ಹೈದರಾಬಾದ್, ಜೂ.26: ನಿರುಪಯುಕ್ತ ಪ್ಲಾಸ್ಟಿಕ್ ಬಳಸಿ ಪೆಟ್ರೋಲ್ ,ಡೀಸಲ್ ತಯಾರಿಸುವ ಕಂಪೆನಿಯನ್ನು ಸ್ಥಾಪಿಸಲು ಹೈದರಾಬಾದಿನ 45 ವರ್ಷದ ಇಂಜಿನಿಯರ್ ಪ್ರೊ. ಸತೀಶ್ ಕುಮಾರ್ ಮುಂದೆ ಬಂದಿದ್ದಾರೆ. ಜೊತೆಗೆ ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನವೂ ಸಾಧ್ಯ ಎಂದು ಅವರು ಹೇಳುತ್ತಿದ್ದಾರೆ. 2016ರಿಂದ ಈ ಕ್ಷೇತ್ರದಲ್ಲಿ ಪ್ರಯೋಗ ನಡೆಸುತ್ತಾ ಬಂದ ಸತೀಶ್ ರ ಕಂಪೆನಿ ಐವತ್ತು ಟನ್ ಪ್ಲಾಸ್ಟಿಕನ್ನು ಇಂಧನವಾಗಿ ಪರಿವರ್ತಿಸಿದ್ದೇವೆ ಎಂದು ಹೇಳಿಕೊ೦ಡಿದೆ. ಮರು ಬಳಕೆ ಸಾಧ್ಯವಿಲ್ಲದ 500 ಕಿಲೊ ಪ್ಲಾಸ್ಟಿಕ್ನಿಂದ 400 ಲೀಟರ್ ಇಂಧನ ನಿರ್ಮಿಸಲು ಸಾಧ್ಯವಿದೆ ಎಂದು ಇವರು ಹೇಳುತ್ತಾರೆ. ಆದರೆ, ಈಗ ಈ ಇಂಧನವನ್ನು ವಾಹನಗಳಲ್ಲಿ ಬಳಕೆಯಾಗುವಂತೆ ಅಭಿವೃದ್ಧಿಪಡಿಸಲಾಗಿಲ್ಲ. ಮುಂದೆ ಪೆಟ್ರೋಲ್, ಡೀಸೆಲ್, ವಿಮಾನ ಇಂಧನವಾಗಿ ಇದನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ ಎಂದು ಇವರು ಹೇಳುತ್ತಿದ್ದಾರೆ.
ಪ್ಲಾಸ್ಟಿಕ್ ಪೈರೊಲಿಸಿಸ್ ಎಂಬ ಮೂರು ಹಂತದ ಸಂಸ್ಕರಣೆಯ ಮೂಲಕ ಇಂಧನವನ್ನು ಪ್ರತ್ಯೇಕಿಸಲಾಗುತ್ತಿದೆ. ಪ್ರಾದೇಶಿಕ ಉದ್ಯಮದಲ್ಲಿ ಈ ಡೀಸೆಲ್ ಉಪಯೋಗಗೊಳ್ಳುತ್ತಿದೆ. ದಿನದಲ್ಲಿ 200 ಕಿಲೊ ಪ್ಲಾಸ್ಟಿಕ್ ಸಂಸ್ಕರಣೆ ನಡೆಸಿ ಇಂಧನವಾಗಿ ಲೀಟರಿಗೆ 50 ರೂಪಾಯಿ ಬೆಲೆಯಲ್ಲಿ ನೀಡುತ್ತಿದ್ದಾರೆ. ಪಿವಿಸಿ ಪೆಟ್ ಹೊರತಾದ ಎಲ್ಲ ಪ್ಲಾಸ್ಟಿಕ್ಗಳನ್ನು ಪ್ಲಾಸ್ಟಿಕ್ ಪೈರೋಲಿಸಿಸ್ ಮೂಲಕ ಇಂಧನವಾಗಿ ಇವರು ಪರಿವರ್ತಿಸುತ್ತಿದ್ದಾರೆ.












