ಅಕ್ರಮಿಗಳು ನಿರ್ದಿಷ್ಟ ಕಾಲಕ್ಕೆ ಸೀಮಿತರಲ್ಲ

0
232

ಸನ್ಮಾರ್ಗ ವಾರ್ತೆ

✍️ಅದ್ಹಮ್ ಶರ್ಖಾವಿ

ಇಮಾಮ್ ಅಹ್ಮದ್ ತನ್ನ ಮುಸ್ನದ್ ಗ್ರಂಥದಲ್ಲಿ ಹೀಗೆ ಬರೆದಿರುತ್ತಾರೆ: “ಪ್ರವಾದಿ(ಸ) ಹೇಳಿದರು: “ನನ್ನ ಗಗನ ಯಾತ್ರೆಯ ಸಂದರ್ಭದ ಒಂದು ರಾತ್ರಿಯಲ್ಲಿ ನಾನು ಮನೋಹರವಾದ ಸುಗಂಧದ ಪರಿಮಳವನ್ನು ಆಸ್ವಾದಿಸುತ್ತಿದ್ದೆ. ನಾನು ಜಿಬ್ರೀಲ್(ಅ) ಜೊತೆ ಯಾಕೆ ಇಷ್ಟೊಂದು ಸುವಾಸನೆಯು ಬರುತ್ತಿದೆ ಎಂದು ಕೇಳಿದಾಗ `ಇದು ಫಿರ್‌ಔನನ ಪುತ್ರಿಯ ಕೂದಲು ಬಾಚುತ್ತಿದ್ದ ಮಹಿಳೆ(ಮಾಶಿತ) ಮತ್ತು ಆಕೆಯ ಮಕ್ಕಳ ಸುಗಂಧದ ಸುವಾಸನೆಯಾಗಿದೆ’ ಎನ್ನುತ್ತಾರೆ. ಹಾಗಾದರೆ ಅವರ ವಿಶೇಷತೆಯೇನೆಂದು ಕೇಳಿದಾಗ ಜಿಬ್ರೀಲ್ ಹೀಗೆ ಉತ್ತರಿಸಿದರು: “ಒಮ್ಮೆ ಫಿರ್‌ಔನನ ಮಗಳ ತಲೆಯನ್ನು ಮಹಿಳೆಯು ಬಾಚುತ್ತಿರುವಾಗ ಕೈಯಿಂದ ಬಾಚಣಿಗೆ ಕೆಳಗೆ ಬಿತ್ತು. ಅದನ್ನು ಅವರು ಬಿಸ್ಮಿಲ್ಲಾ ಎನ್ನುತ್ತಾ ಹೆಕ್ಕಿದರು. ಆಗ ಆ ಬಾಲಕಿ ನೀವು ನನ್ನ ತಂದೆಯ ಬಗ್ಗೆ ಹೇಳಿದಿರಾ? ಎಂದು ಕೇಳಿದಳು. ಆಗ ಅವರು “ಅಲ್ಲ. ಅದು ನನ್ನನ್ನೂ ನಿನ್ನನ್ನೂ ಸೃಷ್ಟಿಸಿದ ಸೃಷ್ಟಿಕರ್ತನಾದ ಅಲ್ಲಾಹನ ಕುರಿತು ಹೇಳಿದೆ” ಎಂದು ಹೇಳಿದರು.

