ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಮದನಿ ಕಾಲನಿಯಲ್ಲಿ ಜೂನ್ 23ರ ಭಾನುವಾರ ಮಧ್ಯಾಹ್ನ ಜೂನ್ 23ರ ಅದಿತ್ಯವಾರ ಮದ್ಯಾಹ್ನ ಎರಡು ಅಂತಸ್ತಿನ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಅಗ್ನಿ ಅವಘಡ ಸಂಭವಿಸಿತ್ತು. ಈ ಸಮಯದಲ್ಲಿ ಮಹಮ್ಮದ್ ಝೈದ್ ಠಾಣೆದಾರ ಎಂಬ ಯುವಕ ಜೀವದ ಹಂಗು ತೊರೆದು ಮನೆಯೊಳಗೆ ಸಿಲುಕಿಕೊಂಡಿದ್ದ ಮೂವರ ಪ್ರಾಣ ಉಳಿಸಿ ಎಲ್ಲರ ಪ್ರಶಂಸೆಗೆ ಪಾತ್ರನಾದ. ಇವರು ಜಮಾಅತೆ ಇಸ್ಲಾಮಿ ಹಿಂದ್ ನ ಅಂಗಸಂಸ್ಥೆಯಾದ ಹೆಚ್. ಆರ್. ಎಸ್. (ಹುಮಾನಿಟೇರಿಯನ್ ರಿಲೀಫ್ ಸೊಸೈಟಿ) ಸದಸ್ಯರಾಗಿದ್ದು, ಸ್ಟೂಡೆಂಟ್ ಇಸ್ಲಾಮಿಕ್ ಓರ್ಗನೈಸೇಶನ್ ನ ಸದಸ್ಯರೂ ಹೌದು. ಘಟನೆಯ ಕುರಿತಂತೆ ಸನ್ಮಾರ್ಗ ಪತ್ರಿಕೆಯು ಅವರನ್ನು ಮಾತಾಡಿಸಿತು.
ಪ್ರಶ್ನೆ : ತಮ್ಮ ಜೀವವನ್ನು ಒತ್ತೆಯಿಟ್ಟು ಮೂವರ ಪ್ರಾಣ ಉಳಿಸಿದ್ದೀರಿ. ಅಭಿನಂದನೆಗಳು. ಈ ಘಟನೆಯ ಬಗ್ಗೆ ವಿವರಿಸುವಿರಾ?
ಉತ್ತರ: ನನ್ನ ಮನೆ ಹುಬ್ಬಳ್ಳಿಯ ಮದನಿ ಕಾಲನಿಯಲ್ಲಿದೆ. ನನ್ನ ಮನೆಯ ಹಿಂಭಾಗದಲ್ಲಿ ಇರುವ ಎರಡು ಅಂತಸ್ತಿನ ಕಟ್ಟಡದಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಶಬ್ದ, ಗೋಳಾಟ ಕೇಳಿ ಅತ್ತ ಧಾವಿಸಿದೆ. ಬೆಂಕಿ ಮನೆಯನ್ನು ಆವರಿಸಿತ್ತು. ಮನೆಯೊಳಗಡೆ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬುದನ್ನು ಅರಿತುಕೊಂಡು ಮನೆಯೊಳಗಡೆ ಹೇಗೆ ಪ್ರವೇಶಿಸಬಹುದೆಂಬುದನ್ನು ಪರಿಶೀಲಿಸಿ ದಾರಿಯನ್ನು ಕಂಡುಕೊಂಡೆ. ಪಕ್ಕದ ಮನೆಯಲ್ಲಿ ಬೋರ್ ವೆಲ್ ಇತ್ತು. ಪೈಪ್ ಮುಖಾಂತರ ನೀರು ಹಾಯಿಸಿ ಬೆಂಕಿಯನ್ನು ಆರಿಸುತ್ತಾ ದಾರಿ ಮಾಡಿಕೊಂಡೆ. ಹತ್ತಿಯ ದೊಡ್ಡ ಟವೆಲ್ ತೆಗೆದು ಸಂಪೂರ್ಣ ಒದ್ದೆ ಮಾಡಿ ಮೈ ಪೂರ್ಣ ಕವಚದಂತೆ ಸುತ್ತಿಕೊಂಡು ಬೆಂಕಿಯಿಂದ ಆವರಿಸಿದ ಕೋಣೆಯೊಳಗೆ ಹೋದೆ. ಓಳಗಡೆ ಓರ್ವ ಮಹಿಳೆ ಮತ್ತು ಈರ್ವರು ಪುರುಷರು ಬೆಂಕಿಯ ನಡುವೆ ಸಿಲುಕಿ ಹೊರಬರಲಾರದೆ ಪ್ರಾಣ ಭಯದಿಂದ ಚಡಪಡಿಸುತ್ತಿದ್ದರು. ಧೈರ್ಯದಿಂದ ಅವರತ್ತ ಧಾವಿಸಿ ಅಲ್ಲಿಂದ ಒಬ್ಬೊಬ್ಬರನ್ನೇ ಹೊರತಂದೆ. ಅಲ್ ಹಮ್ದುಲುಲ್ಲಾಹ್.
