ಹಿಂದುತ್ವವು ಭಾರತೀಯ ಇತಿಹಾಸದ ವಸಾಹತುಶಾಹಿ ಅರ್ಥೈಸುವಿಕೆಗಳ ಮೇಲೆ ನಿರ್ಮಿತವಾಗಿದೆ: ರೊಮಿಲಾ ಥಾಪರ್

0
223

ಸನ್ಮಾರ್ಗ ವಾರ್ತೆ

ಹೊಸದೆಹಲಿ: ಹಿಂದುತ್ವವು ಭಾರತೀಯ ಇತಿಹಾಸದ ವಸಾಹತುಶಾಹಿ ಅರ್ಥೈಸುವಿಕೆಗಳ ಮೇಲೆ ನಿರ್ಮಿತವಾಗಿದೆ ಎಂದು ಖ್ಯಾತ ಇತಿಹಾಸಕಾರ್ತಿ ರೊಮಿಲಾ ಥಾಪರ್ ಹೇಳಿದ್ದಾರೆ. ಸಾಮಾಜಿಕ ಮತ್ತು ರಾಜಕೀಯ ಪ್ರಕ್ರಿಯೆಗಳನ್ನು ಸರಳ ಧಾರ್ಮಿಕ ಕಥನಗಳಿಗೆ ಸೀಮಿತಗೊಳಿಸುವ ಮೂಲಕ ವಸಾಹತುಶಾಹಿ ಇತಿಹಾಸಕಾರರು ಮೂಲಭೂತವಾಗಿ ಭಾರತೀಯ ಇತಿಹಾಸವನ್ನು ರೂಪಿಸಿದ್ದಾರೆ ಎಂದೂ ಅವರು ಬೆಟ್ಟು ಮಾಡಿದ್ದಾರೆ. ‘ಸೀತಾರಾಂ ಯೆಚೂರಿ ಸ್ಮಾರಣಾರ್ಥ’ ಕಾರ್ಯಕ್ರಮದ ಭಾಗವಾಗಿ ‘ಇತಿಹಾಸ ಬರವಣಿಗೆ ಮತ್ತು ಆರಂಭಿಕ ಭಾರತೀಯ ಇತಿಹಾಸ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಅವರು ಈ ಮಾತುಗಳನ್ನು ಹೇಳಿದರು.

ವಸಾಹತುಶಾಹಿ ಇತಿಹಾಸಕಾರರು ಭಾರತವನ್ನು ‘ಪೌರಸ್ತ್ಯ ಸರ್ವಾಧಿಕಾರ’ದ (Oriental tyranny) ದೃಷ್ಟಿಕೋನದ ಮೂಲಕ ನೋಡಿದ್ದಾರೆ ಎಂದು ಥಾಪರ್ ಹೇಳಿದರು. ಏಷ್ಯನ್ ಸಮಾಜಗಳನ್ನು ಸ್ಥಿರ, ಬದಲಾಗದ ಮತ್ತು ಸರ್ವಾಧಿಕಾರಿಗಳಿಂದ ಆಳಲ್ಪಟ್ಟವುಗಳಂತೆ ಚಿತ್ರಿಸಲಾಗಿದೆ. ಭಾರತೀಯ ಇತಿಹಾಸವನ್ನು ಧಾರ್ಮಿಕ ದೃಷ್ಟಿಕೋನದ ಮೂಲಕ ಓದುವ ಪ್ರವೃತ್ತಿಯು ವಸಾಹತುಶಾಹಿ ಇತಿಹಾಸಕಾರರಿಂದ ಬಳುವಳಿಯಾಗಿ ಬಂದಿದೆ ಎಂದು ಅವರು ಹೇಳಿದರು.

ಶಾಸನಗಳಂತಹ ಭೌತಿಕ ಆಧಾರಗಳಿಗೆ ಹೆಚ್ಚಿನ ಗಮನ ನೀಡಿದ್ದರೆ ಭಾರತೀಯ ಇತಿಹಾಸವನ್ನು ವಿಭಿನ್ನವಾಗಿ ಅರ್ಥೈಸಬಹುದಿತ್ತು. ಗುಪ್ತರ ನಂತರದ ಅವಧಿಯನ್ನು ಉಲ್ಲೇಖಿಸಿದ ಥಾಪರ್, ಆಡಳಿತ ಪದ್ಧತಿಗಳು, ಜಾತಿ ಸಂಬಂಧಗಳು ಮತ್ತು ಸಾಮಾಜಿಕ ಜೀವನದ ವಿವಿಧ ಮಗ್ಗುಲುಗಳನ್ನು ದಾಖಲಿಸುವ ಶಾಸನಗಳ ವಿಫುಲತೆಯು, ಕೇವಲ ಧಾರ್ಮಿಕ ಪಠ್ಯಗಳನ್ನು ಅವಲಂಬಿಸುವುದಕ್ಕಿಂತ ಗತಕಾಲದ ಬಗ್ಗೆ ಹೆಚ್ಚು ಸಮೃದ್ಧ ತಿಳುವಳಿಕೆಯನ್ನು ನೀಡುತ್ತದೆ ಎಂದು ಸೂಚಿಸಿದರು.

ವಸಾಹತುಶಾಹಿ ಇತಿಹಾಸಕಾರರು ವ್ಯಾಪಕ ಸಾಮಾಜಿಕ ಮತ್ತು ರಾಜಕೀಯ ಸಂಘರ್ಷಗಳನ್ನು ಧಾರ್ಮಿಕ ಪೈಪೋಟಿಗಳಾಗಿ ಬಿಂಬಿಸುವ ಮೂಲಕ ಅವುಗಳನ್ನು ಅತಿಯಾಗಿ ಸರಳೀಕರಿಸಿದ್ದಾರೆ. ಇಂತಹ ವರದಿಗಳು ಇತರ ಅಂಶಗಳನ್ನು ನಿರ್ಲಕ್ಷಿಸಿ, ಧರ್ಮದ ಮೇಲಷ್ಟೇ ಗಮನ ಕೇಂದ್ರೀಕರಿಸಿದ ‘ಏಕ-ಕಾರಣದ’ (single-causal) ವಿವರಣೆಗಳನ್ನು ಸೃಷ್ಟಿಸಿವೆ. ಧಾರ್ಮಿಕ ವಿಭಜನೆಗಳನ್ನು ಎತ್ತಿ ತೋರಿಸಿದ ವಸಾಹತುಶಾಹಿ ಆಲೋಚನೆಯ ಮೇಲೆ ನಿರ್ಮಿಸುವ ಬದಲು, ಹೊಸ ಪುರಾವೆಗಳನ್ನು ಅವಲಂಬಿಸಿ ಇತಿಹಾಸವನ್ನು ‘ವಸಾಹತುಮುಕ್ತ’ (decolonization) ಮಾಡುವ ಅಗತ್ಯವಿದೆ ಎಂದು ಅವರು ವಾದಿಸಿದರು.