ಈ ವಿಷಯ ನಾನು ನನ್ನ ತಂದೆಯಲ್ಲಿ ಹೇಳಲೇ ಎಂದು ಕೇಳಿದಾಗ, ಸರಿ ಎಂದು ಹೇಳಿದರು. ಆಕೆ ಅದನ್ನು ಫಿರ್‌ಔನನ ಮುಂದೆ ಹೇಳಿದಳು. ಕೂಡಲೇ ಆ ಮಹಿಳೆಯನ್ನು ಕರೆದು “ನಿನಗೆ ನನ್ನ ಹೊರತು ಬೇರೆ ದೇವನಿದ್ದಾನೆಯೇ ಎಂದು ಕೇಳಿದಾಗ, “ಹೌದು, ನನ್ನನ್ನೂ ನಿನ್ನನ್ನೂ ಸೃಷ್ಟಿಸಿದ ದೇವ ಅಲ್ಲಾಹ್” ಎಂದು ಹೇಳಿದರು. ನಂತರ ನಡೆದ ಘಟನೆ ತೀವ್ರ ಭಯಾನಕವಾಗಿತ್ತು. ಒಂದು ದೊಡ್ಡ ಹರಿವಾಣವನ್ನು ತಂದು ಅದರಲ್ಲಿ ತಾಮ್ರವನ್ನು ತುಂಬಿಸಿ ಅದನ್ನು ಬಿಸಿಮಾಡಿ ಅವರನ್ನೂ ಅವರ ಮಕ್ಕಳನ್ನೂ ತಂದು ಒಬ್ಬೊಬ್ಬರನ್ನೂ ಅದರಲ್ಲಿ ಹಾಕಲು ಆಜ್ಞಾಪಿಸಲಾಯಿತು. ಕೊನೆಯದಾಗಿ ನನ್ನದೊಂದು ವಿನಂತಿಯಿದೆ ಎಂದು ಆ ಮಹಿಳೆ ಹೇಳಿದರು. ನನ್ನ ಹಾಗೂ ನನ್ನ ಮಕ್ಕಳ ಎಲುಬುಗಳನ್ನು ಒಟ್ಟು ಸೇರಿಸಿ ಅದನ್ನು ಹೂಳುವಂತೆ ವಿನಂತಿಸಿದರು. ನಂತರ ಆಕೆಯ ಮಕ್ಕಳನ್ನೆಲ್ಲಾ ಒಂದೊಂದಾಗಿ ಕುದಿಯುವ ತಾಮ್ರಕ್ಕೆ ಹಾಕಲಾಯಿತು. ಕೊನೆಯದಾಗಿ ಮೊಲೆ ಹಾಲುಣ್ಣುವ ಪ್ರಾಯದ ಸಣ್ಣ ಮಗುವಿನ ಸರದಿ ಬಂತು. ಆ ಮಗು ತಲೆ ಎತ್ತಿ ಸ್ಥೈರ್ಯದಿಂದ ಹೇಳಿತು: “ಅಮ್ಮಾ ಭಯಪಡದಿರು. ಧೈರ್ಯದಿಂದ ಆ ಶಿಕ್ಷೆಯನ್ನು ಅನುಭವಿಸು. ಈ ಇಹಲೋಕದ ಶಿಕ್ಷೆಯು ಪರಲೋಕದ ಶಿಕ್ಷೆಯ ಮುಂದೆ ಏನೂ ಅಲ್ಲ.