ಈ ಸಂದರ್ಭದಲ್ಲಿ ಪೋಲೀಸರ ಸಹಕಾರ ಮರೆಯಲೇಬಾರದು. ಅದರಲ್ಲೂ ಗೋಕುಲ್ ಠಾಣೆಯ ಇನ್ಸ್ ಪೆಕ್ಟರ್ ಡಿ ಪಿ ನಿಂಭಾಳ್ಕರ್ ರವರು ತುಂಬಾ ಸಹಕಾರ ನೀಡಿದರು. ಆದರೆ ಅಗ್ನಿಶಾಮಕ ದಳದವರು ತಲುಪಿದಾಗ ನಮ್ಮ ರಕ್ಷಣಾ ಕಾರ್ಯ ಮುಗಿದಿತ್ತು. ಬಹಳ ಬೇಸರದ ಸಂಗತಿಯೆಂದರೆ ಹೆಚ್ಚಿನವರು ಈ ಘಟನೆಯನ್ನು ಮೊಬೈಲ್ ಮೂಲಕ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದರೇ ಹೊರತು ರಕ್ಷಣಾ ಕಾರ್ಯದತ್ತ ಮುನ್ನುಗ್ಗಲಿಲ್ಲ.
ನನ್ನ ಈ ಪ್ರಯತ್ನಕ್ಕೆ ಹೆಚ್. ಆರ್. ಎಸ್. ನಲ್ಲಿ ನಾನು ಪಡೆದ ತರಬೇತಿಯೇ ಕಾರಣ. ಕಳೆದ ಒಂದು ವರ್ಷದಿಂದ ಹೆಚ್,ಆರ್,ಎಸ್, ಸದಸ್ಯನಾಗಿದ್ದೇನೆ. ಹೆಚ್. ಆರ್. ಎಸ್. ಮೂಲಕ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯ ಕೆಲವು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ತರಬೇತಿ ಪಡೆದಿದ್ದೆ. ಆ ಆತ್ಮವಿಶ್ವಾಸ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಮಹತ್ತರ ಪಾತ್ರ ವಹಿಸಿತು. ಅಲ್ಲಾಹನ ಅನುಗ್ರಹದಿಂದ ಮೂರು ಜೀವ ಉಳಿಸುವಲ್ಲಿ ಸಹಕಾರಿಯಾಯಿತು.
ನಾನು 2012 ರಿಂದ ಎಸ್.ಐ.ಓ. ಸದಸ್ಯನಾಗಿದ್ದು, ಈಗ ಐಟಿಐ ವ್ಯಾಸಂಗ ಪೂರ್ಣಗೊಳಿಸಿದ್ದೇನೆ. ಉದ್ಯೋಗದ ಹುಡುಕಾಟದಲ್ಲಿದ್ದೇನೆ.
ಗೋಕುಲ್ ಠಾಣೆಯ ಇನ್ಸ್ ಪೆಕ್ಟರ್ ಡಿ ಪಿ ನಿಂಬಾಳ್ಕರ್ ಮತ್ತು ಹೆಚ್ ಆರ್ ಎಸ್ ಶ್ಲಾಘನೆ
ಮಹಮ್ಮದ್ ಝೈದ್ ಠಾಣೆದಾರ ಅವರ ಸಾಹಸ ಮೆಚ್ಚುವಂಥದ್ದು. ಒಳಗಡೆ ಬೆಂಕಿ ಧಗಧಗನೆ ಉರಿಯುತ್ತಿದ್ದಾಗ ಅವರು ಒಳಗೆ ಸಿಲುಕಿದವರನ್ನು ಸುರಕ್ಷಿತವಾಗಿ ಎತ್ತಿಕೊಂಡು ಬಂದರು. ಅವರಲ್ಲಿರುವ ಸಮಯಪ್ರಜ್ಞೆ ಹಾಗೂ ಸಾಹಸ ಮನೋಭಾವ ಎಲ್ಲ ಯುವಕರಲ್ಲೂ ಬರುವಂತಾಗಬೇಕು ಎಂದು ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಗೋಕುಲ್ ಠಾಣೆಯ ಇನ್ಸ್ ಪೆಕ್ಟರ್ ಡಿ ಪಿ ನಿಂಬಾಳ್ಕರ್ ಪ್ರಶಂಸಿಸಿದ್ದಾರೆ. ಮಹಮ್ಮದ್ ಝೈದ್ ಠಾಣೆದಾರ ಅವರ ಸಾಹಸ ಶ್ಲಾಘನಾರ್ಹವಾಗಿದ್ದು, ಇತರ ಕಾರ್ಯಕರ್ತರಿಗೆ ಮಹಮ್ಮದ್ ಝೈದ್ ಠಾಣೆದಾರ ಮಾದರಿಯಾಗಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರಕಡ ಹೇಳಿದ್ದಾರೆ.
















