ಮಧ್ಯಂತರ ಜಾಮೀನು ಕೋರಿ ಉಮರ್ ಖಾಲಿದ್ ಅರ್ಜಿ: ದೆಹಲಿ ಪೊಲೀಸರಿಂದ ವಿರೋಧ

0
146

ಸಹೋದರಿಯ ಮದುವೆಗೆ ಹಾಜರಾಗಲು ಅವಕಾಶ ಕೋರಿ ಅರ್ಜಿ

ಸನ್ಮಾರ್ಗ ವಾರ್ತೆ

ನವದೆಹಲಿ: ಪೌರತ್ವ ಹೋರಾಟದ ನೇತೃತ್ವ ವಹಿಸಿದ್ದಕ್ಕಾಗಿ ಗಲಭೆ ಸಂಚಿನ ಪ್ರಕರಣದಲ್ಲಿ ಯುಎಪಿಎ ಆರೋಪ ಹೊತ್ತಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ದೆಹಲಿ ಪೊಲೀಸರು ವಿರೋಧಿಸಿದ್ದಾರೆ. ಉಮರ್ ಖಾಲಿದ್‌ಗೆ ಜಾಮೀನು ನೀಡಿದರೆ, ಅದು ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ತಿಳುವಳಿಕೆಯನ್ನು ಹರಡುತ್ತದೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅರ್ಜಿಯಲ್ಲಿ ನವೆಂಬರ್ 29ರಂದು ಸೆಷನ್ಸ್ ಕೋರ್ಟ್ ತೀರ್ಪು ನೀಡಲಿದೆ.

ಮುಂದಿನ ತಿಂಗಳು ನಡೆಯಲಿರುವ ತನ್ನ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಎರಡು ವಾರಗಳ ಕಾಲ ಮಧ್ಯಂತರ ಜಾಮೀನು ಕೋರಿದ್ದರು.

ಯುಎಪಿಎ ಸೇರಿದಂತೆ ಗಂಭೀರ ಆರೋಪಗಳನ್ನು ಹೊತ್ತಿರುವ ಉಮರ್ ಖಾಲಿದ್‌ಗೆ ಜಾಮೀನು ನೀಡಬಾರದು ಎಂದು ಪೊಲೀಸರು ಹೇಳಿದ್ದಾರೆ. ಉಮರ್ ಖಾಲಿದ್ ಅವರ ಪೋಷಕರು ಅವರ ಸಹೋದರಿಯ ಮದುವೆಗೆ ಬೇಕಾದ ಎಲ್ಲವನ್ನೂ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಖಾಲಿದ್ ಜಾಮೀನಿನ ಮೇಲೆ ಬಿಡುಗಡೆಯಾದರೆ, ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ತಿಳುವಳಿಕೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಸಮಾಜದಲ್ಲಿ ಗೊಂದಲಗಳು ಉಂಟಾಗುತ್ತವೆ. ಸಾಕ್ಷಿಗಳ ಮೇಲೆಯೂ ಪ್ರಭಾವ ಬೀರಬಹುದು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.