ಸಂದೇಶ 1.
ತೊಟ್ಟಿಲಲ್ಲಿರುವ ಮಗು ಮಾತನಾಡಿದ ಕುರಿತು ಕೆಲವಾರು ವರದಿಗಳಿವೆ. ಪ್ರವಾದಿ ಈಸಾ(ಅ), ಜುರೈಝ್ ಮುಂತಾದವರ ಘಟನೆಯಲ್ಲಿ ಆಡು ಮೇಯಿಸುವವನ ಮಗ, ತಾಯಿಯ ಪ್ರಾರ್ಥನೆಗೆ ಉತ್ತರಿಸಿದ ಮಗು ಹೀಗೆ ಮೂರು ಘಟನೆಗಳು ಇಮಾಮ್ ಮುಸ್ಲಿಮರ ವರದಿಯಲ್ಲಿದೆ. ಇಮಾಮ್ ಅಹ್ಮದ್‌ರ ವರದಿಯ ಈ ಘಟನೆ ನಾಲ್ಕನೆಯದ್ದು. ಪ್ರವಾದಿ ಯೂಸುಫ್(ಅ) ನಿರಪರಾಧಿ ಎಂದು ಸಾಕ್ಷಿ ಹೇಳಿದ ಮಗುವಿನ ಘಟನೆಯೂ ಇದರಲ್ಲಿ ಸೇರಿಸಬೇಕು. ಅದು ಇಸ್ರಾಈಲರ ಅವಧಿಯಲ್ಲಿ ನಡೆದಿದ್ದರೆ ಅದನ್ನು ಸ್ಪಷ್ಟವಾಗಿ ನಿರಾಕರಿಸಲು ನಮ್ಮಲ್ಲಿ ಯಾವುದೇ ಪುರಾವೆಯಿಲ್ಲ. ಬನೀ ಇಸ್ರಾಈಲರ ಕುರಿತು ನೀವು ಮಾತನಾಡಿರಿ. ಅದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂಬುದು ಪ್ರವಾದಿ ವಚನ. ಇಮಾಮ್ ಮುಸ್ಲಿಮ್‌ರ ವರದಿಯನುಸಾರ ಒಂದೆರಡು ಘಟನೆಯನ್ನು ಸೇರಿಸಿದರೆ ಅಂತಹ ಆರು ಮಕ್ಕಳು ಇದ್ದರೆಂಬುದನ್ನು ಸಂಗ್ರಹಿಸಬಹುದು.

ಸಂದೇಶ 2.
ನಿಮಗೆ ಅಂತ್ಯ ಸಮೀಪಿಸಿದೆ ಎಂದು ಸ್ಪಷ್ಟವಾದಾಗ ವಿಶ್ವಾಸವನ್ನು ಅಡಗಿಸಿಟ್ಟರೆ ಯಾವುದೇ ತೊಂದರೆಯಿಲ್ಲ. ಫಿರ್‌ಔನನ ಕುಟುಂಬಕ್ಕೆ ಸೇರಿದ ವ್ಯಕ್ತಿಯೋರ್ವರು ತನ್ನ ವಿಶ್ವಾಸವನ್ನು ಅಡಗಿಸಿಟ್ಟದ್ದನ್ನು ಪವಿತ್ರ ಕುರ್‌ಆನ್ ಹೊಗಳಿದ್ದನ್ನು ಕಾಣಬಹುದು. ಅವರು ಫಿರ್‌ಔನ್‌ಗೆ ಸೇರಿದ ವ್ಯಕ್ತಿ ತನ್ನ ವಿಶ್ವಾಸವನ್ನು ಅಡಗಿಸಿಟ್ಟು “ಅಲ್ಲಾಹನು ನನ್ನ ಪ್ರಭು” ಎಂದು ಹೇಳಿದ್ದಕ್ಕಾಗಿ ನೀವು ಓರ್ವನನ್ನು ವಧಿಸುತ್ತಿದ್ದೀರಾ ಎಂದು ಕೇಳಲಾಯಿತು. ಆ ಸಂದರ್ಭದಲ್ಲಿ ತನ್ನ ವಿಶ್ವಾಸವನ್ನು ಅಡಗಿಸಿಡುವುದು ಆ ವ್ಯಕ್ತಿಗೆ ಹೆಚ್ಚು ಪ್ರಯೋಜನಕಾರಿ. ಮೊದಲು ಅವರ ಬದುಕು ಮೌಲ್ಯಯುತವಾದುದಾಗಿತ್ತು. ವಿಶ್ವಾಸವಿಟ್ಟ ಕಾರಣಕ್ಕಾಗಿ ತನ್ನ ಪತ್ನಿಯನ್ನೇ ವಧಿಸಿದ ಫರೋವನು ಪ್ರವಾದಿ ಮೂಸಾ(ಅ)ರ ಮೇಲೆ ವಿಶ್ವಾಸದವಿಟ್ಟ ತನ್ನ ಕುಟುಂಬದ ಯಾರನ್ನೂ ಸುಮ್ಮನೆ ಬಿಡಲಾರ.

