ಸನ್ಮಾರ್ಗ ವಾರ್ತೆ
ಕ್ಸಿನ್‌ಜಿಯಾಂಗ್: ಕಠಿಣ ಕೊರೋನ ನಿರ್ಬಂಧಗಳಿಂದ ತತ್ತರಿಸಿರುವ ಚೀನಾದ ನಾಗರಿಕರು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ. ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಜನರ ಪ್ರತಿಭಟನೆ ಭುಗಿಲೆದ್ದಿದ್ದು “ಲಾಕ್‌ಡೌನ್ ಕೊನೆಗೊಳಿಸಿ” ಎಂಬ ಕೂಗು ಕೇಳಿ ಬರುತ್ತಿದೆ. ಗುರುವಾರ ರಾತ್ರಿ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಹತ್ತು ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಪ್ರತಿಭಟನೆ ತೀವ್ರತೆ ಪಡೆದುಕೊಂಡಿದೆ.
ಕ್ಸಿನ್‌ಜಿಯಾಂಗ್ ಪ್ರದೇಶದ ಉರುಮ್ಕಿಯಲ್ಲಿ ಸುಮಾರು 4 ಮಿಲಿಯನ್ ಜನರು ವಾಸವಾಗಿದ್ದು ಇವರ ಮೇಲೆ ಕಠಿಣ ಲಾಕ್‌ಡೌನ್ ವಿಧಿಸಲಾಗಿದೆ. ಇಲ್ಲಿ ನೂರು ದಿನಗಳ ಕಾಲ ಪಟ್ಟಣದಿಂದ ಹೊರಹೋಗುವ ಅಥವಾ ಪಟ್ಟಣಕ್ಕೆ ಬರುವುದನ್ನು ನಿಷೇಧಿಸಲಾಗಿದೆ.
ಕ್ಸಿನ್ ಜಿಯಾoಗ್‌ನಲ್ಲಿ ಸುಮಾರು 10 ಮಿಲಿಯನ್ ಉಯಿಘರ್ ಮುಸ್ಲಿಮರಿದ್ದಾರೆ. ಮುಸ್ಲಿಮ್ ಜನಾಂಗೀಯ ಅಲ್ಪಸಂಖ್ಯಾತರರು ನೆಲೆಸಿದ ಸ್ಥಳಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಾನವಹಕ್ಕು ಸಂಸ್ಥೆಗಳು ಧ್ವನಿ ಎತ್ತಿದ್ದು, ಸರಕಾರ ಈ ಆರೋಪಗಳನ್ನು ತಿರಸ್ಕರಿಸುತ್ತಿದೆ.
ಆರ್ಥಿಕ ನಗರಿಯಾಗಿ ಗುರುತಿಸಿಕೊಂಡಿರುವ ಶಾಂಘೈನಲ್ಲಿ ಕೊರೋನಾ ಪರೀಕ್ಷೆಯನ್ನು ತೀವ್ರಗೊಳಿಸಲಾಗಿದ್ದು, ಹೋಟೆಲ್, ಲೈಬ್ರರಿ, ಅಂಗಡಿಗಳಿಗೆ ಪ್ರವೇಶಿಸುವುದಕ್ಕೂ ಕೊರೋನಾ ಸರ್ಟಿಫಿಕೇಟ್ ಹಾಗೂ ಹೆಲ್ತ್ ಕೋಡ್‌ಗಳನ್ನು ಕಡ್ಡಾಯಗೊಳಿಸಲಾಗಿದೆ.