗಾಗಿ ಚರ್ಮದ ಬಣ್ಣ ಬಿಳಿಯಾಗುತ್ತದೆ. ಇದು ದೇಹದ ಯಾವುದೇ ಪ್ರತ್ಯೇಕ ಭಾಗಕ್ಕೆ ಸೀಮಿತವಾಗಿರಬಹುದು ಅಥವಾ ಹಲವು ಭಾಗಗಳನ್ನು ಆವರಿಸಬಹುದು. ಇದಕ್ಕೆ ನಿಖರ ಕಾರಣವೇನೆಂಬುದು ತಿಳಿದಿಲ್ಲ. ಆದರೆ ತಜ್ಞರು ಹೇಳುವ ಪ್ರಕಾರ ಇದು ಸ್ವಯಂ ನಿರೋಧಕ ಅಸ್ವಸ್ಥತೆಯಿಂದಾಗಿ ಉಂಟಾಗಬಹುದು. ಹಾಗೆಂದರೆ ತಮ್ಮದೇ ದೇಹದ ಶಕ್ತಿ, ಅದೇ ದೇಹದ ಕಣಗಳನ್ನು ನಾಶಮಾಡುವ ಸ್ಥಿತಿಯಾಗಿದೆ.

1. ವಿಟಿಲಿಗೊ ಸಾಮಾನ್ಯವಾಗಿ 40 ವರ್ಷದೊಳಗೆ ಪ್ರಾರಂಭಗೊಳ್ಳುತ್ತದೆ.

2. ಇದು ವಂಶ ಪಾರಂಪರ್ಯವಾಗಿ ಬರಬಹುದು.

3. ಈ ಕಾಯಿಲೆ ನೋವನ್ನುಂಟು ಮಾಡುವುದಿಲ್ಲ ಮತ್ತು ಇದರಿಂದ ಯಾವುದೇ ಅಹಿತಕರ ಆರೋಗ್ಯ ಸಮಸ್ಯೆ ಉಂಟಾಗದು. ಆದರೆ ಮಾನಸಿಕ ದುಗುಡಕ್ಕೆ ಇದು ಕಾರಣವಾಗುತ್ತದೆ.

4. ಪ್ರಚಲಿತ ವೈದ್ಯಕೀಯ ಪದ್ಧತಿಯಲ್ಲಿ ಇದರ ತೀವ್ರತೆಯನ್ನು ಹತೋಟಿಯಲ್ಲಿಡಬಹುದೇ ಹೊರತು ಇದನ್ನು ಸಂಪೂರ್ಣ ಗುಣಪಡಿಸುವುದು ಕಷ್ಟಕರವಾಗಿದೆ.

ಆದರೆ ಹೋಮಿಯೋಪತಿ ಚಿಕಿತ್ಸೆಯಿಂದ ಅನೇಕರಿಗೆ ಬಿಳಿ ತೊನ್ನು ಸಮಸ್ಯೆಯಿಂದ ಪರಿಹಾರ ಲಭಿಸಿದ ಉದಾಹರಣೆಗಳಿವೆ. ಹೋಮಿಯೋ ಪತಿಯಲ್ಲಿ ಓರ್ವ ರೋಗಿಯ ಪೂರ್ಣ ವ್ಯಕ್ತಿತ್ವದ ಆಧಾರದ ಮೇಲೆ ಹೊಂದಿಕೊಂಡು ಚಿಕಿತ್ಸೆ ನೀಡುವುದರಿಂದ ಇಂತಹ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿರುತ್ತದೆ. ಆದರೆ ಇದಕ್ಕೆ ದೀರ್ಘ ಅವಧಿಯ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಹೋಮಿಯೋಪತಿ ಔಷಧಗಳಲ್ಲಿ ಯಾವುದೇ ಅಡ್ಡಪರಿಣಾಮ ಗಳಿರುವುದಿಲ್ಲ. ಚಿಕಿತ್ಸೆಗೆ ರೋಗಿಯ ಸಹಕಾರ ಅಗತ್ಯ. ರೋಗಿಯು ತನ್ನ ಬಗೆಗಿನ ಎಲ್ಲಾ (ಮಾನಸಿಕ, ಭಾವನಾತ್ಮಕ, ದೈಹಿಕ ಹಾಗೂ ಕಾಯಿಲೆ ಬಗೆಗಿನ) ಮಾಹಿತಿಗಳನ್ನು ವೈದ್ಯರೊಂದಿಗೆ ಹಂಚಿಕೊಳ್ಳ ಬೇಕು. ಇದರ ಆಧಾರದ ಮೇಲೆ ವೈದ್ಯರು ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.