ನಾನು ಹಿಂದು, ಬಿಜೆಪಿಯ ಸರ್ಟಿಫಿಕೇಟ್ ಬೇಕಿಲ್ಲ; ಮಮತಾ ಬ್ಯಾನರ್ಜಿ ವಾಗ್ದಾಳಿ

0
719

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಶಾಸಕರ ನಡುವೆ ತೀವ್ರ ವಾಕ್ಸಮರವು ಕಾಣಿಸಿಕೊಂಡಿದ್ದು, ಸದನದಲ್ಲಿ ಗದ್ದಲ ಉಲ್ಬಣಗೊಂಡಿದೆ. ಮಮತಾ ಅವರು ಹಿಂದೂ ಮತ್ತು ಬಿಜೆಪಿ ನೀಡುವ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಎಂಸಿಯ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕಲಾಗುವುದು ಎಂದು ಹೇಳಿಕೆ ನೀಡಿದರು. ಇದಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, ಮುಸ್ಲಿಮರು ಗೆದ್ದರೆ ಅವರನ್ನು ವಿಧಾನಸಭೆಯಿಂದ ಹೊರಹಾಕುವುದೆಂದು ಹೇಗೆ ಹೇಳಬಹುದು? ರಾಜ್ಯದ ಜನಸಂಖ್ಯೆಯ 33% ರನ್ನು ಹೇಗೆ ವಜಾಗೊಳಿಸಬಹುದು? ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ಬಿಜೆಪಿ ನಿಲುವು ತಪ್ಪಾಗಿದೆ ಎಂದು ಕಿಡಿಕಾರಿದರು.

ಬಿಜೆಪಿಯ ವಿರುದ್ಧ ಹರಿಹಾಯ್ದ ಮಮತಾ ಬ್ಯಾನರ್ಜಿ, ನಾನೊಬ್ಬ ಹಿಂದೂ, ಅದಕ್ಕೆ ಬಿಜೆಪಿಯ ಪ್ರಮಾಣಪತ್ರ ಬೇಕಿಲ್ಲ ಎಂದು ತೀವ್ರ ಪ್ರತಿಕ್ರಿಯೆ ನೀಡಿದರು. ಬಿಜೆಪಿ ನಕಲಿ ಹಿಂದೂ ಧರ್ಮವನ್ನು ರಾಜ್ಯಕ್ಕೆ ಆಮದು ಮಾಡಿಕೊಳ್ಳುತ್ತಿದೆ ಮತ್ತು ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಕೋಮುವಾದಿ ಹೇಳಿಕೆಗಳನ್ನು ನೀಡಿ ರಾಜ್ಯದ ಜನರ ಗಮನವನ್ನು ಆರ್ಥಿಕ ಕುಸಿತ ಮತ್ತು ಉದ್ಯೋಗ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ ಎಂದು ಮಮತಾ ಆರೋಪಿಸಿದರು. ಭಾರತೀಯ ಪ್ರಜಾಪ್ರಭುತ್ವವು ಬಹುತ್ವ, ಜಾತ್ಯತೀತತೆ ಮತ್ತು ಸಾರ್ವಭೌಮತ್ವವನ್ನು ಆಧರಿಸಿದೆ. ದೇಶದ ನಾಗರಿಕರು ತಮ್ಮ ಧರ್ಮವನ್ನು ಸ್ವತಂತ್ರವಾಗಿ ಆಚರಿಸುವ ಹಕ್ಕನ್ನು ಹೊಂದಿದ್ದಾರೆ ಮತ್ತು ಅದನ್ನು ಬಿಜೆಪಿ ಮೆಟ್ಟಿಲು ಹಾಕಲು ಯತ್ನಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಮಮತಾ ಅವರ ಈ ಮಾತುಗಳ ನಂತರ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಯಾಗಿ, ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಟಿಎಂಸಿ ಶಾಸಕರು ಪ್ರತಿಯಾಗಿ ಬಿಜೆಪಿ ವಿರುದ್ಧ ಧ್ವನಿ ಎತ್ತಿದರು. ಸಭಾಧ್ಯಕ್ಷರ ಮಧ್ಯಸ್ಥಿಕೆ ಬಳಿಕವೇ ಸದನದ ಕಾರ್ಯಚಟುವಟಿಕೆಗಳು ಮುಂದುವರಿದವು. ಈ ರಾಜಕೀಯ ವಾಕ್ಸಮರ ಮುಂಬರುವ ಚುನಾವಣೆಗೆ ತೀವ್ರತೆ ಹೆಚ್ಚಿಸಲಿದೆ.