ಕೇರಳ: ಕಾರು ಚಲಾಯಿಸುವಾಗಲೇ ಹೃದಯಾಘಾತವಾಗಿ ವ್ಯಕ್ತಿ ನಿಧನ

0
340

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ಕೋವಿಡ್ ಬಳಿಕ ದೇಶದಲ್ಲಿ ಹೃದಯಾಘಾತ ಹಾಗೂ ಹೃದಯ ಸ್ತಂಭನ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ ವರದಿಯಾಗುತ್ತಲೇ ಇದೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಕೇರಳದಲ್ಲಿ ವ್ಯಕ್ತಿಯೋರ್ವರು ಕಾರು ಚಲಾಯಿಸುವಾಗಲೇ ಹೃದಯಾಘಾತವಾಗಿ ನಿಧನರಾದ ಘಟನೆ ನಡೆದಿದೆ.

ಕಾರು ಚಲಾಯಿಸುತ್ತಿರುವುದರ ನಡುವೆ ಕುರ್ಯನ್ ಎಂಬವರಿಗೆ ಹೃದಯಾಘಾತವಾಗಿದ್ದರಿಂದ ಕಾರು ಅಪಘಾತಕ್ಕೂ ತುತ್ತಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ದಾರಿ ಮಧ್ಯೆ ಮೃತರಾದರು.

ಕೊಡಿಚೇರಿಯವರಾದ ಕುರ್ಯನ್‍ರಿಗೆ ಅರುವತ್ತೆರಡು ವರ್ಷವಾಗಿತ್ತು. ಇವರು ಚಲಾಯಿಸಿದ ಕಾರು ಪೊಲೀಸ್ ಸಿಬ್ಬಂದಿ ಸಿಪಿಒ ಜಿತೇಶ್(33) ಎಂಬವರಿಗೆ ಢಿಕ್ಕಿಯಾಗಿದ್ದು, ಗಾಯಗೊಂಡಿದ್ದರಿಂದ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.

ನಿನ್ನೆ ಮಧ್ಯಾಹ್ನ 12 ಗಂಟೆಗೆ ಘಟನೆ ನಡೆದಿದ್ದು, ಅವರು ಮತ್ತು ನಾನು ಕಾರಿನಲ್ಲಿ ಬಂಧುವೊಬ್ಬರ ಮನೆಗೆ ಹೋಗುತ್ತಿದ್ದಾಗ ದಾರಿ ಮಧ್ಯೆ ಹೃದಯಾಘಾತವಾಗಿದೆ ಎಂದು ಪತ್ನಿ ತಿಳಿಸಿದ್ದಾರೆ. ನಿಯಂತ್ರಣ ಕಳೆದುಕೊಂಡ ಕಾರು ಸ್ಕೂಟರಿಗೆ ಢಿಕ್ಕಿ ಹೊಡೆದು ನಂತರ ಕಲ್ಲಿಗೆ ಗುದ್ದಿ ನಿಂತಿತು. ಕೂಡಲೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.