ಸನ್ಮಾರ್ಗ ವಾರ್ತೆ
ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ ಪ್ರಕರಣದಲ್ಲಿ ದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ಔಪಚಾರಿಕವಾಗಿ ಆರೋಪ ಹೊರಿಸಿದ್ದು, ವಿಚಾರಣೆಯು ಆಗಸ್ಟ್ 3ರಂದು ಪ್ರಾರಂಭವಾಗಲಿದೆ.
ಪ್ರಾಸಿಕ್ಯೂಟರ್ಗಳ ಪ್ರಕಾರ, ಹಸೀನಾ ಅವರ ಮೇಲೆ ಕೊಲೆ, ಕೊಲೆಗೆ ಪ್ರಚೋದನೆ ಮತ್ತು ಚಿತ್ರಹಿಂಸೆ ಮುಂತಾದ ಆರೋಪಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಹಸೀನಾ ಅವರೊಂದಿಗೆ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಮಹಾನಿರ್ದೇಶಕ ಚೌಧರಿ ಅಬ್ದುಲ್ಲಾ ಅಲ್ ಮಾಮುನ್ ಕೂಡ ಸೇರಿದ್ದಾರೆ.
ನ್ಯಾಯಾಲಯದ ಮುಂದೆ ಹಾಜರಾದ ಮೂವರ ಪೈಕಿ ಚೌಧರಿ ಅಬ್ದುಲ್ಲಾ ಮಾಮುನ್ ಮಾತ್ರ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಕಳೆದ ವರ್ಷ ಜುಲೈ-ಆಗಸ್ಟ್ ತಿಂಗಳಲ್ಲಿ ದೇಶದಾದ್ಯಂತ ವಿದ್ಯಾರ್ಥಿಗಳ ಭಾರೀ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ನಿಗ್ರಹಿಸಲು ಭದ್ರತಾ ಪಡೆಗಳಿಗೆ ಆದೇಶ ನೀಡಲಾಗಿದೆ ಎಂಬ ಆರೋಪ ಹಸೀನಾ ಅವರ ಮೇಲಿದೆ. ಈ ಘಟನೆಗಳ ನಂತರ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.