ಎರಡನೇಯದಾಗಿ ಅರಮನೆಯ ಪ್ರಧಾನ ವ್ಯಕ್ತಿಯು ಫಿರ್‌ಔನನ ಎಲ್ಲಾ ನಡೆಗಳನ್ನು ಅರಿತವರಾಗಿದ್ದರು. ಸಹಜವಾಗಿ ಶತ್ರುವಿನ ಅರಮನೆಯಲ್ಲಿ ಗುರಿಯಾಗಿರುವ ನೋಟದ ಒಂದು ಕಣ್ಣು ಶತ್ರುವಿನ ವಿರುದ್ಧವಿರುವ ಖಡ್ಗಕ್ಕಿಂತ ತೀಕ್ಷ್ಣವಾಗಿರುವುದು. ಮೂರನೆಯದಾಗಿ ತನ್ನ ವಿಶ್ವಾಸ ಬಹಿರಂಗ ಪಡಿಸುವ ಹೊರತು ಅಲ್ಲಿ ವೈಯಕ್ತಿಕವಲ್ಲದ ಬೇರೆ ಯಾವುದೇ ಫಲ ಲಭಿಸದು, ಯಾಕೆಂದರೆ ವಿಶ್ವಾಸವನ್ನು ಬಹಿರಂಗಪಡಿಸಿದ ಕೂಡಲೇ ಆಸಿಯಾ ಬೀವಿ ಹಾಗೂ ಮಾಶಿತಾ ವಧಿಸಲ್ಪಟ್ಟು ಹುತಾತ್ಮರಾಗುತ್ತಾರೆ. ಇದು ವೈಯಕ್ತಿಕವಾದ ಪ್ರಯೋಜನವಾಗಿದೆ. ವೈಯಕ್ತಿಕ ಹಿತಕ್ಕಿಂತ ರಕ್ಷಣೆಯ ಮತ್ತು ಧರ್ಮ ಪ್ರಚಾರದ ರಕ್ಷಣೆಯ ಹಿತ ಮುಖ್ಯವಾಗಿರುತ್ತದೆ. ಹಾಗಂತ ಆಸಿಯಾ ಬೀವಿ ಮತ್ತು ಮಾಶಿತಾ ತಮ್ಮ ವಿಶ್ವಾಸ ಬಹಿರಂಗ ಪಡಿಸುವಾಗ ಅದರಿಂದ ಆಗುವ ಪ್ರತ್ಯಾಘಾತದ ಬಗ್ಗೆ ಊಹಿಸಿರಲಿಕ್ಕಿಲ್ಲ ಎಂದು ಹೇಳಲಾಗದು. ಯಾಕೆಂದರೆ ಮಾಶಿತ ಕೇವಲ ಓರ್ವ ಸೇವಕಿಯಾಗಿದ್ದರು. ಫಿರ್‌ಔನ್ ರಾಜಾಧಿರಾಜನೆಂದು ಅಹಂಕಾರದಿಂದ ಗರ್ವ ಪಡುತ್ತಿರುವವ. ಈತನಿಗೆ ಸಾಮಾನ್ಯ ಸೇವಕಿಯೊಬ್ಬಳು ಸವಾಲೆಸೆದದ್ದು ಸಹಿಸಲಾಗಲಿಲ್ಲ. ಇದಕ್ಕಿಂತ ದೊಡ್ಡ ಶರ‍್ಯ ಯಾವುದಿದೆ?

