ಕೆಂಪು ಸಮುದ್ರದಲ್ಲಿ ಹೌತಿ ದಾಳಿ: ಇಸ್ರೇಲ್‌ಗೆ ತೆರಳುತ್ತಿದ್ದ ಹಡಗು ಮುಳುಗಿ 4 ಮಂದಿ ಸಾವು, 12 ಮಂದಿ ನಾಪತ್ತೆ

0
913

ಸನ್ಮಾರ್ಗ ವಾರ್ತೆ

ಸನಾ: ಯೆಮೆನ್‌ನ ಹೌತಿ ಬಂಡುಕೋರರು ಇಸ್ರೇಲ್‌ಗೆ ತೆರಳುತ್ತಿದ್ದ ಮತ್ತೊಂದು ಹಡಗನ್ನು ಕೆಂಪು ಸಮುದ್ರದಲ್ಲಿ ವಶಪಡಿಸಿಕೊಂಡು ಮುಳುಗಿಸಿರುವ ಘಟನೆ ನಡೆದಿದೆ. ಲೈಬೀರಿಯನ್ ಧ್ವಜ ಹೊಂದಿದ್ದ ‘ಎಟರ್ನಿಟಿ ಸಿ’ ಹೆಸರಿನ ಸರಕು ಹಡಗು, ಇಸ್ರೇಲ್‌ನ ಐಲಾತ್ ಬಂದರಿಗೆ ತೆರಳುವಾಗ ಹೌತಿಯರ ದಾಳಿಗೆ ಒಳಗಾಗಿ ನಾಶವಾಗಿದೆ.

ಹಡಗಿನಲ್ಲಿ 26 ಸಿಬ್ಬಂದಿ ಇದ್ದರು. ದಾಳಿಯಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಹತ್ತು ಜನರನ್ನು ರಕ್ಷಿಸಲಾಗಿದೆ. ಉಳಿದ 12 ಮಂದಿ ಕಾಣೆಯಾಗಿದ್ದು, ಹುಡುಕಾಟ ಮುಂದುವರಿದಿದೆ. ಮೃತರಲ್ಲಿ ಫಿಲಿಪೈನ್ಸ್ ಮತ್ತು ಗ್ರೀಸ್ ದೇಶಗಳ ಸಿಬ್ಬಂದಿಯು ಸೇರಿದ್ದಾರೆ. ಬದುಕುಳಿದವರಲ್ಲಿ ಒಬ್ಬರು ಭಾರತೀಯರಾಗಿದ್ದಾರೆ ಎಂದು ವರದಿಯಾಗಿದೆ.

ಹಡಗಿನ ಮೇಲೆ ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಹೌತಿ ವಕ್ತಾರ ಯಾಹ್ಯಾ ಸಾರಿ ತಿಳಿಸಿದ್ದಾರೆ. ದಾಳಿಯ ದೃಶ್ಯಗಳನ್ನು ಕೂಡ ಹೌತಿಗಳು ಬಿಡುಗಡೆ ಮಾಡಿದ್ದಾರೆ. ಹಡಗು ಇಸ್ರೇಲ್‌ಗೆ ಹೋಗುತ್ತಿದ್ದ ಕಾರಣ ದಾಳಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಪೀಡ್‌ಬೋಟ್‌ಗಳಿಂದ ಹಡಗನ್ನು ಸುತ್ತುವರಿದು ಬಳಿಕ ಬಾಂಬ್‌ಗಳು ಹಾಗೂ ಗ್ರೆನೇಡ್‌ಗಳಿಂದ ದಾಳಿ ಮಾಡಲಾಯಿತು. ನಿಯಂತ್ರಣ ಕಳೆದುಕೊಂಡ ಹಡಗು ಮುಳುಗುತ್ತಲೇ ಇದ್ದಾಗ ಸಿಬ್ಬಂದಿ ಸಮುದ್ರಕ್ಕೆ ಹಾರಿದ್ದಾರೆ. ಹಡಗಿನಲ್ಲಿ 21 ಫಿಲಿಪಿನೋರು, ಒಬ್ಬ ರಷ್ಯಾ ಪ್ರಜೆ ಸೇರಿದ್ದರು.

ಈ ದಾಳಿಯ ಕೆಲವೇ ದಿನಗಳ ಹಿಂದೆ ‘ಮ್ಯಾಜಿಕ್ ಸೀಸ್’ ಎಂಬ ಇನ್ನೊಂದು ಲೈಬೀರಿಯನ್ ಹಡಗನ್ನು ಹೌತಿಗಳು ವಶಪಡಿಸಿಕೊಂಡಿದ್ದರು. ಈ ಮೂಲಕ ಒಂದು ವಾರದಲ್ಲಿ ಹೌತಿಯರಿಂದ ನಡೆಯುತ್ತಿರುವ ದಾಳಿಗಳ ಸಂಖ್ಯೆ ಎರಡಕ್ಕೆ ಏರಿದೆ.

ಘಟನೆಗೆ ವಿಶ್ವಸಂಸ್ಥೆಯ ಯೆಮೆನ್ ಪ್ರತಿನಿಧಿ ಹ್ಯಾನ್ಸ್ ಗ್ರಂಡ್‌ಬರ್ಗ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಹೌತಿಗಳು ಪ್ಯಾಲೆಸ್ಟೈನ್ ಪರ ಹೋರಾಟದ ಭಾಗವಾಗಿ ಇಸ್ರೇಲ್‌ಗೆ ಬೆಂಬಲ ನೀಡುವ ಹಡಗುಗಳ ವಿರುದ್ಧ ದಾಳಿ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.