ಅಸ್ಸಾಂ: ಕಸ್ಟಡಿಯಲ್ಲಿ‌ ನಗ್ನಗೊಳಿಸಿ ಮೂವರು ಮಹಿಳೆಯರಿಗೆ ಪೊಲೀಸರಿಂದ ಥಳಿತ; ಮಹಿಳೆಗೆ ಗರ್ಭಪಾತ- ಮಾನವ ಹಕ್ಕು ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲು

0
796

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.19: ಅಸ್ಸಾಮಿನಲ್ಲಿ ಗರ್ಭಿಣಿ ಸಹಿತ ಮೂವರು ಮಹಿಳೆಯರನ್ನು ಪೊಲೀಸ್ ಠಾಣೆಯಲ್ಲಿ ನಗ್ನಗೊಳಿಸಿ ಹೊಡೆದ ಘಟನೆ ನಡೆದಿದ್ದು, ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದೆ. ಹಿಂದೂ ಯುವತಿಯೊಂದಿಗೆ ಓಡಿ ಹೋದ ಮುಸ್ಲಿಮ್ ಯುವಕ ಸಿಗದ್ದರಿಂದ ಆತನ ಸಹೋದರಿಯರಾದ ಮಿನುವಾರ ಬೇಗಂ, ಸನುವಾರ ಬೇಗಂ, ರುಮೇಲಾರನ್ನು ಪೊಲೀಸರು ವಶಕ್ಕೆ ಪಡೆದು ನಗ್ನಗೊಳಿಸಿ ಹೊಡೆದಿದ್ದು ಔರಂಗ್ ಜಿಲ್ಲೆ ಬುರ್‍ಹಾ ಪೊಲೀಸ್ ಔಟ್‍ಪೋಸ್ಟ್‌ನಲ್ಲಿ ಒಂದು ರಾತ್ರೆ ಇಡೀ ಕೂಡಿ ಹಾಕಿ ಪೊಲೀಸರು ಕ್ರೂರ ಕೃತ್ಯವೆಸಗಿದ್ದಾರೆ.

ಗರ್ಭಿಣಿ ಮಹಿಳೆಗೆ ಗರ್ಭಪಾತವಾಗಿದ್ದು ಮಹಿಳೆಯರು ಪತ್ರಿಕಾಗೋಷ್ಠಿ ನಡೆಸಿ ಘಟನೆಯನ್ನು ಬಹಿರಂಗಗೊಳಿಸಿದ ಬಳಿಕ ಹೊರಜಗತ್ತಿಗೆ ಪೊಲೀಸರ ಕ್ರೌರ್ಯ ತಿಳಿದು ಬಂದಿದೆ.

ಪೊಲೀಸರ ದುರ್ವರ್ತನೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಅಸ್ಸಾಂ ಸರಕಾರದಿಂದ ವರದಿ ಕೇಳಿದೆ.ಘಟನೆ ನಿಜವಾಗಿದ್ದರೆ ಗಂಭೀರ ಮಾನವಹಕ್ಕು ಉಲ್ಲಂಘನೆ ನಡೆದಿದೆ ಎಂದು ಆಯೋಗ ಹೇಳಿತು.

ಸೆಪ್ಟಂಬರ್ ಎಂಟರಂದು ಘಟನೆ ನಡೆದಿದ್ದು ಇದಾಗಿ ಎರಡು ದಿವಸದ ಬಳಿಕ ಯುವತಿಯರು ಜಿಲ್ಲಾ ಪೊಲೀಸ್ ಸೂಪರಿಡೆಂಟ್‍ಗೆ ದೂರು ನೀಡಿದರು ಕ್ರಮ ಜರುಗಿಸಿರಲಿಲ್ಲ. ನಂತರ ಮಹಿಳೆಯರು ಪತ್ರಿಕಾಗೋಷ್ಠಿ ನಡೆಸಿ ಘಟನೆಯನ್ನು ಬಹಿರಂಗಪಡಿಸಿದ್ದರು.

ಘಟನೆ ವಿವಾದವಾಗಿದ್ದರಿಂದ ಕಳೆದ ದಿವಸ ಇಬ್ಬರು ಅಧಿಕಾರಿಗಳನ್ನು ಅಸ್ಸಾಂ ಸರಕಾರ ಅಮಾನತುಗೊಳಿಸಿತು. ಗರ್ಭಿಣಿಯೆಂದು ಮಹಿಳೆ ಹೇಳಿದರೂ ಕೆಳಹೊಟ್ಟೆಗೆ ಹೊಡೆದಿದ್ದರು. ಖಾಸಗಿ ಭಾಗಗಳನ್ನು ಸ್ಪರ್ಸಿಸಿದ್ದರು. ಬಂದೂಕು ತೋರಿಸಿ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಪೊಲೀಸರ ಕ್ರೌರ್ಯಕ್ಕೊಳಗಾದ ಮಹಿಳೆಯರು ತಿಳಿಸಿದ್ದಾರೆ.