ಸಂದೇಶ 3.
ವಿಶ್ವಾಸವು ಮನುಷ್ಯನ ಹೃದಯದಲ್ಲಿ ದೃಢವಾಗಿ ಬೇರೂರಿದರೆ ಅದು ಇನ್ನೋರ್ವ ಮನುಷ್ಯನ ಮುಂದೆ ತಲೆ ತಗ್ಗಿಸದ ಮಹಾ ಪರ್ವತವಾಗಿ ಬದಲಾಗುವುದು. ಸತ್ಯವಿಶ್ವಾಸಿಗಳ ಇತಿಹಾಸ ಹೀಗೇ ಇರುತ್ತದೆ. ದೈಹಿಕವಾಗಿ ಅಬಲೆಯಾದ ಆಸಿಯಾ ಬೀವಿ ಶಿಲುಬೆ ಏರಲು ಅದರ ನೋವು ಸಹಿಸಲು ಸಿದ್ಧವಾಗುತ್ತಾರೆ. ದುರ್ಬಲೆಯಾದ ಮಾಶಿತಾ ಕೂಡಾ ದೃಢಚಿತ್ತರಾಗಿ ನಿಲ್ಲುತ್ತಾರೆ. ಬಂಡೆ ಕಲ್ಲನ್ನು ಎತ್ತಿ ಉಮಯ್ಯ ಬಿನ್ ಖಲಫ್ ಬಿಸಿ ಮರಳಿನಲ್ಲಿ ಬಿಲಾಲ್‌ರ ಎದೆಯಲ್ಲಿಟ್ಟರೂ ಏನೂ ಪ್ರಯೋಜನವಾಗುವುದಿಲ್ಲ. ಅಹದ್ ಅಹದ್ ಎಂಬ ಧ್ವನಿ ಮಾತ್ರ ಅಲ್ಲಿ ಮೊಳಗುತ್ತದೆ. ಪ್ರವಾದಿ ಮೂಸಾ(ಅ)ರಲ್ಲಿ ವಿಶ್ವಾಸವಿರಿಸಿದವರ ಕೈಕಾಲುಗಳನ್ನು ಕತ್ತರಿಸಿದರೂ ಪ್ರಯೋಜನವಾಗುವುದಿಲ್ಲ. ನಿನ್ನ ಆಡಳಿತ ಈ ಲೋಕದಲ್ಲಿ ಮಾತ್ರವಲ್ಲವೇ ಎಂದು ಅವರು ಧೈರ್ಯದಿಂದ ಹೇಳುತ್ತಾರೆ.

ಸಂದೇಶ 4.
ಅಕ್ರಮಿಗಳು ಎಲ್ಲಾ ಕಾಲದಲ್ಲಿಯೂ ಇರುತ್ತಾರೆ. ಹೆಸರಿನಲ್ಲಿ ಮಾತ್ರ ಬದಲಾವಣೆ ಇರುತ್ತದೆ. ಚಿಂತನೆ ಮಾತ್ರ ಒಂದೇ ರೀತಿ ಇರುತ್ತದೆ. ಫಿರ್‌ಔನ್ ಕೊಲ್ಲುತ್ತಾನೆ, ಶಿಲುಬೆಗೆ ಏರಿಸುತ್ತಾನೆ. ಇಬ್ರಾಹೀಮ್(ಅ)ರನ್ನು ಬೆಂಕಿಗೆ ಹಾಕುತ್ತಾರೆ. ಉಮಯ್ಯ, ಅಬೂಜಹಲ್ ಶಿಕ್ಷಿಸುತ್ತಾರೆ. ಓರ್ವನು ಸತ್ಯವಿಶ್ವಾಸಿಯ ಸೊತ್ತನ್ನು ಅಪಹರಿಸಿದಾಗ ಮತ್ತೋರ್ವ ಅವನನ್ನು ಸೆರೆಮನೆಗೆ ಕಳುಹಿಸುತ್ತಾನೆ. ಓರ್ವನು ಆತನ ಸ್ವಾಭಿಮಾನವನ್ನು ನಿಂದಿಸಿ ಕೆಣಕಿದರೆ ಮತ್ತೋರ್ವ ಆತನ ಮನೆಯನ್ನು ಒಡೆಯುತ್ತಾನೆ. ಮತ್ತೊಬ್ಬ ಆತನ ಸಂತಾನಗಳನ್ನು ಕೊಲ್ಲುತ್ತಾನೆ. ಎಲ್ಲರೂ ಒಂದೇ ದಾರಿಯಲ್ಲಿ ಸಾಗುತ್ತಾರೆ. ಅಕ್ರಮಿಗಳ ಹಾದಿಯೂ ಕೊನೆಯಾಗದು.