ಸನ್ಮಾರ್ಗ ವಾರ್ತೆ
ಲೆಬನಾನ್ ನ ಹಿಝ್ಬುಲ್ಲಾ ಸಂಘಟನೆಯ ಕಾರ್ಯಕರ್ತರ ಬಳಿ ಇದ್ದ ಪೇಜರ್ ಗಳು ಸ್ಪೋಟಗೊಳ್ಳುವುದಕ್ಕೆ ಇಸ್ರೇಲ್ ಕಾರಣ ಅನ್ನುವುದು ಗೊತ್ತಾಗಿದೆ. ಇದನ್ನು ತೈವಾನ್ ಕಂಪೆನಿಯ ಹೆಸರಲ್ಲಿ ಯುರೋಪಿನಲ್ಲಿ ನಿರ್ಮಿಸಲಾಗಿದ್ದು ಈ ಪೇಜರ್ಗಳ ಒಳಗೆ ಇಸ್ರೇಲ್ ಗುಪ್ತಚರ ಸಂಘಟನೆಯಾದ ಮೊಸಾದ್ ಸ್ಪೋಟಕ ವಸ್ತುವನ್ನು ತುಂಬಿತ್ತು ಎಂದು ಬಯಲಾಗಿದೆ.
ತಿಂಗಳುಗಳ ಹಿಂದೆ 5000 ಪೇಜರ್ಗಳನ್ನು ಹಿಝ್ಬುಲ್ಲಾ ಖರೀದಿಸಿತ್ತು. ಈ ಪೇಜರ್ಗಳು ಲೆಬನಾನ್ ಗೆ ತಲುಪುವುದಕ್ಕಿಂತ ಮೊದಲೇ ಅದರೊಳಗೆ ಸ್ಪೋಟಕವನ್ನು ತುಂಬಿಸಲು ಇಸ್ರೇಲ್ ಯಶಸ್ವಿಯಾಗಿತ್ತು ಎಂದು ವರದಿಯಾಗಿದೆ. ಇದೇ ವೇಳೆ ಈ ಪೇಜರ್ ಗಳನ್ನು ತಾವು ನಿರ್ಮಿಸಿಲ್ಲ ಎಂದು ತೈವಾನ್ ಕಂಪನಿ ಹೇಳಿದೆ.
ತಿಂಗಳುಗಳಿಗಿಂತ ಮೊದಲೇ ಈ ಕುರಿತಂತೆ ಇಸ್ರೇಲ್ ಸಂಚು ನಡೆಸಿತ್ತು ಎಂದು ಹೇಳಲಾಗಿದೆ. 2024 ಮಾರ್ಚ್ ಮತ್ತು ಮೇ ನಡುವೆ ಈ ಪೇಜರ್ ಗಳು ಲೆಬನಾನ್ ತಲುಪಿವೆ. ಈ ಪೇಜರ್ ಗಳನ್ನು ಕರೆ ಮಾಡುವುದಕ್ಕೆ ಉಪಯೋಗಿಸುತ್ತಿಲ್ಲ. ಸಂದೇಶವನ್ನು ಓದಲು ಮತ್ತು ಕಳುಹಿಸಲು ಮಾತ್ರ ಉಪಯೋಗಿಸಲಾಗುತ್ತಿತ್ತು. ಇಸ್ರೇಲ್ ನ ಕಣ್ಗಾವಲಿನಿಂದ ತಪ್ಪಿಸುವುದಕ್ಕಾಗಿ ಹಿಝ್ಬುಲ್ಲ ಇದನ್ನು ಬಳಸುತ್ತಿತ್ತು. ಇದು ತುಂಬಾ ಹಳೆಯ ಸಂವಹನ ಸಾಧನ. ಈ ಪೇಜರ್ ಗಳ ಬೋರ್ಡ್ ನಲ್ಲಿ ವಿಶೇಷ ವ್ಯವಸ್ಥೆಯನ್ನು ಮೊಸಾದ್ ಸ್ಥಾಪಿಸಿದೆ ಎಂದು ನಂಬಲಾಗಿದೆ.
ಯಾವಾಗ ಅದರ ಕೋಡ್ ಸಂಖ್ಯೆಗೆ ಮೊಸಾದ್ ಹೊಸ ಸಂದೇಶವನ್ನು ರವಾನಿಸಿತೊ 3 ಸಾವಿರದಷ್ಟು ಪೇಜರ್ ಗಳು ಒಮ್ಮೆಲೇ ಸ್ಫೋಟಗೊಂಡವು. ಈ ಪೇಜರ್ ಗಳು ಸ್ಫೋಟಗೊಳ್ಳುವ ಮೊದಲು ಹತ್ತು ಸೆಕೆಂಡುಗಳ ಕಾಲ ಬೀಫ್ ಸದ್ದು ಉಂಟಾಗಿತ್ತು. ಹೊಸ ಸಂದೇಶ ಬಂದಿರಬಹುದು ಎಂದು ಅಂದುಕೊಂಡು ಪೇಜರನ್ನು ಜನರು ಕೈಗೆ ಎತ್ತಿಕೊಂಡಿದ್ದಾರೆ. ತಕ್ಷಣ ಅದು ಸ್ಫೋಟಿಸಿದೆ. ಆದ್ದರಿಂದ ಹೆಚ್ಚಿನವರ ಮುಖ ಮತ್ತು ಕೈಗೆ ಏಟಾಗಿದೆ.
1996ರಲ್ಲಿ ಹಮಾಸ್ ಮುಖಂಡ ಯಹ್ಯಾ ಅಯ್ಯಾಶಿಯನ್ನು ಇದೇ ಮಾದರಿಯಲ್ಲಿ ಇಸ್ರೇಲ್ ಹತ್ಯೆ ಮಾಡಿತ್ತು.