ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.19: ಕೇಂದ್ರ ಸರಕಾರ ಜಾರಿಗೆ ತಂದಿರುವ ಮೋಟಾರು ವಾಹನ ಕಾನೂನು ತಿದ್ದುಪಡಿ ವಿರೋಧಿಸಿ ದಿಲ್ಲಿಯಲ್ಲಿ ಗುರುವಾರ ವಾಹನ ಮುಷ್ಕರ ನಡೆಯುತ್ತಿದೆ.
ವಾಹನದ ಮಾಲಕರ 41 ಸಂಘಟನೆಗಳ ಒಕ್ಕೂಟವಾದ ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್ಪೋರ್ಟ್ ಅಸೋಸಿಯೇಶನ್ ಮುಷ್ಕರ ಘೋಷಿಸಿದೆ. ಟ್ರಕ್ , ಟ್ಯಾಕ್ಸಿ, ಆನ್ಲೈನ್ ಟ್ಯಾಕ್ಸಿ, ಆಟೊ, ಖಾಸಗಿ ಬಸ್ಸುಗಳು ಮುಷ್ಕರದಲ್ಲಿ ಭಾಗವಹಿಸಲಿವೆ ಎಂದು ದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.
ಮುಷ್ಕರದೊಂದಿಗೆ ಸಹಕರಿಸುವಂತೆ ಶಾಲಾ ಬಸ್ ಮಾಲಕರಿಗೂ ಮನವಿ ಮಾಡಲಾಗಿದೆ. ತೆರಿಗೆಯಲ್ಲಿ ಭಾರೀ ಹೆಚ್ಚಳ, ದಂಡದಲ್ಲಿ ಆದ ತೀವ್ರ ಹೆಚ್ಚಳವನ್ನು ವಾಹನ ಮಾಲಕರಿಂದ ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೋರಾಟವನ್ನು ಬಲಪಡಿಸುತ್ತೇವೆ. ಇದರ ಅಂಗವಾಗಿ ದಿಲ್ಲಿಗೆ ಬರುವ ವಾಹನಗಳನ್ನು ಗಡಿ ಪ್ರದೇಶದಲ್ಲಿಯೇ ತಡೆಯುತ್ತೇವೆ ಎಂದು ಹೋರಾಟ ಸಮಿತಿ ತಿಳಿಸಿದೆ.ಮುಷ್ಕರಕ್ಕಿಂತ ಮುಂಚಿತವಾಗಿ ಸಂಘಟನೆಯು ದಿಲ್ಲಿಯ ಜಂತರ್ಮಂತರ್ನಲ್ಲಿ ಸೋಮವಾರ ಪ್ರತಿಭಟನೆಯನ್ನೂ ನಡೆಸಿದೆ.












